ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಗುಂಡಿಯಲ್ಲಿ ಬಿದ್ದು ಬಾಲಕರ ಸಾವು: ಆಕ್ರಂದನ

Vishwanath S
Updated On : 15 Sept 2013, 12:17 pm

ಧಾರವಾಡ: ಯಾವುದೇ ವಿಘ್ನಗಳಿಲ್ಲದೇ ಸಂಭ್ರದಿಂದ ಗಣೇಶನ ಹಬ್ಬ ಮುಗಿಯಿತು ಎಂಬ ನಿರಾಳ ಭಾವದಲ್ಲಿದ್ದ ನಗರದ ನಾಗರಿಕರಿಗೆ ಬೆಚ್ಚಿ ಬೀಳುವ ಸುದ್ದಿ ಎರಗಿ ಬಂದಿದೆ.
ಗಣೇಶ ವಿಗ್ರಹಗಳ ವಿಸರ್ಜನೆಗಾಗಿ ತೋಡಲಾಗಿದ್ದ ಗುಂಡಿಯಲ್ಲಿ ಶುಕ್ರವಾರ ಬೆಳಗ್ಗೆ ಪಟಾಕಿ ಆಟವಾಡುತ್ತಾ ಆಕಸ್ಮಿಕವಾಗಿ ಬಿದ್ದು ಮೃತರಾದ ಗಾಂಧಿನಗರದ ಪ್ರಜ್ವಲ ಹಾಗೂ ನಾಗರಾಜ ಮುಳಗುಂದ ಅವರ ಸಾವಿನ ಸುದ್ದಿ, ಬರೀ ಕುಟುಂಬದ ಸದಸ್ಯರಿಗೆ ಮಾತ್ರವಲ್ಲ ಇಡೀ ನಗರದ ಜನತೆಗೆ ಮರುಕ ತಂದಿದೆ.
ಶಿರಸಿಯ ಅಜ್ಜಿಯ ಮನೆಯಲ್ಲಿ ಖುಷಿ ಖುಷಿಯಿಂದ ಗಣೇಶನ ಹಬ್ಬ ಮುಗಿಸಿಕೊಂಡು ಆಗತಾನೇ ಧಾರವಾಡದ ಮನೆಗೆ ಬಂದಿದ್ದರು. ಬಂದು ಒಂದೇ ಗಂಟೆಯಲ್ಲಿ ಗಣೇಶನ ವಿಗ್ರಹಗಳಿಗಾಗಿ ತೋಡಿದ್ದ ಗುಂಡಿಗೆ ಅಣ್ಣ-ತಮ್ಮಂದಿರಿಬ್ಬರು ಬಲಿಯಾಗಿರುವುದು ಇಡೀ ನಗರವೇ ಮಮ್ಮುಲ ಮರಗುತ್ತಿದೆ. ಬಾಲಕರ ಸಾವಿನ ವಿಷಾದದೊಂದಿಗೆ ಹಬ್ಬವನ್ನು ಬೀಳ್ಕೊಡುವಂತಾಗಿದ್ದು ವಿಧಿಯ ಕರಾಳತೆಗೆ ಸಾಕ್ಷಿಯಾಯಿತು.
ಮನೆ ದೀಪ ಆರಿತು: ಮಕ್ಕಳಿಬ್ಬರೂ ನನ್ನ ಆಸ್ತಿಯಾಗಿದ್ದರು. ಅವರು ಚೆನ್ನಾಗಿ ಕಲಿಯಲೆಂದು ಶಿರಸಿಯಿಂದ ಧಾರವಾಡಕ್ಕೆ ಬಂದು ಆಟೋ ಓಡಿಸುತ್ತಾ ಜೀವಿಸುತ್ತಿದ್ದೆ. ಆದರೆ, ವಿಧಿಯಾಟ ನನ್ನ ಹಣೆಯ ಬರಹ ಬದಲಿಸಿತು. ನನ್ನ ಕನಸು ನುಚ್ಚುನೂರಾಯಿತು. ಮಕ್ಕಳೇ ಇಲ್ಲದಿದ್ದಾಗ ನಾವು ಬದುಕಿಯೂ ಸತ್ತಂತೆ. ಇಂದಿಗೆ ನನ್ನ ಮನೆಯ ದೀಪ ಆರಿಹೋಯಿತು. ಮಕ್ಕಳು ಆಟವಾಡುವ ಸ್ಥಳದಲ್ಲಿ ನೀರಿನ ಗುಂಡಿ ತೆಗೆಯಬೇಡಿ ಎಂದು ಹೇಳಿದರೂ ಅದನ್ನು ಕೇಳದೇ ಗುಂಡಿ ತೆಗೆದಿದ್ದಾರೆ. ಆ ನೀರಿನ ಗುಂಡಿಯೇ ಇಂದು ನನ್ನ ಮಕ್ಕಳ ಪ್ರಾಣಕ್ಕೆ ಎರವಾಯ್ತು. ಗುಂಡಿ ತೆಗೆಸಿದವರಿಗೆ ಶಿಕ್ಷೆಯಾಗಿ, ನನ್ನ ಮಕ್ಕಳ ಆತ್ಮಕ್ಕೆ ಶಾಂತಿ ದೊರೆಯಬೇಕು ಎಂದು ತಂದೆ ಪ್ರಕಾಶ ಮುಳಗುಂದ ಕಣ್ಮೀರಿಡುತ್ತಾ ಗುಂಡಿ ತೆಗೆದವರ ಮೇಲೆ ಹಿಡಿಶಾಪ ಹಾಕಿದರು.
ನಿಷ್ಕಾಳಜಿ ಯಾರದ್ದು: ಶುಕ್ರವಾರ ಐದು ದಿನದ ಗಣೇಶ ವಿಸರ್ಜನೆ ಅಂಗವಾಗಿ ಗಾಂಧಿನಗರದ ಯುವಕ ಮಂಡಳದ ವತಿಯಿಂದ ಪಾಲಿಕೆ ಪರವಾನಗಿ ಪಡೆಯದೇ ಗಣೇಶ ವಿಸರ್ಜನೆಗಾಗಿ ಸಮುದಾಯ ಭವನದ ಉದ್ಯಾನದಲ್ಲಿ ಆರು ಅಡಿಯ ನೀರಿನ ಗುಂಡಿ ತೆಗೆಯಲಾಗಿತ್ತು ಎನ್ನಲಾಗುತ್ತಿದೆ. ಗಣೇಶ ವಿಸರ್ಜನೆ ಮಾಡುವ ಸಂದರ್ಭ ಅದೇ ಗುಂಡಿಯಲ್ಲಿ ಸುಮಾರು 120 ಮನೆಯ ಗಣಪತಿ ಮೂರ್ತಿ ವಿಸರ್ಜನೆ ಮಾಡಿದ್ದಾರೆ. ನಂತರ ಅದಕ್ಕೆ ಸುರಕ್ಷತಾ ದೃಷ್ಟಿಯಿಂದ ಯಾವುದೇ ರೀತಿಯ ಕ್ರಮ ಕೈಗೊಳ್ಳದೇ ಬೇಜವಾಬ್ದಾರಿಯಿಂದ ಬರೀ ತಾಡಪತ್ರಿ ಮುಚ್ಚಿ ಹೋಗಿದ್ದಾರೆ. ಈ ಬೇಜವಾಬ್ದಾರಿಯೇ ಮಕ್ಕಳ ಸಾವಿಗೆ ಕಾರಣ. ಗುಂಡಿ ತೆಗೆದವರ ಮೇಲೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಅಲ್ಲದೇ, ಇನ್ನು ಮುಂದೆ ಈ ರೀತಿ ಎಲ್ಲಿಯೂ ಗುಂಡಿ ತೆಗೆಯುವ ಕಾರ್ಯ ಮಾಡದಂತೆ ಪಾಲಿಕೆ ಎಚ್ಚರಿಕೆ ನೀಡುವ ಅಗತ್ಯವಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ವಿದ್ಯಾಗಿರಿ ಠಾಣೆ ಪೊಲೀಸರು ಭೇಟಿ ನೀಡಿ ಮೃತ ಬಾಲಕರನ್ನು ಗುಂಡಿಯಿಂದ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿದರು. ಬಾಲಕರು ಅಸು ನೀಗಿದ ಸುದ್ದಿ ತಿಳಿಯುತ್ತಿದ್ದಂತೆಯೇ ಪ್ರದೇಶದ ಅಪಾರ ಪ್ರಮಾಣದ ಜನ ಆಗಮಿಸಿ ಬಾಲಕರ ಅಕಾಲಿಕ ಸಾವಿನ ಬಗ್ಗೆ ಖೇದ ವ್ಯಕ್ತಪಡಿಸಿದರು.
ಮೃತ ದುರ್ದೈವಿಗಳಿಬ್ಬರು ಅಣ್ಣ-ತಮ್ಮಂದಿರು
ಧಾರವಾಡ: ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ತೋಡಲಾಗಿದ್ದ ಗುಂಡಿಯೊಂದು ಇಬ್ಬರು ಪುಟ್ಟ ಸಹೋದರರ ಜೀವಕ್ಕೆ ಎರವಾದ ಹೃದಯ ವಿದ್ರಾವಕ ಘಟನೆ ನಗರದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
ಗಾಂಧಿನಗರದ ಏಳು ವರ್ಷದ ಪ್ರಜ್ವಲ ಮುಳಗುಂದ ಹಾಗೂ ಆತನ ತಮ್ಮ ಆರು ವರ್ಷದ ನಾಗರಾಜ ಮುಳಗುಂದ ಸಮೀಪದ ಸಮುದಾಯ ಭವನದ ಆವರಣದಲ್ಲಿ ಸುಮಾರು ಐದಾರು ಅಡಿ ಆಳ ತೋಡಲಾಗಿದ್ದ ಗುಂಡಿಯಲ್ಲಿ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆ.
ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಶುಕ್ರವಾರಕ್ಕೆ ಐದು ದಿನಗಳಾಗಿದ್ದು, ರಾತ್ರಿ ಗಾಂಧಿನಗರದ ಸುಮಾರು 120ಕ್ಕೂ ಹೆಚ್ಚು ಗಣೇಶ ವಿಗ್ರಹಗಳನ್ನು ಗುಂಡಿಯಲ್ಲಿಯೇ ವಿಸರ್ಜಿಸಲಾಗಿತ್ತು. ಗುಂಡಿ ತೋಡಿದ್ದ ಅಲ್ಲಿನ ಗಜಾನನ ಯುವಕ ಮಂಡಳಿಯವರು ಅದನ್ನು ಬರೀ ತಾಡಪತ್ರಿಯಿಂದ ಮುಚ್ಚಿ ಹೋಗಿದ್ದರು. ಬೆಳಗ್ಗೆ ಪಟಾಕಿ ಹಚ್ಚುತ್ತಾ ಆಟವಾಡಲು ಹೋದ ಈ ಇಬ್ಬರು ಬಾಲಕರು ಕಾಲು ಜಾರಿ ಗುಂಡಿಯಿಲ್ಲಿ ಬಿದ್ದಿದ್ದಾರೆಂದು ಸ್ಥಳೀಯರು ಪತ್ರಿಕೆಗೆ ತಿಳಿಸಿದರು.
ತಂದೆ ಆಟೋ ಚಾಲಕ: ಬಾಲಕರಿಬ್ಬರ ತಂದೆ ಪ್ರಕಾಶ ಮುಳಗುಂದ ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದು, ಪ್ರಜ್ವಲ ಗಾಂಧಿನಗರದ ಕಾನ್ವೆಂಟ್‌ನಲ್ಲಿ 1ನೇ ತರಗತಿ ಹಾಗೂ ತಮ್ಮ ನಾಗರಾಜ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದರು. ಇಬ್ಬರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂಬ ಉದ್ದೇಶದಿಂದ ಶಿರಸಿಯಿಂದ ಧಾರವಾಡಕ್ಕೆ ಬಂದು ಈ ಕುಟುಂಬ ವಾಸಿಸುತ್ತಿತ್ತು. ಅಲ್ಲದೆ, ಗಣೇಶನ ಹಬ್ಬಕ್ಕೆ ಶಿರಸಿಗೆ ಹೋಗಿ ಶನಿವಾರ ಬೆಳಗ್ಗೆಯೇ ಧಾರವಾಡಕ್ಕೆ ಆಗಮಿಸಿದ್ದರು. ಅಷ್ಟರಲ್ಲಿಯೇ ಈ ದುರ್ಘಟನೆ ನಡೆದಿದ್ದು, ಕುಟುಂಬಕ್ಕೆ ತುಂಬಲಾರದ ಹಾನಿಯಾಗಿದೆ.
ಬಾಲಕರು ಅಸುನೀಗಿದ ಸುದ್ದಿ ತಿಳಿಯುತ್ತಿದ್ದಂತೆಯೇ ಸುತ್ತಮುತ್ತಲಿನ ಅಪಾರ ಪ್ರಮಾಣದ ಜನ ಆಗಮಿಸಿ ಬಾಲಕರ ಅಕಾಲಿಕ ಸಾವಿನ ಬಗ್ಗೆ ಖೇದ ವ್ಯಕ್ತಪಡಿಸಿದರು. ಅಲ್ಲದೇ, ಈ ಘಟನೆಗೆ ಕಾರಣರಾದವರ ಮೇಲೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಘಟನಾ ಸ್ಥಳಕ್ಕೆ ಭೇಟಿ ನೀಡಿದ ವಿದ್ಯಾಗಿರಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement