ಹುಬ್ಬಳ್ಳಿ: ಎಗ್ಗಿಲ್ಲದೆ ಸಾಗಿದೆ ವೇಶ್ಯಾವಾಟಿಕೆ
ವಿಶೇಷ ವರದಿ
ಹುಬ್ಬಳ್ಳಿ: ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ. ಹುಬ್ಬಳ್ಳಿ ಕೆಲ ಲಾಡ್ಜ್ಗಳಂತೂ ವೇಶ್ಯಾವಾಟಿಕೆ ದಂಧೆಗಾಗಿಯೇ ತಲೆ ಎತ್ತಿವೆ.
ಹೌದು, ಹುಬ್ಬಳ್ಳಿಯಲ್ಲಿ ಎಂದೂ ಕಂಡರಿಯದಷ್ಟರ ಮಟ್ಟಿಗೆ ವೇಶ್ಯಾವಾಟಿಕೆ ದಂಧೆ ವ್ಯಾಪಿಸಿದೆ. ದಿನ-ರಾತ್ರಿ ಎಂಬ ಭೇದವಿಲ್ಲದೇ ಖುಲ್ಲಂ ಖುಲ್ಲಾ ದಂಧೆ ನಡೆಯುತ್ತಿದೆ. ಪ್ರವಾಸಿಗರು ಬರುವ ಮೂಲಕ ಲಾಡ್ಜ್ಗಳು ವ್ಯವಹಾರ ಮಾಡಬೇಕು. ಆದರೆ, ಇಲ್ಲಿ ಪ್ರವಾಸಿಗರ ಬದಲಾಗಿ ವೇಶ್ಯಾವೃತ್ತಿಯೇ ಪ್ರಮುಖ ಉಪಕಸುಬನ್ನಾಗಿಸಿಕೊಂಡಿದ್ದಾರೆ ಕೆಲ ಲಾಡ್ಜ್ಗಳ ಮಾಲೀಕರು.
ಎಲ್ಲೆಲ್ಲಿ ದಂಧೆ: ಹುಬ್ಬಳ್ಳಿ ಹೃದಯ ಭಾಗದಲ್ಲಿರುವ ಲಾಡ್ಜ್ಗಳಲ್ಲಿ ವೇಶ್ಯಾವಾಟಿಕೆಯ ದಂಧೆ ನಡೆಯುತ್ತಿದೆ. ಜನತಾ ಬಜಾರ್, ಹೊಸೂರ ವೃತ್ತ, ಸ್ಟೇಶನ್ ರಸ್ತೆಯ ಅಕ್ಕಪಕ್ಕದಲ್ಲಿರುವ ಲಾಡ್ಜ್, ಶಹರ ಪೊಲೀಸ್ ಠಾಣೆಯ ಕೂಗಳತೆಯ ದೂರದಲ್ಲಿರುವ ಲಾಡ್ಜ್ಗಳಲ್ಲಿ ದಂಧೆ ವ್ಯಾಪಕವಾಗಿ ನಡೆಯುತ್ತಿದೆ.
ಈ ಲಾಡ್ಜ್ಗಳಲ್ಲಿ ದಂಧೆ ಯಾವ ಅಂಜಿಕೆ ಅಳುಕಿಲ್ಲದೇ ಖುಲ್ಲಂ ಖುಲ್ಲಾ ನಡೆಯುತ್ತಿದೆ. ಲಾಡ್ಜ್ಗಳಲ್ಲಿಯೇ ಬೀಡುಬಿಟ್ಟಿರುವ ಹುಡುಗಿಯರನ್ನು ಪರಿಚಯಿಸುವ ಮಾಲೀಕರು ಹುಡುಗಿಯರನ್ನು ಆಯ್ಕೆ ಮಾಡಿಕೊಳ್ಳಲು ಸೂಚಿಸುತ್ತಾರೆ. ಸಾಲದ್ದಕ್ಕೆ ಯಾವುದಕ್ಕೂ ಹೆದರಬೇಡಿ ಪೊಲೀಸರಿಗೆ ತಾವು ಹಫ್ತಾ ನೀಡುತ್ತಿದ್ದೇವೆ ಎನ್ನುವ ಮೂಲಕ ಪಾಪ ಕೃತ್ಯಕ್ಕೆ ಪ್ರಚೋದಿಸುತ್ತಿದ್ದಾರೆ.
ರಾಜ್ಯ-ಪರ ರಾಜ್ಯ ಬೆಡಗಿಯರು: ವೇಶ್ಯಾವಾಟಿಕೆ ದಂಧೆ ನಡೆಸುವ ಹುಬ್ಬಳ್ಳಿಯ ಲಾಡ್ಜ್ಗಳಿಗೆ ಲೆಕ್ಕವಿಲ್ಲದಷ್ಟು ರಾಜ್ಯ ಪರ ರಾಜ್ಯದ ಬೆಡಗಿಯರು ಬೀಡುಬಿಟ್ಟಿದ್ದಾರೆ. ಈ ಪೈಕಿ ಮುಂಬೈ, ಆಂಧ್ರಪ್ರದೇಶ, ಬೆಂಗಳೂರು, ಬಳ್ಳಾರಿ, ಗೋವಾದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದರೊಟ್ಟಿಗೆ ಹೊಟ್ಟೆಪಾಡು ಕಷ್ಟಕರವಾಗಿರುವವರನ್ನು ಬಲೆ ಬೀಸಿ ಅನೈತಿಕತೆಯ ಕೂಪಕ್ಕೆ ಕರೆತಂದವರೂ ಇದ್ದಾರೆ. ಇವರೆಲ್ಲ ಹುಬ್ಬಳ್ಳಿ ಸುತ್ತಮುತ್ತಲಿನ ಹಳ್ಳಿಯವರು ಎಂಬುವುದು ಗಮನಾರ್ಹ.
ಇಂಥ ಬೆಡಗಿಯರನ್ನು ನೋಡಲೆಂದೇ ರು. 50 ಖರ್ಚು ಮಾಡಬೇಕು. ಅನೈತಿಕತೆಗಿಳಿಯಬೇಕಾದರೆ ರು. 500ರಿಂದ ಹಿಡಿದು ರು. 3 ಸಾವಿರದವರೆಗೆ ಹಣ ತೆರಬೇಕಾಗಿದೆ. ಇದೀಗ ಗಣೇಶ ಚೌತಿಯ ಸಂಭ್ರಮವಿರುವುದರಿಂದ ಪರ ಊರಿನಿಂದ ಇಲ್ಲಿಗೆ ಬರುವವರ ಸಂಖ್ಯೆಯೂ ಹೆಚ್ಚು. ಇದನ್ನು ಗಮನದಲ್ಲಿಟ್ಟುಕೊಂಡು ಭರ್ಜರಿ ದಂಧೆ ನಡೆಸಬೇಕೆಂದು ಹೆಚ್ಚಿನ ಸಂಖ್ಯೆಯಲ್ಲಿ ಬೆಡಗಿಯರನ್ನು ದಂಧೆ ನಡೆಸುವ ಲಾಡ್ಜ್ ಮಾಲೀಕರು ಕರೆಯಿಸಿಕೊಂಡಿದ್ದಾರೆ.
ಇನ್ನೊಂದು ಗಮನಾರ್ಹ ಸಂಗತಿಯೆಂದರೆ ಇಂಥ ದಂಧೆ ನಡೆಯುತ್ತಿರುವ ಅನೇಕ ಲಾಡ್ಜ್ಗಳು ಬಾಡಿಗೆ ರೂಪದ್ದಾಗಿದೆ. ಕಟ್ಟಡ ಕಟ್ಟಿ ಬಾಡಿಗೆ ನೀಡುವ ಲಾಡ್ಜ್ ಮಾಲೀಕರು ಲಾಡ್ಜ್ಗಳಲ್ಲಿ ಏನು ನಡೆಯುತ್ತಿದೆ ಎಂದು ಗಮನಿಸುತ್ತಿಲ್ಲವೇ? ಅಕ್ರಮ ದಂಧೆಯ ಬಗ್ಗೆ ವರದಿ ಪ್ರಕಟವಾಗಿದ್ದರೂ ಇವರೇಕೆ ಸುಮ್ಮನಿದ್ದಾರೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಮಿಲಾಪಿ ದಂಧೆ: ಇನ್ನು ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ದಂಧೆ ಲಾಡ್ಜ್ಗಳಲ್ಲಿ ಯಾರ ಹೆದರಿಕೆ ಇಲ್ಲದೇ ನಡೆಯುತ್ತಿದೆ ಎಂದಾದಲ್ಲಿ ಇದಕ್ಕೆ ಕೆಲ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕುಮ್ಮಕ್ಕೂ ಇದೆ. ಈ ದಂಧೆಯ ಬಗ್ಗೆ ಗೊತ್ತಿದ್ದರೂ ಕಂಡೂ ಕಾಣರಿಯದಂತಿದ್ದಾರೆ. ಕೆಲ ಸಮಾಜ ಘಾತುಕ ಶಕ್ತಿಗಳು, ಸಂಘಟನೆಗಳೂ ಈ ದಂಧೆಗೆ ರಕ್ಷಣೆ ನೀಡುವ ಮೂಲಕ ಹಣ ಪೀಕುತ್ತಿದ್ದಾರೆ.
ಅದರಲ್ಲಂತೂ ಇದೀಗ ಹಿರಿಯ ಪೊಲೀಸ್ ಅಧಿಕಾರಿಗಳು ಗಣೇಶೋತ್ಸವದಿಂದಾಗಿ ಬಂದೋಬಸ್ತ್ ಇತ್ಯಾದಿ ಕೆಲಸದಲ್ಲಿ ವ್ಯಸ್ತರಾಗಿರುವುದರಿಂದ ಈ ದಂಧೆಗೆ ಮೂಗುದಾರ ಹಾಕಲಾಗುತ್ತಿಲ್ಲ. ಒಂದು ವೇಳೆ ಇಂಥ ಲಾಡ್ಜ್ಗಳ ಮೇಲೆ ದಾಳಿ ಮಾಡಿದ್ದೇ ಆದಲ್ಲಿ ರಾಶಿ ರಾಶಿ ದಂಧೆಕೋರರು ಬಲೆಗೆ ಬೀಳುವುದು ಖಂಡಿತ. ಸಮಾಜದ ಸ್ವಾಸ್ಥ್ಯಕಾಪಾಡುವ ನಿಟ್ಟಿನಲ್ಲಿ ಈ ಕೆಲಸವಾಗಬೇಕಿದೆ. ಲಾಡ್ಜ್ಗಳ ಹೆಸರಲ್ಲಿ ನಡೆಯುತ್ತಿರುವ ಅಕ್ರಮ ದಂಧೆಗೆ ಕಡಿವಾಣ ಹಾಕಬೇಕಿದೆ.