ಸುತ್ತೈದು ಹಳ್ಳಿಗೂ ಒಬ್ಬನೇ ಜೋಕುಮಾರ
ನರೇಗಲ್ಲ: ಗಣೇಶನ ಬಳಿಕ ಮಣ್ಣಿನಿಂದ ಮಾಡಿದ ಗೊಂಬೆ ಹೊತ್ತು ಮನೆ ಬಾಗಿಲಿಗೆ ತೆರಳಿ ಜೋಕಪ್ಪ ಬಂದಾನ ನೀಡ್ರವ್ವೋ ಎನ್ನುತ್ತ ಮನೆಯವರು ನೀಡಿದ ವಸ್ತುಗಳನ್ನು ತೆಗೆದುಕೊಂಡು ಬರುತ್ತಿರುವ ದೃಶ್ಯ ಸಾಮಾನ್ಯವಾಗಿ ಎಲ್ಲ ಗ್ರಾಮಗಳಲ್ಲಿಯೂ ಸಹಜವಾಗಿರುತ್ತದೆ. ಇವರು ಹೊತ್ತು ತಿರುಗುತ್ತಿರುವುದು ಮಣ್ಣಿನ ಮೂರ್ತಿಯನ್ನಲ್ಲ ಅದರಲ್ಲಿ ಜೋಕುಮಾರನ ಮಾಡಿಕೊಂಡು ಗ್ರಾಮ ಹಾಗೂ ನಗರದ ಬಾರಿಕೇರ ಮನೆತನದವರು ತಮ್ಮ ಕಾಯಕ ಮಾಡುತ್ತಿರುವ ದೃಶ್ಯವದು.
ಜೋಕುಮಾರ ಬಂದಾನ ಜೋಕುಮಾರ... ಜೋಕುಮಾರ.... ಏಳು ದಿನಕ ಆ ಮರಣ ಜೋಕುಮಾರ. ದೊಡ್ಡ ದೊಡ್ಡ ಮಳೆ ಬಂದು ಜೋಕುಮಾರ... ಜೋಕುಮಾರ.... ಗೊಡ್ಡಿಗಳೆಲ್ಲಾ ಹೈನಾಗು ಜೋಕುಮಾರ.... ಜೋಕುಮಾರ.... ಎಂದು ಜೋಕುಮಾರನ ಚರಿತ್ರೆ ಸಾರುತ್ತ ತಲೆ ಮೇಲೆ ಹೊತ್ತ ಜೆಲ್ಲಿ (ಬಿದಿರಿನ ಪುಟ್ಟಿ) ಯನ್ನು ಕೆಳಗಿಳಿಸಿ ಮನೆಯಲ್ಲಿರುವವರನ್ನು ಕರೆದು ಜೋಕಪ್ಪ ಬಂದಾನ ಬರ್ರೇವ್ವ ಎಂದು ಕೂಗುತ್ತಾರೆ. ಆ ಓಣಿಯ ಎಲ್ಲ ಮಹಿಳೆಯರು ಬಾಗೀನ ತಂದು ಜೋಕುಮಾರನಿಗೆ ಅರ್ಪಿಸಿ ಇವರು ನೀಡುವ ಪ್ರಸಾದವಾದ ಜೋಳದ ನುಚ್ಚಿನಿಂದ ಮಾಡಿದ ಪದಾರ್ಥವನ್ನು ಪ್ರಸಾದವನ್ನಾಗಿ ಭಕ್ತಿಯಿಂದ ಪಡೆಯುತ್ತಾರೆ. ಅದನ್ನು ತೆಗೆದುಕೊಂಡು ಹೋಗಿ ರೈತರು ತಮ್ಮ ಜಮೀನುಗಳಲ್ಲಿ ಮಣಿಸುತಾ(ಹೂಳುವುದು) ಭೂತಾಯಿಯಲ್ಲಿ ಉತ್ತಮ ಬೆಳೆ ಬರಲೆಂದು ಕೇಳಿಕೊಳ್ಳುತ್ತಾರೆ.
ಆಗಮನ: ವರ್ಷಕ್ಕೊಮ್ಮೆ 7 ದಿನ ಜೀವಿತಾವಧಿವುಳ್ಳ ಜೋಕುಮಾರ ಗಣಪತಿ ಪ್ರತಿಷ್ಠಾಪಿಸಿದ 5 ದಿನಗಳ ಬಳಿಕ ವಿಸರ್ಜನೆ ದಿನ ಕುಂಬಾರ ಮನೆತನದಲ್ಲಿ ಹುಟ್ಟುವ ಸುರಸುಂದರಾಂಗ. ಜೋಕುಮಾರನನ್ನು ಬಾರಕೇರ ಮನೆತನದವರು ಬಿದರಿನಿಂದ ಹೆಣೆದ ಬುಟ್ಟಿಯಲ್ಲಿ ಕೂಡ್ರಿಸಿಕೊಂಡು ಅವನ ಸುತ್ತಲೂ ಬೇವಿನ ಸೊಪ್ಪು ಹಾಕಿಕೊಂಡು, ಪೂಜಾ ಸಾಮಗ್ರಿ, ಪ್ರಸಾದವಾದ ಬೆಣ್ಣೆ, ನುಚ್ಚು, ಉಪ್ಪು, ದೃಷ್ಟಿಯಾಗದಿರಲೆಂದು ಕಾಡಿಗೆ ಹಚ್ಚುವುದು, ಜೋಕುಮಾರನ ಬಗ್ಗೆ ಜನಪದದಲ್ಲಿ ಮೂಡಿರುವ ಪರಿಕಲ್ಪನೆ ಕುಂಬಾರ ಮನೆಯಲ್ಲಿ ಹುಟ್ಟಿ ಬಾರಕೇರ ಮನೆಯಲ್ಲಿ ಬೆಳೆದು, ಕೇರಿಯಲ್ಲಿ ತಲೆ ಬಡಿಸಿಕೊಂಡು, ತೀರಿದನೆಂದು ತಿಳಿದು ಬಾರಕೇರ ಮನೆತನದವರು ಮಡಿವಾಳರು ಕೆರೆಯಲ್ಲಿ ಬಟ್ಟೆ ತೊಳೆಯುವ ಕಲ್ಲಿನ ಕೆಳಗೆ ಇಟ್ಟು ಬರುತ್ತಾರೆ. ನಂತರ 3 ದಿನಗಳ ನಂತರ ಮಡಿವಾಳರು ತೆಗೆದು ಬೇರೆ ಕಡೆ ಹೂತು, ಅವನ ಅಂತ್ಯಕ್ರಿಯೆಗಳ ಮಾಡುವಂತೆ ಹಬ್ಬ ಆಚರಿಸುವರು.
ಕಡು ಬಡತನದಲ್ಲಿ ಹುಟ್ಟಿದ ಜೋಕುಮಾರ ಜೋಳದ ರೊಟ್ಟಿ, ಜೋಳದ ನುಚ್ಚು ತಿಂದು ಬೆಳೆಯುತ್ತಾನೆ. ಬಿಕ್ಷಾಟನೆ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಾನೆ. ಸುರಸುಂದರಾಂಗನಾದ ಜೋಕುಮಾರನ ನೋಡಲು ಓಣಿಯ ಹುಡುಗಿಯರು ದಂಡುಗಟ್ಟಲೆ ಬಂದು ನೋಡುತ್ತಾರೆ. ಬೀಕ್ಷಾಟನೆ ವೇಳೆಯಲ್ಲಿ ಜೋಳ, ಗೋಧಿ, ಸಜ್ಜೆ, ಕಡಲೆ, ಕೊಬ್ಬರಿ ಹೀಗೆ ಇನ್ನೂ ಅನೇಕ ರೀತಿಯ ನೈವೇದ್ಯಗಳನ್ನು ಅರ್ಪಿಸುತ್ತಾರೆ. ಪೂಜೆ ಸಲ್ಲಿಸಿ ನಂತರ ಜೋಕುಮಾರನ ಬಾಯಿಗೆ ಬೆಣ್ಣೆ ಸವರಿ ಕಳಿಸುತ್ತಾರೆ. ಇದರಿಂದ ಗೊಡ್ಡು ಜಾನುವಾರುಗಳು ಗರ್ಭ ಧರಿಸಿ ಹಾಲು ಕರೆಯುತ್ತೇವೆ. ಮಳೆ ಬರುತ್ತದೆ, ವಾತಾವರಣದ ಬದಲಾವಣೆಯಿಂದ ಬರುವ ಕಣ್ಣುಬೇನೆಯಂಥ ರೋಗಗಳು ಮಾಯವಾಗುತ್ತವೆ ಎಂದು ಹಿರಿಯರು ತಿಳಿಸುತ್ತಾರೆ. ಈ ಜೋಕುಮಾರ ನರೇಗಲ್ಲ ಹಾಗೂ ಸುತ್ತಲಿನ 5 ಮಜರೇಹಳ್ಳಿಗಳಿಗೂ ಒಬ್ಬನೇ ಜೋಕುಮಾರನಿದ್ದು, ಇವನನ್ನು ನೋಡಲು ಮತ್ತು ಬೇಡಿಕೊಳ್ಳಲು ಸುತ್ತಲಿನ ಎಲ್ಲ ಗ್ರಾಮದ ಜನರಿಗೆ ಕೃಪಾಶೀರ್ವಾದ ಸಿಗಲೆಂದು ಸ್ಥಳೀಯ ಬಾರಕೇರ ಮನೆತನದವರು ನೀಡುತ್ತಾ ಬಂದಿದ್ದಾರೆ.
ನಂಬಿಕೆ: ಮಳೆ ಬಾರದೆ ಬರಗಾಲದಿಂದ ತತ್ತರಿಸುತ್ತಿರುವ ಈ ಭಾಗದ ಜನರು ಎಲ್ಲ ದೇವರಲ್ಲಿಯೂ ಮೊರೆ ಇಟ್ಟರೂ ಯಾವುದೇ ಮೊರೆ ಫಲಿಸದ ಕಾರಣ ಜೋಕುಮಾರನ ಮೊರೆ ಹೋಗಿ ಅವನಲ್ಲಿ ತಮ್ಮ ಬೇಡಿಕೆ ಮುಂದಿಟ್ಟರೆ ಮಳೆಯಾಗುವುದು ನಿಶ್ಚಿತ ಎಂದು ಅವರ ನಂಬಿಕೆ. ಮುಂಗಾರು ಸುಗ್ಗಿಯ ಕಾಲ ಮತ್ತು ಹಿಂಗಾರು ಬಿತ್ತನೆ ಮಧ್ಯೆ ಜೋಕುಮಾರ ಹಬ್ಬ ಆಚರಿಸುತ್ತಾ ಬಂದಿರುತ್ತದೆ. ಆದರೆ, ಈ ಬಾರಿ ಮುಂಗಾರು ಮಳೆಯಾಗದೆ ರೈತರು ಹಿಂಗಾರಿನ ಮಳೆಗಾಗಿ ಜೋಕುಮಾರನ ಮೊರೆ ಹೋಗಿದ್ದಾರೆ. ಮೊರೆಯನ್ನು ಜೋಕುಮಾರ ಆಲಿಸಿ ಮಳೆ ತರುವನೆಂದು ನಂಬಿದ್ದಾರೆ ಎಂದು ಈರವ್ವ ಬಾರಕೇರ, ಶಾಂತವ್ವ ಬಾರಕೇರ, ಮಂಜವ್ವ ಬಾರಕೇರ, ಕಾಶಪ್ಪ ಬಾರಕೇರ ಜೋಕುಮಾರನ ಕುರಿತು ವಿವರಿಸಿದರು.
- ನಿಂಗರಾಜ ಬೇವಿನಕಟ್ಟಿ