ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

21ರಿಂದ 24ರ ವರೆಗೆ ಕೃಷಿಮೇಳ

Lingaraj Badiger
Updated On : 18 Sept 2013, 11:32 am

ಕನ್ನಡಪ್ರಭ ವಾರ್ತೆ, ಧಾರವಾಡ, ಸೆ. 17
ಆಹಾರ ಭದ್ರತೆಗಾಗಿ ಜಲ ಸಂರಕ್ಷಣೆ ಎಂಬ ವಿಷಯದಡಿ ಧಾರವಾಡ ಕೃಷಿ ವಿಶ್ವವಿದ್ಯಾಲಯ ಸೆ. 21ರಿಂದ 24ರ ವರೆಗೆ ವಿವಿ ಆವರಣದಲ್ಲಿ ಕೃಷಿಮೇಳ ಹಮ್ಮಿಕೊಂಡಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದ ಕೃಷಿ ವಿವಿ ಪ್ರಭಾರಿ ಕುಲಪತಿ ಡಾ. ಎಚ್.ಎಸ್. ವಿಜಯಕುಮಾರ, ಪ್ರತಿ ವರ್ಷದಂತೆ ಈ ಬಾರಿಯೂ ವಿಶ್ವವಿದ್ಯಾಲಯದಲ್ಲಿ ಕೃಷಿ ಮೇಳ ಏರ್ಪಡಿಸಲಾಗಿದೆ. ಅಲ್ಲದೇ, ಮೇಳಕ್ಕೆ ಅಗತ್ಯವಿರುವ ವ್ಯವಸ್ಥೆ ಮಾಡಲಾಗುತ್ತಿದ್ದು, ಒಟ್ಟು 555 ಮಳಿಗೆ ತೆರೆಯಲಾಗುತ್ತಿದೆ. ಸದ್ಯ ಮಳಿಗೆ ತಯಾರಿಕೆ ಕಾರ್ಯ ಶೇ. 90ರಷ್ಟು ಪೂರ್ಣಗೊಂಡಿದ್ದು, ಸೆ. 20ರೊಳಗಾಗಿ ಮಳಿಗೆಗಾಗಿ ನೋಂದಣಿ ಮಾಡಿದ ಅಂಗಡಿಕಾರರಿಗೆ ನೀಡಲಾಗುವುದು ಎಂದರು.
ನಾಲ್ಕು ದಿನಗಳ ಕಾಲ ನಡೆಯುವ ಈ ಕೃಷಿ ಮೇಳದಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಅಂದಾಜು 10ಲಕ್ಷಕ್ಕಿಂತ ಹೆಚ್ಚು ರೈತರು ಭೇಟಿ ನೀಡುವ ನಿರೀಕ್ಷೆಯಿದೆ. ಕೃಷಿಮೇಳದ ಮೂಲಕ ರೈತರಿಗೆ ಉಪಯುಕ್ತ ವಿವಿಧ ತಾಂತ್ರಿಕತೆಗಳನ್ನು ಪರಿಚಯಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಕೃಷಿ ಉತ್ಪನ್ನ ಹೆಚ್ಚಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಅಲ್ಲದೇ, ಕೃಷಿ ವಿವಿ ವತಿಯಿಂದ ಬಿಡುಗಡೆ ಹಂತದಲ್ಲಿರುವ ತಂತ್ರಜ್ಞಾನಗಳ ರೈತರಿಗೆ ಪ್ರಯೋಗ ಹಾಗೂ ವಿವಿಧ ಪ್ರಾತ್ಯಕ್ಷಿಕೆಗಳ ಮೂಲಕ ಮನದಟ್ಟಾಗುವ ರೀತಿಯಲ್ಲಿ ಕೃಷಿಮೇಳ ಆಯೋಜಿಸಲಾಗುತ್ತಿದೆ ಎಂದರು.
ಒಡಂಬಡಿಕೆ: ಕೃಷಿ ವಿಶ್ವವಿದ್ಯಾಲಯ ಪ್ರಸಕ್ತ ಸಾಲಿನಲ್ಲಿ ಎಸ್ಪಿಎಚ್-1655 ಜೋಳ, ಡಿಎಸ್ಎಫ್ಎಚ್-3 ಸೂರ್ಯಕಾಂತಿ ಹೈಬ್ರಿಡ್, ಎಸ್ಎನ್ಕೆ-632 ಕಬ್ಬು, ವೆಂಗುರ್ಲಾ-3 ಗೋಡಂಬಿ, ಡಿಬಿಆರ್ಎಸ್-1 ಬ್ರಖೇರಿಯಾ ರುಜಿಜಿನಿಸಿಸ್ ಹುಲ್ಲು ಬೆಳೆಗಳ ತಳಿ ಸೇರಿದಂತೆ ಅನೇಕ ತಂತ್ರಜ್ಞಾನಗಳನ್ನು ಶಿಫಾರಸುಗೊಳಿಸಿದೆ. ಅಲ್ಲದೇ, ಸಾವಯವ ಕೃಷಿಗಾಗಿ ಒಟ್ಟು 25 ಟನ್ ಜೈವಿಕ ಗೊಬ್ಬರ ಹಾಗೂ 20 ಟನ್ ಜೈವಿಕ ಪೀಡೆನಾಶಕಗಳನ್ನು ಉತ್ಪಾದಿಸಿದ್ದು, ರೈತರಿಂದ ಇವುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಶ್ವವಿದ್ಯಾಲಯ ವಿವಿಧ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಶಿಕ್ಷಣ, ಸಂಶೋಧನೆ ಹಾಗೂ ವಿಸ್ತರಣೆ ಚಟುವಟಿಕೆಗಾಗಿ ಒಡಂಬಡಿಕೆ ಮಾಡಿಕೊಂಡಿದೆ ಎಂದು ವಿವರಿಸಿದರು.
ವಿವಿಧ ತಳಿ ಉತ್ಪಾದಿಸುವ ಗುರಿ: 2012-13ನೇ ಸಾಲಿನಲ್ಲಿ ಬೀಜೋತ್ಪಾದನೆ ಘಟಕ ಒಟ್ಟು 1.9 ಲಕ್ಷ ಕ್ವಿಂಟಲ್ ಬೀಜ ಉತ್ಪಾದನೆ ಗುರಿ ಸಾಧಿಸಿದೆ. ಅಂತೆಯೇ, ಒಟ್ಟು 96.819 ವಿವಿಧ ಜಾತಿಯ ತೋಟಗಾರಿಕೆ ಸಸಿಗಳನ್ನು ಉತ್ಪಾದಿಸಿ ರೈತರಿಗೆ ಮಾರಾಟ ಮಾಡಿ ರು. 20,72,467 ಆದಾಯ ಗಳಿಸಿದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು 1.10 ಲಕ್ಷ ಕ್ವಿಂಟಲ್ ಬೀಜ, 8.75ಲಕ್ಷ ಸಂಖ್ಯೆಯಷ್ಟು ಉತ್ತಮ ಗುಣಮಟ್ಟದ ವಿವಿಧ ತಳಿಗಳ ತೋಟಗಾರಿಕೆ, ಔಷಧ ಮತ್ತು ಅರಣ್ಯ ಸಸಿಗಳನ್ನು ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದರು.
ಸಿಎಂರಿಂದ ಕೃಷಿಮೇಳಕ್ಕೆ ಚಾಲನೆ: ಸೆ. 21ರಂದು ಬೆಳಗ್ಗೆ 10ಕ್ಕೆ ಬೀಜಮೇಳ ಉದ್ಘಾಟನೆಗೊಳ್ಳಲಿದೆ. ಸೆ. 22ರಂದು ಬೆಳಗ್ಗೆ 10ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೃಷಿಮೇಳಕ್ಕೆ ಚಾಲನೆ ನೀಡಲಿದ್ದಾರೆ.
ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಸಚಿವರಾದ ಕೃಷ್ಣ ಭೈರೇಗೌಡ, ಆರ್.ವಿ. ದೇಶಪಾಂಡೆ, ಟಿ.ಬಿ. ಜಯಚಂದ್ರ, ಬಿ. ರಮಾನಾಥ ರೈ, ಎಚ್.ಕೆ. ಪಾಟೀಲ, ಶಾಮನೂರ ಶಿವಶಂಕರಪ್ಪ, ಪ್ರಕಾಶ ಬಿ. ಹುಕ್ಕೇರಿ, ಸತೀಶ ಜಾರಕಿಹೊಳಿ, ಕೆ. ಅಭಯಚಂದ್ರ ಜೈನ್ ಭಾಗವಹಿಸಲಿದ್ದಾರೆ. ಶಾಸಕ ವಿನಯ ಕುಲಕರ್ಣಿ ಅಧ್ಯಕ್ಷತೆ ವಹಿಸುವರು ಎಂದು ವಿಜಯಕುಮಾರ ತಿಳಿಸಿದರು.
ಸಂಶೋಧನಾ ನಿರ್ದೇಶಕ ಡಾ. ಬಿ.ಎಂ. ಖಾದಿ, ವಿಸ್ತರಣೆ ನಿರ್ದೇಶಕ ಡಾ. ಎಲ್, ಕೃಷ್ಣ ನಾಯಕ್ ಮತ್ತಿತರು ಸುದ್ದಿಗೋಷ್ಠಿಯಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement