ಬಿಜೆಪಿಗೆ ಬಿಎಸ್ವೈ ಬರ್ತಾರೆ: ನಿರಾಣಿ
ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪಕ್ಷಕ್ಕೆ ಮರಳುವುದು ಖಚಿತ ಅವರು ಬಂದೇ ಬರುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.
ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಬೆಳೆಸಿದ್ದು ಯಡಿಯೂರಪ್ಪ ಅವರ ಅಗತ್ಯತೆ ಈಗ ಪಕ್ಷದ ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರಿಗೂ ಅರಿವಾಗಿದೆ. ಯಡಿಯೂರಪ್ಪ ಅವರು ಪಕ್ಷಕ್ಕೆ ಮರಳುವ ಬಗ್ಗೆ ಎಲ್ಲರಲ್ಲೂ ಸಹಮತ ವ್ಯಕ್ತವಾಗಿದ್ದು, ಹೀಗಾಗಿ ಅವರು ಪಕ್ಷಕ್ಕೆ ಮತ್ತೆ ಮರಳುತ್ತಾರೆ ಎಂಬ ವಿಶ್ವಾಸವಿದೆ. ಕೇಂದ್ರದಲ್ಲಿ ಎನ್ಡಿಎ ಅಧಿಕಾರಕ್ಕೆ ಬರುವ ಅಗತ್ಯವಿರುವ ಹಿನ್ನೆಲೆಯಲ್ಲಿ ಈಗಾಗಲೇ ಬಿಜೆಪಿಯನ್ನು ತೊರೆದು ಹೋಗಿರುವ ಇನ್ನಿತರ ಮುಖಂಡರನ್ನು ಪಕ್ಷಕ್ಕೆ ಮರಳಿ ಸೇರಿಸಿಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ಜೆಡಿಎಸ್ಗೆ ಸೇರ್ಪಡೆಯಾಗಿರುವ ಮಾಜಿ ಸಂಸದ ಬಸನಗೌಡ ಪಾಟೀಲ ಯತ್ನಾಳ, ಬಾಗಲಕೋಟೆ ಕ್ಷೇತ್ರದ ಮಾಜಿ ಶಾಸಕ ಪಿ.ಎಚ್. ಪೂಜಾರ ಸೇರಿದಂತೆ ಇನ್ನಿತರರೊಂದಿಗೆ ಖುದ್ದಾಗಿ ಚರ್ಚಿಸಿದ್ದೇನೆ. ಪಕ್ಷಕ್ಕೆ ಮರಳುವ ಕುರಿತು ಇನ್ನು ಎರಡು ದಿನಗಳಲ್ಲಿ ತಮ್ಮ ಅಭಿಪ್ರಾಯ ತಿಳಿಸುತ್ತೇನೆ ಎಂದು ಬಸನಗೌಡ ಪಾಟೀಲ ಭರವಸೆ ನೀಡಿದ್ದಾರೆ ಎಂದರು.
--
ಪ್ರತಿ ತಾಲೂಕಿನಲ್ಲೂ ಕಾರ್ಖಾನೆ: ನಿರಾಣಿ
ಹುಬ್ಬಳ್ಳಿ: ಸದ್ಯ ಇನ್ನೊಂದು ನಾಲ್ಕು ವರ್ಷ ರಾಜಕೀಯದಿಂದ ದೂರ, ಹೀಗಾಗಿ ಈ ನಾಲ್ಕು ವರ್ಷಗಳನ್ನು ಬಾಗಲಕೋಟೆ ಜಿಲ್ಲೆಯಲ್ಲಿ ನಿರಾಣಿ ಸಮೂಹದ ಕೈಗಾರಿಕಾ ವಿಸ್ತರಣೆಗೆ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.
ಹುಬ್ಬಳ್ಳಿಯಲ್ಲಿ ಸಮಾರಂಭವೊಂದರಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಗಲಕೋಟೆ ಜಿಲ್ಲೆಯ ಹುನಗುಂದ, ಬಾಗಲಕೋಟೆ, ಬಾದಾಮಿ, ಬೀಳಗಿ, ಜಮಖಂಡಿ ಮತ್ತು ಮುಧೋಳ ತಾಲೂಕುಗಳಲ್ಲಿ ನಿರಾಣಿ ಸಮೂಹದಿಂದ ಕೈಗಾರಿಕೆ ಸ್ಥಾಪಿಸಲಾಗುವುದು. ತಲಾ ಒಂದು ಕೈಗಾರಿಕೆಯಿಂದ ಕನಿಷ್ಠ 5ರಿಂದ 6 ಸಾವಿರ ಜನರಿಗೆ ಉದ್ಯೋಗ ನೀಡುವ ಯೋಜನೆಯನ್ನು ನಿರಾಣಿ ಸಮೂಹ ರೂಪಿಸಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಲಭ್ಯವಿರುವ ಸುಣ್ಣದ ಕಲ್ಲು, ಡೊಲೊಮೈಟ್, ಹೀಗೆ ಅಲ್ಲಿನ ಲಭ್ಯ ಸಂಪನ್ಮೂಲಗಳನ್ನು ಬಳಸಿಕೊಂಡು ಕೈಗಾರಿಕೆ ಸ್ಥಾಪಿಸಿ ಉದ್ಯೋಗ ಸೃಷ್ಟಿ ಕೆಲಸ ಮಾಡಲಾಗುವುದು ಎಂದರು. ಬಾದಾಮಿ ತಾಲೂಕಿನ ಕೆರೂರು ಬಳಿ ಸಜ್ಜೆ ಕೂಡ ಬೆಳೆಯದಂತಹ ಐದು ಸಾವಿರ ಎಕರೆಯಲ್ಲಿ ಕೈಗಾರಿಕಾ ಸಚಿವನಾಗಿದ್ದ ವೇಳೆ ಕೃಷಿ ಸಂಶೋಧನಾ ಕೇಂದ್ರ ಸ್ಥಾಪಿಸುವುದಕ್ಕೆ ಉದ್ದೇಶಿಸಿದ್ದೆ. ಭಾರತದಲ್ಲೇ ಅದು ಅತಿ ದೊಡ್ಡ ಕೃಷಿ ಸಂಶೋಧನಾ ಕೇಂದ್ರವಾಗುತ್ತಿತ್ತು. ಆದರೆ, ಈಗಿನ ಆ ಕ್ಷೇತ್ರದ ಶಾಸಕರು ರೈತರಿಗೆ ಜಮೀನು ಕೊಡಬೇಡಿ ಎಂದು ಹೇಳಿದರು. ರಾಜಕೀಯ ಮುಖಂಡರ ಮಾತಿಗೆ ರೈತರು ಒಪ್ಪದಿದ್ದರೆ ಇಂದು ಕೃಷಿ ಸಂಶೋಧನಾ ಕೇಂದ್ರ ಆರಂಭವಾಗಿ ಕನಿಷ್ಠ 5 ಸಾವಿರ ಜನರಿಗೆ ಉದ್ಯೋಗ ನೀಡುತ್ತಿತ್ತು. ಕೈಗಾರಿಕೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ರಾಜಕೀಯ ಸರಿಯಲ್ಲ ಎಂದರು.