ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಅನುದಾನಿತ ಶಿಕ್ಷಣ ಸಂಸ್ಥೆ ನೌಕರರಿಗೆ ಸೌಲಭ್ಯ

Lingaraj Badiger
Updated On : 18 Sept 2013, 11:26 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಸೆ. 17
ರಾಜ್ಯದ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಅನುದಾನರಹಿತ ಸೇವೆಯನ್ನು ವೇತನ, ಪಿಂಚಣಿ, ರಜೆ ಹಾಗೂ ಇತರ ಎಲ್ಲ ಸೌಲಭ್ಯಗಳಿಗೆ ಪರಿಗಣಿಸುವ ಬಗ್ಗೆ ಸರ್ವೋಚ್ಚ ನ್ಯಾಯಾಲಯ ಕಳೆದ ಆ. 21ರಂದು ನೀಡಿದ ತೀರ್ಪನ್ನು ಅನುಷ್ಠಾನಗೊಳಿಸಲು ಸರ್ಕಾರ ಆದೇಶ ಹೊರಡಿಸಬೇಕು ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಒತ್ತಾಯಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಹೊರಟ್ಟಿ, ಕೇವಲ ನ್ಯಾಯಾಲಯದಿಂದ ಆದೇಶ ಪಡೆದವರಿಗೆ ಈ ಸೌಲಭ್ಯ ವಿಸ್ತರಿಸಿದಲ್ಲಿ ರಾಜ್ಯದ ಸಾವಿರಾರು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು ಹಾಗೂ ನಿವೃತ್ತ ನೌಕರರು ನ್ಯಾಯಾಲಯಕ್ಕೆ ಅಲೆದಾಡಿ ವಿನಾಕಾರಣ ಹಾನಿಗೊಳಗಾಗುತ್ತಾರೆ ಎಂದು ತಿಳಿಸಿದ್ದಾರೆ.
ಅನೇಕ ಬಾರಿ ರಿಟ್: ನೌಕರರ ಅನುದಾನರಹಿತ ಸೇವಾ ಅವಧಿಯನ್ನು ವೇತನ ನಿಗದಿ ಪಡಿಸುವಿಕೆ, ಪಿಂಚಣಿ ನಿಗದಿ, ರಜೆ ಮತ್ತಿತರ ಸೌಲಭ್ಯಗಳಿಗೆ ಪರಿಗಣಿಸುವಂತೆ ಹಲವಾರು ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ಉಚ್ಚ ನ್ಯಾಯಾಲಯದಲ್ಲಿ ಅನೇಕ ಬಾರಿ ರಿಟ್ ದಾಖಲಿಸಿದ್ದರು. ಅರ್ಜಿದಾರರ ಕೋರಿಕೆಗಳನ್ನು ಪುರಸ್ಕರಿಸಿ ನ್ಯಾಯಾಲಯ ಅವರಿಗೆ ಅಗತ್ಯ ಸೌಲಭ್ಯ ನೀಡಲು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಲೀವ್ ಪಿಟಿಶನ್ ದಾಖಲಿಸಿತ್ತು. ಸರ್ವೋಚ್ಚ ನ್ಯಾಯಾಲಯ ಕೆಲ ಪ್ರಕರಣಗಳನ್ನು ಇತ್ಯರ್ಥಪಡಿಸಿ ಅನುದಾನ ರಹಿತ ಅವಧಿಯ ಎಲ್ಲ ಸೇವಾ ಸೌಲಭ್ಯಗಳನ್ನು ನೀಡುವ ಕರ್ನಾಟಕದ ಉಚ್ಚ ನ್ಯಾಯಾಲಯದ ಆದೇಶ ಎತ್ತಿ ಹಿಡಿದು ಸರ್ಕಾರದ ಲೀವ್ ಪಿಟಿಶನ್ ತಿರಸ್ಕರಿಸಿದೆ. ಇದರಿಂದ ರಾಜ್ಯದ ಅನುದಾನಿತ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಕಾಲೇಜುಗಳ ಸಿಬ್ಬಂದಿ ಹಾಗೂ ಐಟಿಐ, ಡಿಪ್ಲೊಮಾ, ಪ್ರಥಮ ದರ್ಜೆ ಕಾಲೇಜು, ಎಂಜಿನಿಯರಿಂಗ್ ಕಾಲೇಜುಗಳ ಸಿಬ್ಬಂದಿ ಸಹ ಅನುದಾನ ರಹಿತ ಸೇವೆಯ ಅವಧಿಯಲ್ಲಿನ ಎಲ್ಲ ಸೌಲಭ್ಯಗಳನ್ನು ಪಡೆಯಲು ಅರ್ಹತೆ ಹೊಂದಿದ್ದಾರೆ.
ತಕ್ಷಣ ಆದೇಶ: ಸರ್ವೋಚ್ಚ ನ್ಯಾಯಾಲಯವು ಎಸ್ಎಲ್ಪಿಯನ್ನು ತಿರಸ್ಕರಿಸಿರುವುದರಿಂದ ಸರ್ಕಾರಕ್ಕೆ ಪರ್ಯಾಯ ಮಾರ್ಗವಿಲ್ಲದಂತಾಗಿದೆ. ಕೂಡಲೇ ಸಾರ್ವತ್ರಿಕವಾಗಿ ರಾಜ್ಯದ ಎಲ್ಲ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ಹಾಗೂ ನಿವೃತ್ತ ನೌಕರರಿಗೆ ಅನುದಾನ ರಹಿತ ಅವಧಿಯ ಎಲ್ಲ ಸೌಲಭ್ಯ ಕೊಡಲು ತಕ್ಷಣ ಆದೇಶ ಹೊರಡಿಸಬೇಕು ಎಂದು ಹೊರಟ್ಟಿ ಪತ್ರದ ಮೂಲಕ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement