ಉಣಕಲ್ ಕೆರೆಗೆ ಬಾಗಿನ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಸೆ. 16
ನನ್ನ ರಕ್ಷಣೆಗೇ ಯಾರೂ ಇಲ್ಲ, ಅಂಥದರಲ್ಲಿ ಉಣಕಲ್ ಬಾಂಧವರು ತಮ್ಮ ರಕ್ಷಣೆಗೆ ಪ್ರಾರ್ಥಿಸಿ ಬಾಗಿನ ಅರ್ಪಿಸಿದ್ದು ವಿಪರ್ಯಾಸ.
ದಶಕಗಳ ಹಿಂದೆ ನಾನು ಉಣಕಲ್ ಜೊತೆಗೆ ಹುಬ್ಬಳ್ಳಿಯ ಅರ್ಧ ಭಾಗಕ್ಕೆ ಕುಡಿಯುವ ನೀರಿನ ಮೂಲವಾಗಿದ್ದೆ. ಆಗಿಂದಲೂ ಉಣಕಲ್ ಗ್ರಾಮಸ್ಥರು ನನ್ನೊಡಲು ನೀರಿನಿಂದ ತುಂಬಿದಾಗಲೆಲ್ಲ ಬಾಗಿನ ಅರ್ಪಿಸುತ್ತ ಬಂದಿದ್ದಾರೆ. ಇದು ಇಲ್ಲಿಯ ಜನರು ನನ್ನ ಮೇಲಿಟ್ಟ ಗೌರವದ ಪ್ರತೀಕ. ಆದರೆ, ಈಗ ಆ ಪರಿಸ್ಥಿತಿ ಇಲ್ಲ.
ನನ್ನ ಕಣ್ಣೀರಿನ ಗೋಳು ಓದಿ ನಾನಾರೆಂದು ಅರ್ಥವಾಗಿರಬೇಕಲ್ಲವೇ? ನಾನು ಮಲಿನಗೊಂಡಿದ್ದರೂ ಇಂದಿಗೂ ನನ್ನನ್ನು ತಮ್ಮವನೆಂದೇ ಪ್ರೀತಿಸಿ, ಗೌರವಿಸುವ ಹುಬ್ಬಳ್ಳಿ ಜನತೆಯ 'ಉಣಕಲ್ ಕೆರೆ' ನಾನು.
ಕೋಡಿ ತುಂಬಿದಾಗಲೆಲ್ಲ ನನಗೆ ಬಾಗಿನ ಸಲ್ಲಿಸುವ ವಾಡಿಕೆ ಸ್ವಾಗತಾರ್ಹ. ಆದರೆ ನನ್ನೊಡಲು ನೀರಿನಿಂದ ತುಂಬಿದ್ದಲ್ಲ. ಬದಲಾಗಿ ನನ್ನೊಡಲಲ್ಲಿ ಹೂಳು ಹೆಚ್ಚಾಗಿದೆ. ಹೀಗಾಗಿ ನೀರು ಸಂಗ್ರಹಗೊಳ್ಳುವುದು ಸಾಧ್ಯವಾಗದೇ ಕೋಡಿ ಹರಿದಿದೆ. ನೀರು ಬರಿದು ಮಾಡಿ ಹೂಳು ತೆಗೆಯಲೂ ಆಗದಂಥ ಸ್ಥಿತಿ ತಲೆದೋರಿದೆ. ನಿತ್ಯವೂ ನವನಗರ, ಅಮರಗೋಳ, ಬೈರಿದೇವರಕೊಪ್ಪ ಸೇರಿದಂತೆ ಸುತ್ತಲಿನ ಪ್ರದೇಶದ ಚರಂಡಿ ನೀರು ಹರಿದು ನನ್ನೊಡಲು ಸೇರುತ್ತದೆ. ಹೀಗಾಗಿ ನನ್ನೊಡಲು ಬರಿದಾಗುವುದೇ ಇಲ್ಲ. ಬದಲಾಗಿ ನಿತ್ಯವೂ ಹೆಚ್ಚೆಚ್ಚು ಚರಂಡಿ ನೀರು ಹಾಗೂ ಕಸ ಬಂದು ನನ್ನಲ್ಲಿ ಸೇರುತ್ತದೆ.
ನನ್ನೊಡಲಿನ ನೀರು ಮಲಿನವಾಗಿದೆ. ನನ್ನಲ್ಲಿನ ನೀರಲ್ಲಿ ಜನ-ಜಾನುವಾರುಗಳು ಇಳಿದರೂ ಅಪಾಯಕಾರಿ. ಚರ್ಮ ರೋಗ ಸೇರಿದಂತೆ ಹಲವಾರು ರೋಗಗಳು ನನ್ನೊಡಲಿನ ನೀರು ಬಳಸುವವರಿಗೆ ತಗುಲುವುದರಲ್ಲಿ ಯಾವುದೇ ಸಂದೇಹ ಇಲ್ಲ. ಆದರೂ ಉಣಕಲ್ ಹಾಗೂ ಸುತ್ತಲಿನ ಜನರು ನನ್ನೊಡಲಿಗೆ ಧುಮುಕಿ ಸ್ನಾನ ಮಾಡುತ್ತಾರೆ. ಜಾನುವಾರುಗಳ ಮೈಯನ್ನೂ ತೊಳೆಯುತ್ತಾರೆ. ಅನೇಕರು ಬಟ್ಟೆಗಳನ್ನೂ ಒಗೆಯುತ್ತಾರೆ.
ನನ್ನೊಡಲಿನಲ್ಲಿಳದರೆ ಅಪಾಯ, ಅಂಥದರಲ್ಲಿ ಇಲ್ಲಿಯ ನೀರಲ್ಲಿ ತೊಳೆದ ಬಟ್ಟೆ ಧರಿಸಿದರಂತೂ ಹೇಳತೀರದು.
ಆಂ..., ಅಂದಹಾಗೆ ಇವತ್ತು ಬೆಳಗ್ಗೆ ಉಣಕಲ್ ಗಣ್ಯರು ಹಾಗೂ ಗ್ರಾಮಸ್ಥರು ಬಾಗಿನ ಅರ್ಪಿಸಿದರೆಂದು ಹೇಳಿದೇನಲ್ಲ, ಆ ಸಮಯದಲ್ಲಿ ಅವರು ಸಹ ನನ್ನ ದಯನೀಯ ಸ್ಥಿತಿ ಕಂಡು ಮಮ್ಮಲಮರಗಿದರು.
ದೇಹಪೂರ್ತಿ ವ್ಯಾಪಿಸಿದ ಕಸ: ಸುಮಾರು 400 ಎಕರೆ ವ್ಯಾಪ್ತಿಯ ನನ್ನ ದೇಹದ ಸುತ್ತಲಿನ 25ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಅಂತರಗಂಗೆ ಎನ್ನುವ ಕಸ ಬೆಳೆದಿದೆ. ಬಳ್ಳಿ ರೂಪದ ಈ ಕಸ ದಿನದಿಂದ ದಿನಕ್ಕೆ ನನ್ನ ದೇಹಪೂರ್ತಿ ವ್ಯಾಪಿಸುತ್ತಿದೆ. ಕಳೆದ ಹತ್ತು ದಿನಗಳಿಂದ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಈ ಕಸ ತೆಗೆಯುವ ಕಾರ್ಯ ಆರಂಭಿಸಿವೆ. ಆದರೆ ಈ ಅಂತರಗಂಗೆ ಕಸ ತೆಗೆಯುವುದು ಅಷ್ಟು ಸರಳವಾಗಿಲ್ಲ. ದಂಡೆಯ ಬಳಿ ನಿಂತುಕೊಂಡೇ ಕಬ್ಬಿಣದ ಕೋಲಿನಿಂದ ಕಸ ಜಗ್ಗಬೇಕು. ಅದರ ಬದಲು ನೀರಲ್ಲಿಳಿದು ಕಸ ತೆಗೆಯಲು ಹೋದಲ್ಲಿ ಕಾರ್ಮಿಕರ ಜೀವಕ್ಕೆ ಆಪತ್ತು ತಪ್ಪಿದ್ದಲ್ಲ. ನನ್ನೊಡಲಲ್ಲಿ ವಿವಿಧ ಜಾತಿಯ ಹಾವು, ಚೇಳು ಹಾಗೂ ಮತ್ತಿತರ ಕ್ರಿಮಿಕೀಟಗಳಿವೆ. ನೀರಲ್ಲೇನಾದರೂ ಕಾರ್ಮಿಕರು ಇಳಿದರೆ ಅವರಿಗೆ ಈ ಅಪಾಯಕಾರಿ ಹಾವು-ಚೇಳುಗಳು ಕಚ್ಚದೇ ಇರುತ್ತವೆಯೇ ?
ಅದೂ ಅಲ್ಲದೇ, ಈ ಅಂತರಗಂಗೆ ಕಸದ ಬಳ್ಳಿಯಲ್ಲಿ ಯಾರಾದರೂ ಸಿಲುಕಿಕೊಂಡರೆ ಬಿಡಿಸಿಕೊಳ್ಳುವುದು ಸುಲಭವಲ್ಲ. ಜೊತೆಗೆ ಒಳಗಿರುವ ಕೆಸರು ಸಹ ಅಪಾಯಕಾರಿ. ಎರಡ್ಮೂರು ದಿನಗಳ ಹಿಂದಷ್ಟೇ ನನ್ನ ಉತ್ತರ ಭಾಗದಲ್ಲಿನ ಕಸದ ಬಳ್ಳಿಯಲ್ಲಿ ನಾಯಿಯೊಂದು ಸಿಲುಕಿಕೊಂಡಿತ್ತು. ಬಳ್ಳಿಯಿಂದ ಬಿಡಿಸಿಕೊಳ್ಳಲು ಸಾಧ್ಯವಾಗದೇ ಬೊಬ್ಬೆಯಿಡುತ್ತಿತ್ತು. ನಾಯಿಯ ದುಸ್ಥಿತಿ ಕಂಡ ಸಮೀಪದಲ್ಲೇ ಬಳ್ಳಿ ಕೀಳುತ್ತಿದ್ದ ಕಾರ್ಮಿಕರು, ನಾಯಿಯನ್ನು ಕಾಪಾಡಿದರು.
ಅದಿರಲಿ, ಈಗಾಗಲೇ ನವನಗರದಿಂದ ಉಣಕಲ್ ಮಧ್ಯದಲ್ಲಿರುವ ಎರಡು ಕೆರೆಗಳು ಸಂಪೂರ್ಣವಾಗಿ ಚರಂಡಿ ನೀರಿನಿಂದ ತುಂಬಿಹೋಗಿವೆ. ನನ್ನೊಡಲಲ್ಲಿ ಈ ಮೊದಲಿದ್ದ ಸ್ವಚ್ಛ ಕುಡಿಯಲು ಯೋಗ್ಯವಾಗಿದ್ದ ನೀರು ಈ ಚರಂಡಿ ನೀರು ಹಾಗೂ ಕಸದಿಂದಾಗಿ ಮಲಿನವಾಗಿದೆ. ಅತಿ ಶೀಘ್ರದಲ್ಲಿ ಚರಂಡಿ ನೀರು ನನ್ನೊಡಲು ಸೇರುವುದನ್ನು ನಿಲ್ಲಿಸದಿದ್ದರೆ ನನ್ನುಸಿರು ಸ್ಥಬ್ಧಗೊಳ್ಳುವುದರಲ್ಲಿ ಎರಡು ಮಾತಿಲ್ಲ.
ಆಗ ನಾನು ಕಾಲಗರ್ಭಕ್ಕೆ ಸೇರುತ್ತೇನೆ. ಈ ಪರಿಸ್ಥಿತಿಯಲ್ಲಿ ನನ್ನ ದಂಡೆಯ ಮೇಲೆ ಕೋಟ್ಯಾಂತರ ರು. ವೆಚ್ಚ ಮಾಡಿ ನಿರ್ಮಿಸಿರುವ ಉದ್ಯಾನವೂ ನಿರುಪಯುಕ್ತವಾದಂತಾಗುತ್ತದೆ. ನನ್ನೊಡಲು ಸ್ವಚ್ಛಗೊಳಿಸಲು ಹಾಗೂ ಚರಂಡಿ ನೀರು ಸೇರದಿರಲು ಉಣಕಲ್ ಗ್ರಾಮಸ್ಥರು ಹಾಗೂ ಇಡಿ ಹುಬ್ಬಳ್ಳಿ ನಗರದ ಜನತೆ ಒಂದಾಗಿ ಹೋರಾಡ ಬೇಕಿದೆ. ಆ ದಿನ ಎಂದಿಗೆ ಬರುತ್ತದೋ ಕಾಯ್ದುನೋಡಬೇಕು.
ಇಷ್ಟೊತ್ತು ತಾಳ್ಮೆಯಿಂದ ನನ್ನ ದುಃಖಕರ ಕಥೆ ಓದಿದ್ದಕ್ಕೆ ಧನ್ಯವಾದ.