ವೀರಶೈವ-ಲಿಂಗಾಯತ ರಿಟ್ ಅರ್ಜಿ ಇತ್ಯರ್ಥ
ಧಾರವಾಡ: ಲಿಂಗಾಯತ ಎಂದಷ್ಟೇ ಜಾತಿ ಪ್ರಮಾಣ ಕೇಳಿದರೆ ವೀರಶೈವ-ಲಿಂಗಾಯತ ಎಂಬುದಾಗಿ ಪ್ರಮಾಣ ಪತ್ರ ನೀಡಿದ್ದ ಬೈಲಹೊಂಗಲ ತಹಸೀಲ್ದಾರ್ ಕ್ರಮ ವಿರೋಧಿಸಿ ಇಲ್ಲಿನ ಹೈಕೋರ್ಟ್ನಲ್ಲಿ ಸಲ್ಲಿಕೆಯಾಗಿದ್ದ ರಿಟ್ ಅರ್ಜಿ ಇತ್ತೀಚೆಗೆ ಇತ್ಯರ್ಥಗೊಂಡಿದೆ.
ಬೈಲಹೊಂಗಲದ ವೀರೇಶ ಹಲಕಿ ಎಂಬುವರು ತಮಗೆ ಲಿಂಗಾಯತ ಎಂದು ಜಾತಿ ಪ್ರಮಾಣ ಕೊಡಿ ಎಂದು ಅಲ್ಲಿನ ತಹಸೀಲ್ದಾರ್ ಅವರಿಗೆ ಕೇಳಿದಾಗ, ವೀರಶೈವ-ಲಿಂಗಾಯತ ಎಂಬುದಾಗಿ ಕೊಟ್ಟಿದ್ದರು. ಅಲ್ಲದೆ, ಸರ್ಕಾರಿ ಸುತ್ತೋಲೆಯಲ್ಲಿ ಹೀಗೆ ಇರುವುದರಿಂದ ವೀರಶೈವ-ಲಿಂಗಾಯತ ಎಂದು ಕೊಡಬೇಕಾಗುತ್ತದೆ ಎಂದು ಅವರು ಸ್ಪಷ್ಟನೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ವೀರೇಶ ಅವರು ಸರ್ಕಾರಕ್ಕೆ ಬೆಳಗಾವಿ ಜಿಲ್ಲಾ ಲಿಂಗಾಯತ ಧರ್ಮ ಮಹಾಸಭಾದಿಂದ ಅರ್ಜಿ ಸಲ್ಲಿಸಿ ಹೈಕೋರ್ಟ್ ಮೆಟ್ಟಿಲು ಸಹ ಏರಿದ್ದರು.
ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ ಅವರಿದ್ದ ಏಕಸದಸ್ಯ ಪೀಠ ಅರ್ಜಿ ವಿಚಾರಣೆ ನಡೆಸಿ, ರಿಟ್ ಅರ್ಜಿಯಲ್ಲಿ ಲಿಂಗಾಯತ ಮಹಾಸಭಾ ಪಕ್ಷಗಾರ ಇಲ್ಲ. ಆದ್ದರಿಂದ ಸ್ವತ-ರಿಟ್ ಅರ್ಜಿದಾರರೇ ನೇರವಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೆ ಅದನ್ನು ಎದುರುಗಾರ ಸರ್ಕಾರ ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿ ಆದೇಶ ನೀಡಿತು.
ರಿಟ್ ಅರ್ಜಿದಾರರ ಪರವಾಗಿ ನ್ಯಾಯವಾದಿ ಕೆ.ಎಸ್. ಕೋರಿಶೆಟ್ಟರ್ ವಕಾಲತು ವಹಿಸಿದ್ದರು.