ಬಾಲಕರ ಸಾವು: ಕುಟುಂಬಕ್ಕೆ 1 ಲಕ್ಷ ಪರಿಹಾರ: ಲಾಡ್
ಧಾರವಾಡ: ಗಣೇಶ ವಿಸರ್ಜನೆಗಾಗಿ ತೋಡಲಾಗಿದ್ದ ಗುಂಡಿಯಲ್ಲಿ ಬಿದ್ದು ಮೃತಪಟ್ಟ ಬಾಲಕರ ಕುಟುಂಬಕ್ಕೆ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಭೇಟಿ ನೀಡಿ # 1 ಲಕ್ಷ ಚೆಕ್ ನೀಡಿದರು.
ಗಣೇಶ ವಿಸರ್ಜನೆಗಾಗಿ ಅಗೆಯಲಾಗಿದ್ದ ಗುಂಡಿಯಲ್ಲಿ ಬಿದ್ದು ಸಾವನ್ನಪ್ಪಿದ ಇಲ್ಲಿನ ಗಾಂಧಿನಗರದ ಪ್ರಜ್ವಲ ಹಾಗೂ ನಾಗರಾಜ ಮುಳಗುಂದ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವಕರು ಪಾಲಿಕೆಯ ಯಾವುದೇ ಪರವಾನಗಿ ಪಡೆಯದೇ, ಗಣೇಶ ವಿಸರ್ಜನೆಗಾಗಿ ಗುಂಡಿ ತೋಡಿರುವುದು ದುರಂತದ ಸಂಗತಿ. ಈಗಾಗಲೇ ಕೆಲವರ ಮೇಲೆ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಗಣೇಶನ ವಿಸರ್ಜನೆ ಸಂದರ್ಭದಲ್ಲಿ ಯುವಕರು ಎಚ್ಚರಿಕೆ ವಹಿಸಬೇಕು. ಅಲ್ಲದೇ, ಸಾರ್ವಜನಿಕರು ಕೆಲ ನಿರ್ಬಂಧಗಳನ್ನು ಪಾಲಿಸಬೇಕೆಂದು ಮನವಿ ಮಾಡಿದರು.
ಮುಂಬರುವ ದಿನಗಳಲ್ಲಿ ಗಣೇಶ ಪ್ರತಿಷ್ಠಾಪನೆ ಹಾಗೂ ವಿಸರ್ಜನೆಯ ದಿನಗಳ ಮಾಹಿತಿ ಪಡೆಯಲಾಗುವುದು. ಇನ್ಮುಂದೆ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಯಾವುದೇ ರೀತಿಯ ಅವಘಡಗಳು ಸಂಭವಿಸದಂತೆ ಎಚ್ಚರಿಕೆ ವಹಿಸಲಾಗುವುದು. ಅಲ್ಲದೇ, ಮೃತ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿ ಹಾಗೂ ವೈಯಕ್ತಿವಾಗಿ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.
ವಿಧಾನಪರಿಷತ್ ಸದಸ್ಯ ನಾಗರಾಜ ಚಬ್ಬಿ, ಡಿಸಿ ಸಮೀರ ಶುಕ್ಲ, ಪಾಲಿಕೆ ಆಯುಕ್ತ ರಮಣದೀಪ ಚೌದರಿ, ಪಾಲಿಕೆ ಸದಸ್ಯ ದೀಪಕ ಚಿಂಚೋರೆ, ಇಸ್ಮಾಯಿಲ್ ತಮಾಟಗಾರ, ವಿ.ಡಿ. ಕಾಮರೆಡ್ಡಿ ಮತ್ತಿತರು ಇದ್ದರು.
--