ಲೋಕಾ ಸಿಬ್ಬಂದಿ ಶೀಘ್ರ ನೇಮಕ: ನ್ಯಾ. ಭಾಸ್ಕರರಾವ್
ಕನ್ನಡಪ್ರಭ ವಾರ್ತೆ, ಧಾರವಾಡ, ಸೆ. 17
ಲೋಕಾಯುಕ್ತ ಇಲಾಖೆಯಲ್ಲಿ ಮೂರನೇ ಒಂದು ಭಾಗದಷ್ಟು ಸಿಬ್ಬಂದಿ ಕೊರತೆ ಇದೆ. ಈ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲಿಯೇ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ರಾಜ್ಯ ಲೋಕಾಯುಕ್ತ ನ್ಯಾಯಮೂರ್ತಿ ಡಾ. ವೈ. ಭಾಸ್ಕರರಾವ್ ಹೇಳಿದರು.
ಸಾರ್ವಜನಿಕರ ಅಹವಾಲು ಸ್ವೀಕರಿಸಲು ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಗೆ ಸಂಬಂಧಿಸಿದಂತೆ ಹಳೆಯ 40 ಪ್ರಕರಣಗಳನ್ನು ಇತ್ಯರ್ಥ್ಥಗೊಳಿಸಲಾಗಿದೆ. ಸದ್ಯ ಹೊಸ ಪ್ರಕರಣಗಳ ಕುರಿತು ಹಲವಾರು ಅಹವಾಲುಗಳು ಬಂದಿವೆ. ಲೋಕಾಯುಕ್ತ ವ್ಯಾಪ್ತಿಗೆ ಬರುವ ಎಲ್ಲ ಪ್ರಕರಣಗಳನ್ನು ಶೀಘ್ರವೇ ವಿಲೇವಾರಿ ಮಾಡಲಾಗುವುದು ಎಂದರು.
ಶಾಲಾ ವಿದ್ಯಾರ್ಥಿನಿಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅರ್ಜಿ ಬಂದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿ ಶಾಲೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಪೊಲೀಸ್ ಬಂದೋಬಸ್ತ್ ನಡೆಸುವಂತೆ ಸೂಚಿಸಲಾಗಿದೆ. ಅಲ್ಲದೇ ವಯೋವೃದ್ಧರಿಗೆ ಪಿಂಚಣಿ ನೀಡುವಲ್ಲಿ ವಿಳಂಬ ಮಾಡಿದ ಕುರಿತು ವಿಚಾರಣೆ ನಡೆಸಿ ಶೀಘ್ರದಲ್ಲಿಯೇ ನಿವೃತ್ತ ನೌಕರರಿಗೆ ಪಿಂಚಣಿ ದೊರೆಯುವಂತೆ ಮಾಡಲಾಗುವುದು. ಜಿಲ್ಲೆಯಲ್ಲಿಯೂ ಸಹ ಹಲವಾರು ಶಾಲಾ, ಕಾಲೇಜುಗಳಲ್ಲಿ ಸೌಲಭ್ಯಗಳ ಕೊರತೆ ಕುರಿತು ಮಾಹಿತಿ ತಿಳಿದು ಬಂದಿದೆ. ಆದರೆ, ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ತಾವು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ದೂರು ಸಲ್ಲಿಸಿದರೆ ಅಲ್ಲಿ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಪ್ರತಿಯೊಂದು ಶಾಲಾ ಕಾಲೇಜಿನಲ್ಲಿ ಶಿಕ್ಷಣ ಕಾಯ್ದೆ ಪ್ರಕಾರ ಉತ್ತಮ ರೀತಿಯ ಶಿಕ್ಷಣ ಒದಗಿಸುವುದು ಸಂಬಂಧಪಟ್ಟ ಶಿಕ್ಷಣ ಇಲಾಖೆ ಅಧಿಕಾರಿಗಳ ಜವಾಬ್ದಾರಿ ಎಂದು ಹೇಳಿದರು.
ಉರ್ದು ಶಾಲೆಗೆ ಭೇಟಿ: ನಗರದ ಕೊಳಿಕೇರಿಯ ಉರ್ದು ಪ್ರಾಥಮಿಕ ಕಿರಿಯ ಶಾಲೆಗೆ ಮಂಗಳವಾರ ರಾಜ್ಯ ಲೋಕಾಯುಕ್ತ ನ್ಯಾಯಮೂರ್ತಿ ಡಾ. ವೈ. ಭಾಸ್ಕರರಾವ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಕ್ಕಳೊಂದಿಗೆ ಮಾತಕತೆ ನಡೆಸಿ, ಅಲ್ಲಿನ ಸ್ಥಿತಿ ತಿಳಿದುಕೊಂಡರು. ಚಿಕ್ಕ ಕೋಣೆಯಲ್ಲಿ 1ರಿಂದ 4ನೇ ತರಗತಿಗಳು ನಡೆಯುತ್ತಿರುವುದು ಸರಿಯಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿದೆ. ಆದ್ದರಿಂದ ಕೂಡಲೇ ಒಂದು ತಿಂಗಳೊಳಗಾಗಿ ಈ ಶಾಲೆಯನ್ನು ಬೇರೆಡೆಗೆ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.