ಅಧಿಕಾರ ಸಮರ್ಥ ಬಳಕೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಸೆ. 17
ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ನೀಡುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ, ಇರುವ ಅಧಿಕಾರ ವ್ಯಾಪ್ತಿಯಲ್ಲಿಯೇ ಪರಿಣಾಮಕಾರಿ ಕೆಲಸ ಮಾಡುವುದಾಗಿ ಲೋಕಾಯುಕ್ತ ನ್ಯಾಯಮೂರ್ತಿ ಡಾ ವೈ. ಭಾಸ್ಕರ ರಾವ್ ಹೇಳಿದ್ದಾರೆ.
ನಗರದ ಕಿಮ್ಸ್ಗೆ ಮಂಗಳವಾರ ಬೆಳಗ್ಗೆ ಭೇಟಿ ನೀಡಿ, ಆಸ್ಪತ್ರೆ ಪರಿಶೀಲಿಸಿದ ನಂತರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಡಾ ಭಾಸ್ಕರ ರಾವ್ ಮಾತನಾಡಿ, ಸರ್ಕಾರ ನೀಡಿರುವ ಅಧಿಕಾರವನ್ನು ಸಮರ್ಥವಾಗಿ ಬಳಸಿಕೊಳ್ಳುವುದಾಗಿ ತಿಳಿಸಿದರು.
ಕಿಮ್ಸ್ನಲ್ಲಿ ಪ್ರತಿದಿನ 300ಕ್ಕೂ ಹೆಚ್ಚು ಹೆರಿಗೆ ನಡೆಯುತ್ತಿದ್ದು, ಹೊರರೋಗಿ ವಿಭಾಗಕ್ಕೆ 2,500ಕ್ಕೂ ಹೆಚ್ಚು ರೋಗಿಗಳು ಭೇಟಿ ನೀಡುತ್ತಿದ್ದಾರೆ. ಆಸ್ಪತ್ರೆಯಲ್ಲಿ ಒಂದಿಷ್ಟು ಸುಧಾರಣೆಗಳ ಅವಶ್ಯಕತೆ ಇದ್ದು, ಈ ಕುರಿತು ಕಿಮ್ಸ್ ನಿರ್ದೇಶಕರಿಗೆ ಸೂಚಿಸಿದ್ದಾಗಿ ಹೇಳಿದರು.
ಗರ್ಭಿಣಿಯರಿಗೆ ಪ್ರತ್ಯೇಕ ವಿಭಾಗಗಳನ್ನು ಮಾಡಬೇಕಿರುವ ಅಗತ್ಯವಿದೆ. ಆಸ್ಪತ್ರೆಯಲ್ಲಿ ಶುಚಿತ್ವ ಕಾಯ್ದುಕೊಳ್ಳಲಾಗಿದೆ. ಜನದಟ್ಟಣೆ ಹೆಚ್ಚಾಗಿದ್ದು, ರೋಗಿಗಳ ಪರಿಶೀಲನೆಯೂ ಉತ್ತಮವಾಗಿ ನಡೆಯುತ್ತಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಕಿಮ್ಸ್ ಆಸ್ಪತ್ರೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಲೋಕಾಯುಕ್ತ ಡಿವೈಎಸ್ಪಿ ಮಹೇಶ ಮೇಘಣ್ಣವರ, ಮಹಾನಗರ ಪೊಲೀಸ್ ಆಯುಕ್ತ ಪದ್ಮನಯನ, ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಪಿ. ಮೇಘಣ್ಣವರ ಮತ್ತಿತರರು ಹಾಜರಿದ್ದರು.
ಇದಕ್ಕೂ ಮೊದಲು ಕಿಮ್ಸ್ ಆಸ್ಪತ್ರೆಯ ಕ್ಯಾಥಲ್ಯಾಬ್, ಒಳ ರೋಗಿಗಳ ವಿಭಾಗ, ತುರ್ತು ಚಿಕಿತ್ಸಾ ಘಟಕ, ಮತ್ತಿತರ ವಿಭಾಗಗಳಿಗೆ ಲೋಕಾಯುಕ್ತ ನ್ಯಾಯಮೂರ್ತಿ ಡಾ ಭಾಸ್ಕರ ರಾವ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ವೈದ್ಯಕೀಯ ಸಿಬ್ಬಂದಿ ಕಾರ್ಯ ವೈಖರಿ, ಸೌಲಭ್ಯಗಳ ಕುರಿತು ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಗಳೊಂದಿಗೆ ಚರ್ಚಿಸಿದರು.
---