ಕ್ಷೀರಭಾಗ್ಯ ಹಾಲಿನಲ್ಲಿ ಹುಳು: ಮಕ್ಕಳಲ್ಲಿ ಆತಂಕ
ಕಲಘಟಗಿ: ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಹಾಗೂ ಆದರ್ಶ ವಿದ್ಯಾಲಯದ ಶಾಲಾ ಮಕ್ಕಳಿಗೆ ನೀಡಲಾದ ಕ್ಷೀರಭಾಗ್ಯ ಯೋಜನೆಯ ಹಾಲಿನ ಪ್ಯಾಕೇಟ್ಗಳಲ್ಲಿ ಜೀವಂತ ಹುಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಲು ಕುಡಿಯದೆ ಆತಂಕಕ್ಕೊಳಗಾದರು. ಎಂದಿನಂತೆ ಮಂಗಳವಾರ ಶಾಲಾ ಹಾಲಿನ ಪ್ಯಾಕೇಟ್ಗಳನ್ನು ಒಡೆದು ಸ್ಟೀಲಿನ ಲೋಟಗಳಲ್ಲಿ ವಿದ್ಯಾರ್ಥಿಗಳಿಗೆ ಸರದಿಯಂತೆ ವಿತರಿಸುವ ವೇಳೆ ಹತ್ತಾರು ವಿದ್ಯಾರ್ಥಿಗಳ ಲೋಟಗಳಲ್ಲಿ ಜೀವಂತ ಹುಳುಗಳು ಕಾಣಿಸಿಕೊಂಡಿರುವುದನ್ನು ಶಿಕ್ಷಕರಿಗೆ ತೋರಿಸುತ್ತಿದ್ದಂತೆ ಭಯಭೀತರಾದ ಶಿಕ್ಷಕರು ತಕ್ಷಣ ಸ್ಥಳೀಯ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಿಗೆ ಇಸ್ಕಾನ್ ಸಂಸ್ಥೆಯವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿರುವುದಾಗಿ ಸ್ಥಳಕ್ಕೆ ಭೇಟಿ ನೀಡಿದ ಪತ್ರಿಕೆಗೆ ಶಿಕ್ಷಕ ಎಚ್.ಡಿ. ಲಾಡಖಾನ್ ಅವರು ವಿವರಿಸಿದರಲ್ಲದೆ, ಇದೇ ಶಾಲೆಯ ಆವರಣದಲ್ಲಿರುವ ಸರ್ಕಾರಿ ಪ್ರೌಢಶಾಲೆ, ಉರ್ದು ಪ್ರೌಢಶಾಲಾ ಮಕ್ಕಳಿಗೆ ಹಾಲನ್ನು ನೀಡಲಾಗಿಲ್ಲ. ಹಾಲಿನ ತಪಾಸಣೆ ನಡೆಸಿ ಮರಳಿ ಕಳುಹಿಸುವುದಾಗಿ ತಿಳಿಸಿದರು. ಈ ಕುರಿತು ತಾಪಂ ಕಾರ್ಯನಿರ್ವಾಹಕಾಧಿಕಾರಿ ಎಸ್.ಆರ್. ವೀತರಕರ ಅವರು ಈ ಕುರಿತು ನಮಗೂ ದೂರುಗಳು ಬಂದಿದ್ದು, ಇಂದೇ ಇಸ್ಕಾನ್ದವರಿಗೆ ಪತ್ರ ಬರೆಯುವುದಾಗಿ ತಿಳಿಸಿದರು.
ಶಾರ್ಟ್ಸರ್ಕ್ಯೂಟ್: ಹಾನಿ
ಹುಬ್ಬಳ್ಳಿ: ವಿದ್ಯುತ್ ಶಾರ್ಟ್ಸರ್ಕ್ಯೂಟ್ನಿಂದಾಗಿ ಹೊತ್ತಿಕೊಂಡ ಬೆಂಕಿಯಿಂದಾಗಿ ಇಲ್ಲಿಯ ವಿದ್ಯಾನಗರದಲ್ಲಿರುವ ಮೋರ್ ಮಳಿಗೆಯಲ್ಲಿನ ಸುಮಾರು ರು. 4 ಲಕ್ಷ ಮೌಲ್ಯದ ವಸ್ತುಗಳು ಸುಟ್ಟುಹೋದ ಘಟನೆ ಮಂಗಳವಾರ ಬೆಳಗ್ಗೆ ಸಂಭವಿಸಿದೆ. ಮಳಿಗೆಯಲ್ಲಿನ ಕಂಪ್ಯೂಟರ್ ಬ್ಯಾಟರಿ, ಯುಪಿಎಸ್ನಲ್ಲಿ ಶಾರ್ಟ್ಸರ್ಕ್ಯೂಟ್ ಉಂಟಾಗಿ ಮಳಿಗೆಯಾದ್ಯಂತ ಬೆಂಕಿ ಕಿಡಿಗಳು ಆವರಿಸಿವೆ. ಈ ಅವಘಡದಲ್ಲಿ ಕಂಪ್ಯೂಟರ್, ಮಾರಾಟಕ್ಕಿಟ್ಟಿದ್ದ ಬಿಸ್ಕೆಟ್, ಚೀಪ್ಸ್ ಸೇರಿದಂತೆ ಲಕ್ಷಾಂತರ ಮೌಲ್ಯದ ಸಾಮಗ್ರಿಗಳು ಸುಟ್ಟಿವೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ, ಹೆಚ್ಚಿನ ಅನಾಹುತ ತಪ್ಪಿಸಿದರು. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಯಮ ಉಲ್ಲಂಘನೆ: ರು. 94,900 ದಂಡ ವಸೂಲಿ
ಹುಬ್ಬಳ್ಳಿ: ಅವಳಿ ನಗರದಲ್ಲಿ ಸೆ. 16ರಂದು ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಒಟ್ಟು 561 ಪ್ರಕರಣಗಳನ್ನು ದಾಖಲಿಸಿದ್ದು, ರು. 94,900 ದಂಡ ವಸೂಲಿ ಮಾಡಲಾಗಿದೆ ಎಂದು ಮಹಾನಗರ ಪೊಲೀಸ್ ಆಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.