ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಗೊಂದಲದಲ್ಲಿ ಕೆಜೆಪಿ ಕಾರ್ಯಕರ್ತರು

Lingaraj Badiger
Updated On : 17 Sept 2013, 11:47 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಸೆ. 16
ನರೇಂದ್ರ ಮೋದಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯೆಂದು ಘೋಷಣೆಯಾದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ, ಕೆಜೆಪಿ ಸಂಸ್ಥಾಪಕ ಬಿ.ಎಸ್. ಯಡಿಯೂರಪ್ಪ ಮತ್ತೆ ಬಿಜೆಪಿಗೆ ಮರಳಲಿದ್ದಾರೆಂಬ ಸುದ್ದಿ ಬಲವಾಗಿದೆ. ಇದು ಬಿಜೆಪಿ ತೊರೆದು ಕೆಜೆಪಿ ಸೇರಿರುವ ಕಾರ್ಯಕರ್ತರಲ್ಲಿ ಹೊಯ್ದಾಟ ಹುಟ್ಟು ಹಾಕಿದೆ.
ನರೇಂದ್ರ ಮೋದಿ ಹಾಗೂ ಬಿ.ಎಸ್. ಯಡಿಯೂರಪ್ಪನವರ ಒಡನಾಟ ಉತ್ತಮವಾಗಿದೆ. ಹೀಗಾಗಿ ಯಡಿಯೂರಪ್ಪ ಅವರನ್ನು ಮೋದಿ ಪುನಃ ಬಿಜೆಪಿಗೆ ಕರೆ ತರಬಹುದು ಎನ್ನುವ ಮಾತು ಎಲ್ಲೆಡೆ ಜನಜನಿತವಾಗಿದೆ. ಈ ಮಧ್ಯೆ ಕೆಜೆಪಿಗೆ ಬಿಜೆಪಿ, ಬಿಜೆಪಿಗೆ ಕೆಜೆಪಿ ಅನಿವಾರ್ಯ.
ಈ ಎರಡೂ ಪಕ್ಷಗಳು ಒಂದಾಗದೇ ಹೋದಲ್ಲಿ ಕಾಂಗ್ರೆಸ್ ರಾಜಕೀಯ ಲಾಭ ಪಡೆದುಕೊಳ್ಳಲಿದೆ ಎನ್ನುವ ಸಾರ್ವತ್ರಿಕ ಅಭಿಪ್ರಾಯ ವ್ಯಕ್ತವಾಗುತ್ತಿರುವುದರಿಂದ ಯಡಿಯೂರಪ್ಪ ಬಿಜೆಪಿ ಸೇರಲಿದ್ದಾರೆಂದೇ ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಎಸ್‌ವೈ ಬಿಜೆಪಿ ಸೇರಿದ್ದೇ ಆದಲ್ಲಿ ತಮ್ಮ ಕಥೆ ಏನು? ಎಂಬ ಚಿಂತೆ ಬಿಎಸ್‌ವೈರನ್ನು ನಂಬಿ ಕೆಜೆಪಿ ಸೇರಿರುವ ಕಾರ್ಯಕರ್ತರನ್ನು ಕಾಡಲಾರಂಭಿಸಿದೆ.
ಬಿಜೆಪಿ ತೊರೆದು ಕೆಜೆಪಿಯಲ್ಲಿ ನೆಲೆ: ಅಸಲಿಗೆ ಬಿಜೆಪಿಯಲ್ಲಿ ಕಡೆಗಣಿಸಲ್ಪಟ್ಟಿರುವುದರಿಂದಲೇ ಯಡಿಯೂರಪ್ಪ ಸೇರಿದಂತೆ ಇನ್ನಿತರ ಮುಖಂಡರು ಕಾರ್ಯಕರ್ತರು ಬಿಜೆಪಿ ತೊರೆದು ಕೆಜೆಪಿ ಹುಟ್ಟು ಹಾಕಿ ಅಲ್ಲಿ ನೆಲೆ ಕಂಡು ಕೊಂಡಿದ್ದಾರೆ. ಒಂದು ಹಂತದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವಿನ ಓಟಕ್ಕೆ ಮೂಗುದಾರ ಹಾಕುವಲ್ಲಿಯೂ ಕೆಜೆಪಿ ಯಶಸ್ವಿಯಾಗಿದೆ. ಬಿಜೆಪಿಗರು ರಾಜಕೀಯವಾಗಿ ತಮ್ಮ ಬದ್ದ ವೈರಿಗಳು ಎಂಬಂತೆ ಕೆಜೆಪಿಯರು ಕಂಡಿದ್ದಾಗಿದೆ. ಹೀಗಿರುವಾಗ ಪುನಃ ಬಿಜೆಪಿಗರೊಂದಿಗೆ ಬೆರೆಯುವುದು ಹೇಗೆ? ಎಂಬ ಪ್ರಶ್ನೆಯೊಂದಿಗೆ ತೊಳಲಾಡುತ್ತಿದ್ದಾರೆ ಕೆಜೆಪಿಯ ಸಾಮಾನ್ಯ ಕಾರ್ಯಕರ್ತರು. ಇದರೊಟ್ಟಿಗೆ ಯಡಿಯೂರಪ್ಪ ಆದಿಯಾಗಿ ಮುಂಚೂಣಿಯಲ್ಲಿರುವ ಮುಖಂಡರು ಬಿಜೆಪಿ ಸೇರಿ ನೆಲೆ ಕಂಡುಕೊಳ್ಳಬಹುದು. ಆದರೆ, ತಮ್ಮಂತ ಸಾಮಾನ್ಯ ಕಾರ್ಯಕರ್ತರು ಸ್ಥಳೀಯ ಬಿಜೆಪಿ ಮುಖಂಡರಿಂದ ತೊಂದರೆ ಅನುಭವಿಸಬಹುದು, ರಾಜಕೀಯ ಬೆಳವಣಿಗೆ ಕುಂಠಿತಗೊಳ್ಳಬಹುದು ಎನ್ನುವ ಆತಂಕ ಕಾರ್ಯಕರ್ತರದ್ದು.
ಹಾವು-ಮುಂಗುಸಿ ಸಂಬಂಧ: ಗದಗ, ಹಾವೇರಿ ಹಾಗೂ ಧಾರವಾಡ ಸೇರಿದಂತೆ ಅವಿಭಜಿತ ಧಾರವಾಡ ಜಿಲ್ಲಾ ವ್ಯಾಪ್ತಿಗೆ ಕೆಲ ದಿನಗಳ ಹಿಂದಷ್ಟೇ ವಿಧಾನಪರಿಷತ್ ಉಪಚುನಾವಣೆ ನಡೆದಿತ್ತು. ಈ ಸಂದರ್ಭ ಕೆಜೆಪಿ ಕಾಯಕರ್ತರು ಹಿರಿಯ ಮುಖಂಡರ ಒತ್ತಾಸೆ ಮೇರೆಗೆ ಬಿಜೆಪಿಗೆ ಸಾಥ್ ನೀಡಿದ್ದರಾದರೂ ಯಾರೂ ಒಮ್ಮನಸ್ಸಿನಿಂದ ಬಿಜೆಪಿ ಗೆಲುವಿಗೆ ಶ್ರಮಿಸಿಲ್ಲ ಎನ್ನುವುದು ವಾಸ್ತವ. ಉಪಚುನಾವಣೆಯ ಮೂಲಕ ಮುಂಬರುವ ದಿನಗಳಲ್ಲಿ ಬಿಜೆಪಿ-ಕೆಜೆಪಿ ಸಖ್ಯ ಬೆಳೆಸುವ ಸೂಚನೆಯೂ ಇದಾಗಿತ್ತು. ಆದರೆ, ಒಡೆದ ಮನಸ್ಸು ಮಾತ್ರ ಕೂಡುವುದು ಅಷ್ಟು ಸಲೀಸಾಗಿಲ್ಲ.
ಏತನ್ಮಧ್ಯೆ ಕಳೆದ ಕೆಲ ದಿನಗಳ ಹಿಂದೆ ಹಾವೇರಿ ನಗರಸಭೆ ಅಧಿಕಾರ ಹಿಡಿಯುವ ವಿಷಯವಾಗಿಯೂ ಕೆಜೆಪಿ-ಬಿಜೆಪಿ ನಡುವೆ ಅಸಮಾಧಾನ ಬಹಿರಂಗಗೊಂಡಿತ್ತು. ಕೆಜೆಪಿ ಹಾಗೂ ಬಿಜೆಪಿಗರ ಮಧ್ಯೆ ಒಮ್ಮತ ಮೂಡದ ಪರಿಣಾಮ ಕೊನೆ ಗಳಿಗೆಯಲ್ಲಿ ಬಿಜೆಪಿ ಕಾಂಗ್ರೆಸ್‌ಗೆ ಬೆಂಬಲ ನೀಡಿತು. ಪರಿಣಾಮ ಹಾವೇರಿ ನಗರಸಭೆ ಕಾಂಗ್ರೆಸ್ ಪಾಲಾಗಿದೆ. ಬಿಎಸ್‌ವೈ ಬಿಜೆಪಿ ಸೇರುವ ಕಾಲ ಸನ್ನಿಹಿತವಾಗಿದೆ ಎನ್ನುವ ಕಾಲಕ್ಕೇ ಇಲ್ಲಿ ಕೆಜೆಪಿ-ಬಿಜೆಪಿ ಬೇಗುದಿಗೆ ಹೊರಬಿದ್ದಿರುವುದು ಇಂದಿಗೂ ಇವರಲ್ಲಿನ ಅಂತರ ದೂರವಾಗಿಲ್ಲ ಎಂದೇ ಅರ್ಥ.
ಕಾಂಗ್ರೆಸ್ ಬಿಟ್ಟವರ ಭವಿಷ್ಯ?: ಇನ್ನು ಬಿಜೆಪಿ ಬಿಟ್ಟು ಕೆಜೆಪಿ ಸೇರಿದವರು ಹೇಗೋ ಹಳೆಯ ಮನೆ ಎಂದು ಹೊಂದಿಕೊಂಡು ಹೋಗಬಹುದು. ಹೀಗಿರುವಾಗ ಕಾಂಗ್ರೆಸ್ ತ್ಯಜಿಸಿ ಯಡಿಯೂರಪ್ಪನವರ ಬೆನ್ನ ಹಿಂದೆ ಸಾಗಿದವರ ರಾಜಕೀಯ ಭವಿಷ್ಯವೇನು? ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಕಾಂಗ್ರೆಸ್ ಮಾಜಿ ಅಧ್ಯಕ್ಷ ಜಬ್ಬಾರಖಾನ್ ಹೊನ್ನಳ್ಳಿ ಕಾಂಗ್ರೆಸ್ ತೊರೆದು ಕೆಜೆಪಿಯಲ್ಲಿ ನೆಲೆ ಕಂಡುಕೊಂಡಿದ್ದಾರೆ. ಇವರು ಜಾತ್ಯತೀತ ಹಿನ್ನೆಲೆಯಿಂದ ಬಂದವರು.
ಹೀಗಿರುವಾಗ ಹೊನ್ನಳ್ಳಿಯವರು ಬಿಎಸ್‌ವೈ ಹಿಂದೆ ಬಿಜೆಪಿಗೆ ಹೋಗುವುದು ಅಸಾಧ್ಯದ ಮಾತು. ಮರಳಿ ಕಾಂಗ್ರೆಸ್ ಸೇರಬೇಕೆಂದರೆ ಸ್ಥಾನಮಾನದ ಚಿಂತೆ. ಇಂಥ ಸ್ಥಿತಿಯಲ್ಲಿ ಏನು ಮಾಡಬೇಕೆಂಬ ಚಿಂತೆ ಕಾಂಗ್ರೆಸ್ ಬಿಟ್ಟು ಬಂದವರು ಎದುರಿಸಲಿದ್ದಾರೆ. ಇವೆಲ್ಲದರ ಮಧ್ಯೆ ಕೆಜೆಪಿ ತೊರೆದು ಬಿಜೆಪಿ ಸೇರಿದರೂ ಅಲ್ಲಿ ಈ ಹಿಂದೆ ಇದ್ದ ಸ್ಥಾನಮಾನ ಸಿಗುತ್ತದೆಯೋ ಇಲ್ಲವೋ ಎನ್ನುವ ಆತಂಕವೂ ಇದೆ.
ಬಿಎಸ್‌ವೈರನ್ನು ನಂಬಿಕೊಂಡು ಬಿಜೆಪಿ ಹೋಗಬೇಕಷ್ಟೇ ಎಂದು ಕೆಜೆಪಿ ಕಾರ್ಯಕರ್ತರು ಅಸಹಾಯಕರಾಗಿ ನುಡಿಯುತ್ತಿದ್ದಾರೆ.
ಬಿಜೆಪಿ ಬಿಟ್ಟು ಕೆಜೆಪಿ ಸೇರುವ ವಿಷಯವಾಗಿ ಕಾರ್ಯಕರ್ತರ ವಲಯದಲ್ಲಿ ಇಷ್ಟೊಂದು ಗೊಂದಲವಿರುವಾಗ, ಕೆಜೆಪಿ ನಾಯಕರು ಅದ್ಹೇಗೆ ಕಾರ್ಯಕರ್ತರ ಮನವೊಲಿಸುತ್ತಾರೆಂಬ ಪ್ರಶ್ನೆ ಎದುರಾಗಿದ್ದು, ಇದಕ್ಕೆ ಕಾಲವೇ ಉತ್ತರಿಸಲಿದೆ.
- ಪ್ರಕಾಶ ಎಸ್. ಶೇಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement