ರಾಜ್ಯ ಕ್ರಿಕೆಟ್ ತಂಡಕ್ಕೆ ಅಕ್ಷಯ ಆಯ್ಕೆ
ಧಾರವಾಡ: ಇಲ್ಲಿನ ಕೆ.ಇ. ಬೋರ್ಡ್ಸ್ ಪ್ರೌಢಶಾಲೆ ವಿದ್ಯಾರ್ಥಿ ಅಕ್ಷಯ ಹಿರೇಮಠ 16ಕ್ಕಿಂತ ಕಿರಿಯರ ಶಾಲಾ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಜ್ಯ ತಂಡ ಪ್ರತಿನಿಧಿಸಲಿದ್ದಾನೆ. ವಿಕೆಟ್ ಕೀಪರ್, ಬ್ಯಾಟ್ಸ್ಮನ್ ಆಗಿರುವ ಅಕ್ಷಯ ಚಂದೀಗಢದಲ್ಲಿ ನಡೆಯಲಿರುವ ಅಖಿಲ ಭಾರತ 16ಕ್ಕಿಂತ ಕಿರಿಯರ ಶಾಲಾ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಡಲಿದ್ದು, ನಗರದ ವಿಎಂಸಿಎಯಲ್ಲಿ ತರಬೇತಿ ಪಡೆದಿದ್ದಾನೆ. ತರಬೇತುದಾರ ವಸಂತ ಮುರ್ಡೇಶ್ವರ, ಪ್ರಭಾಕರ ಕಾಗಲಕರ, ಶಿವಪ್ರಕಾಶ ಶಿರಕೋಳ ಇತರರು ಅಭಿನಂದಿಸಿದ್ದಾರೆ.
ಜೋಶಿ ಸದಸ್ಯರಾಗಿ ಆಯ್ಕೆ
ಹುಬ್ಬಳ್ಳಿ: ಸಂಸದ ಪ್ರಹ್ಲಾದ ಜೋಶಿ ರೇಲ್ವೆ ಇಲಾಖೆ ಸಂಸದೀಯ ಸ್ಥಾಯಿ ಸಮಿತಿ ಸದಸ್ಯರಾಗಿ 2ನೇ ಅವಧಿಗೆ ಮರು ಆಯ್ಕೆಯಾಗಿದ್ದಾರೆ. ಈ ಮೊದಲು 3 ವರ್ಷದ ಅವಧಿಗೆ ರೇಲ್ವೆ ಸ್ಥಾಯಿ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು. 2013-14ನೇ ಸಾಲಿಗೆ ಸದಸ್ಯರಾಗಿ ಕಾರ್ಯ ನಿರ್ವಹಿಸಲಿರುವ ಜೋಶಿ ಹಿಂದಿನ ಅವಧಿಯಲ್ಲಿ ರೇಲ್ವೆ ಸುಧಾರಣೆಗೆ ಸಂಬಂಧಿಸಿದಂತೆ ಮಹತ್ವದ ಸಲಹೆ ನೀಡಿದ್ದರು.
ಜಗಳ: 3 ಜನರ ಮೇಲೆ ಹಲ್ಲೆ
ಕೊಪ್ಪಳ: ಮನೆಯ ಪಕ್ಕದ ನಿವೇಶನದ ವಿವಾದದಿಂದಾಗಿ ಕೊಪ್ಪಳ ತಾಲೂಕಿನ ಕಾತರಕಿ-ಗುಡ್ಲಾನೂರಿನ ಆದರಮಗ್ಗಿಯ ಮೂವರ ಮೇಲೆ ಸಂಬಂಧಿಗಳೇ ಹಲ್ಲೆ ನಡೆಸಿದ ಘಟನೆ ಭಾನುವಾರ ಸಂಜೆ ನಡೆದಿದೆ. ಹಲ್ಲೆಗೊಳಗಾದ ಶಿವಪ್ಪ ಪೂಜಾರ್, ಮಾರುತಿ ಪೂಜಾರ, ದ್ಯಾಮಣ್ಣ ಪೂಜಾರ ಕೊಪ್ಪಳ ಎಸ್ಪಿ ಮಂಜುನಾಥ ಅಣ್ಣಿಗೇರಿಗೆ ದೂರು ನೀಡಲು ಆಗಮಿಸಿದ್ದರು. ಅವರು ಕಚೇರಿಯಲ್ಲಿ ಇಲ್ಲದ ಕಾರಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡುವುದಾಗಿ ತಿಳಿಸಿದ್ದಾರೆ. ಹಲ್ಲೆಗೊಳಗಾದವರ ಮನೆಯ ಪಕ್ಕದಲ್ಲಿ ಖಾಲಿ ನಿವೇಶನವಿತ್ತು. ಸಂಬಂಧಿಕರಾದ ನಿಂಗಪ್ಪ, ಯಂಕಪ್ಪ, ಲಕ್ಷ್ಮಣ ಮತ್ತು ಅವರ ಮಕ್ಕಳು ಇದು ತಮ್ಮ ನಿವೇಶನವೆಂದು ದಬ್ಬಾಳಿಕೆ ಮಾಡುತ್ತಿದ್ದಾರೆ. ತಮ್ಮ ಹತ್ತಿರ ಹಕ್ಕುಪತ್ರವಿದ್ದರೂ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಪಿಎಸ್ಐ, ಸಿಪಿಐ ತಮಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಹಲ್ಲೆಗೊಳಗಾದ ವ್ಯಕ್ತಿಗಳು ತಿಳಿಸಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.
ನನ್ನ ಮೇಲೆ ವಿನಾಕಾರಣ ಆರೋಪ: ಸಚಿವ ಲಾಡ್
ಹುಬ್ಬಳ್ಳಿ: ಸಮಾಜ ಪರಿವರ್ತನ ಸಮಾಜದ ಎಸ್.ಆರ್. ಹಿರೇಮಠ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿ ವಿನಾಕಾರಣ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಅಕ್ರಮ ಗಣಿಗಾರಿಕೆಯಲ್ಲಿ ನನ್ನ ಹೆಸರು ಇಲ್ಲದಿದ್ದರೂ ಏಕೆ ಅವರು ನನ್ನನ್ನು ವಿವಾದಕ್ಕೆ ಎಳೆಯುತ್ತಿದ್ದಾರೆ ತಿಳಿಯುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅಸಮಾಧಾನ ವ್ಯಕ್ತಪಡಿಸಿದರು. ಭಾನುವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಲೋಕಾಯುಕ್ತ ವರದಿ, ಸಿಐಡಿ, ಸಿಇಸಿ, ಸಿಬಿಐ ವರದಿಯಲ್ಲಿ ನನ್ನ ಕಂಪನಿಗಳಿಂದ ಅಕ್ರಮ ಗಣಿಗಾರಿಕೆ ನಡೆದಿದೆ ಎಂದು ಉಲ್ಲೇಖವಾಗಿಲ್ಲ. ಆದಾಗ್ಯೂ ಹಿರೇಮಠ ನಾನು ಗಣಿ ಅಕ್ರಮದಲ್ಲಿ ಭಾಗಿಯಾಗಿದ್ದೇನೆಂದು ಹೇಳುತ್ತಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನೇರವಾಗಿ ಮಾತನಾಡುತ್ತೇನೆ. ತಾವು ಗಣಿ ಅಕ್ರಮದಲ್ಲಿ ಪಾಲುದಾರರೆಂಬ ಬಗ್ಗೆ ಹಿರೇಮಠ ಅವರು ದಾಖಲೆ ನೀಡದೆ ಮತ್ತೊಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡುವುದು ನಿಲ್ಲಿಸಲಿ ಎಂದರು.
ಹಗರಿಬೊಮ್ಮನಹಳ್ಳಿ: ಉತ್ತರೆ ಮಳೆಗೆ ಜನತೆ ತತ್ತರ
ಹಗರಿಬೊಮ್ಮನಹಳ್ಳಿ: ತಾಲೂಕಾದ್ಯಂತ ಶನಿವಾರ ರಾತ್ರಿ ಈ ಸಾಲಿನ ದಾಖಲೆ ಮಳೆ ಸುರಿದಿದೆ. ಪಟ್ಟಣದ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದ್ದರಿಂದ ನೂರಾರು ಮನೆಗಳು ಜಲಾವೃತವಾಗಿ ನಿವಾಸಿಗಳು ತೀವ್ರ ತೊಂದರೆ ಅನುಭವಿಸಿದರು.
ಬಿರುಗಾಳಿ ಸಹಿತ ಸುರಿದ ಮಳೆಯ ರಭಸಕ್ಕೆ ತಾಲೂಕಿನ ಪಿಂಜಾರ ಹೆಗ್ಡಾಳ, ರಾಮನಗರ, ನೆಲ್ಕುದ್ರಿ, ಆನಂದದೇವನಹಳ್ಳಿ, ಕೆಚ್ಚಿನಬಂಡಿ, ಬಲ್ಲಾಹುಣ್ಸಿ, ಮಾಲ್ವಿ, ಹರೇಗೊಂಡನಹಳ್ಳಿ ಸೇರಿದಂತೆ ಹತ್ತಾರು ಗ್ರಾಮಗಳ ವ್ಯಾಪ್ತಿಯ ಸಾವಿರಾರು ಎಕರೆ ಪ್ರದೇಶದಲ್ಲಿ ಕೋಯ್ಲಿಗೆ ಬಂದಿದ್ದ ಮೆಕ್ಕೆಜೋಳ, ಕಬ್ಬು, ಸಜ್ಜೆ ನೆಲಕ್ಕುರುಳಿದೆ. ಪ್ರಾಣಹಾನಿ ಸಂಭವಿಸಿಲ್ಲ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಬೆಳೆಹಾನಿ ಪರಿಹಾರಕ್ಕೆ ರಾಜ್ಯ ರೈತ ಸಂಘ ತಾಲೂಕಾಡಳಿತವನ್ನು ಆಗ್ರಹಿಸಿದೆ. ವಿವಿಧೆಡೆ ನೂರಾರು ಮರಗಳು ಬಿದ್ದಿವೆ. ಪಟ್ಟಣದಲ್ಲಿ ವಿದ್ಯುತ್ ಪೂರೈಕೆಯಲ್ಲಿ ತೀವ್ರ ಅಡಚಣೆಯಾಗಿತ್ತು.
ಉತ್ತರಿ ಮಳೆ ಆರ್ಭಟಕ್ಕೆ ಇಲ್ಲಿನ ಕೆಚ್ಚಿನಬಂಡಿ ರಸ್ತೆಯ ಉದ್ದೇಶಿತ ನವಗ್ರಾಮ ಬಳಿಯ ಚೆಕ್ ಡ್ಯಾಂನ ಬಲ ಏರಿ ಒಡೆದು ನೀರೆಲ್ಲ ಪೋಲಾಗಿದೆ. ಈ ವಿಷಯ ಭಾನುವಾರ ಬೆಳಗ್ಗೆ ಚೆಕ್ಡ್ಯಾಂ ಸುತ್ತಲಿರುವ ರೈತರ ಗಮನಕ್ಕೆ ಬರುತ್ತಲೇ, ಕಲ್ಲುಗಳಿಂದ ಒಡೆದ ಏರಿಯನ್ನು ಮುಚ್ಚಿ ನೀರನ್ನು ತಡೆಯುವ ಕೆಲಸ ಮಾಡಿದ್ದರಿಂದ ಸದ್ಯ ಚೆಕ್ ಡ್ಯಾಂನಲ್ಲಿ ಮುಕ್ಕಾಲು ಭಾಗ ನೀರು ಉಳಿದಿದೆ. ಕಳಪೆ ಕಾಮಗಾರಿ ಚೆಕ್ ಡ್ಯಾಂ ಬೋಂಗಾ ಬೀಳಲು ಕಾರಣ ಎನ್ನಲಾಗಿದೆ.