ಮೋನೋ ರೈಲು ಸದ್ದು
ಬೆಂಗಳೂರು: ರಾಜ್ಯದ ಟಯರ್-2 ನಗರಗಳಲ್ಲಿ ಮೋನೋ ರೈಲು ಸಂಚಾರಕ್ಕೆ ಸರ್ಕಾರ ಉತ್ಸುಕವಾಗಿದ್ದು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿಯಲ್ಲಿ ಮೋನೋ ರೈಲು ಪ್ರಾರಂಭಿಸುವ ಉದ್ದೇಶವಿದೆ ಎಂದು ವಾರ್ತಾ ಮತ್ತು ಮೂಲಸೌಕರ್ಯ ಖಾತೆ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲೂ ಮೋನೋ ರೈಲು ಪ್ರಾರಂಭಕ್ಕೆ ಆಲೋಚನೆಗಳಿವೆ. ಸಾಧ್ಯಾಸಾಧ್ಯತೆ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಹೇಳಿದರು. ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಯೋಜನೆಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗುತ್ತಿದ್ದು, ಮೋನೋ ರೈಲು ಪ್ರಾರಂಭಕ್ಕೆ ಮಲೇಷ್ಯಾ ಕಂಪನಿ ಸೇರಿದಂತೆ ಹಲವು ಕಂಪನಿಗಳು ಆಸಕ್ತಿ ತೋರಿವೆ. ಈ ಕಂಪನಿಗಳು ಯಾವ ನಗರದಲ್ಲಿ ಎಷ್ಟು ಕಿ.ಮೀ. ಮೋನೋ ರೈಲು ಸಂಚರಿಸುತ್ತದೆ ಎಂಬ ಬಗ್ಗೆ ವರದಿ ನೀಡಲಿವೆ. ಮುಂದಿನ ಒಂದೂವರೆ ತಿಂಗಳಲ್ಲಿ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದರು.
ಮೋನೋ ರೈಲಿಗೆ ಪ್ರತಿ ಕಿ.ಮೀ.ಗೆ ರು. 80ರಿಂದ ರು. 100 ಕೋಟಿ ವೆಚ್ಚವಾಗುವ ಅಂದಾಜಿದೆ. ಭೂಮಿ ಸ್ವಾಧೀನ ಸೇರಿದರೂ 120 ಕೋಟಿ ಮೀರುವುದಿಲ್ಲ. ಆದರೆ ಈ ಬಗ್ಗೆ ಸಂಪೂರ್ಣ ವಿನ್ಯಾಸ ಹಾಗೂ ಸಮಗ್ರ ವರದಿ ಪಡೆದ ಮೇಲಷ್ಟೇ ಎಲ್ಲ ವಿವರ ಬಹಿರಂಗಪಡಿಸಲಾಗುತ್ತದೆ ಎಂದರು.
ಮೂಲಸೌಕರ್ಯ ಇಲಾಖೆ ವತಿಯಿಂದ 14 ರೇಲ್ವೆ ಯೋಜನೆಗಳನ್ನು ನಿರ್ವಹಿಸಲಾಗುತ್ತಿದ್ದು, ಇದರಲ್ಲಿ ಎರಡು ಮುಗಿದಿವೆ. ಉಳಿದ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಕೇಂದ್ರ ರೇಲ್ವೆ ಸಚಿವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂಲಕ ಮನವಿ ಪತ್ರ ಸಲ್ಲಿಸಲಾಗಿದೆ. ನಮ್ಮಿಂದ ಭೂಸ್ವಾಧೀನ ಸೇರಿದಂತೆ ಎಲ್ಲ ಪ್ರಕ್ರಿಯೆಗಳು ನಡೆದಿದ್ದರೂ ಕೆಲವು ಯೋಜನೆಗಳು ವಿಳಂಬವಾಗುತ್ತಿವೆ. ಇದರಿಂದ ಹೆಚ್ಚಿನ ಹಣವೂ ವ್ಯಯವಾಗುತ್ತಿದೆ. ಇದನ್ನೆಲ್ಲ ಕೇಂದ್ರ ಸಚಿವರಿಗೆ ವಿವರಿಸಲಾಗಿದೆ ಎಂದರು.
ಗುಲ್ಬರ್ಗ, ಶಿವಮೊಗ್ಗ, ಬಿಜಾಪುರ, ಹಾಸನದಲ್ಲಿ ವಿಮಾನ ನಿಲ್ದಾಣ ಕುರಿತಂತೆ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ವರದಿ ನಿರೀಕ್ಷಿಸಲಾಗಿದೆ. ಇದರಿಂದ ಎಲ್ಲ ರೀತಿಯ ಕ್ರಮ ಕೈಗೊಂಡು ಭೂಸ್ವಾಧೀನ ಸೇರಿದಂತೆ ಎಲ್ಲ ಪ್ರಕ್ರಿಯೆ ಪೂರೈಸಲಾಗುತ್ತದೆ. ಬಳ್ಳಾರಿ ವಿಮಾನ ನಿಲ್ದಾಣದ ಬಗ್ಗೆ ಲಾಭದಾಯಕವಲ್ಲ ಎಂದು ಪ್ರಾಧಿಕಾರ ವರದಿ ನೀಡಿದೆ. ಎಲ್ಲವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಸೆಸ್‌ಗೆ ಚಿಂತನೆ: ಜಿಲ್ಲಾ ಮಟ್ಟದ ಅಭಿವೃದ್ಧಿಗಾಗಿ ಸೆಸ್ ಸಂಗ್ರಹಿಸುವ ಬಗ್ಗೆ ಆಲೋಚನೆ ಮಾಡಲಾಗುತ್ತಿದೆ. ಟಯರ್-2 ನಗರಗಳ ಅಭಿವೃದ್ಧಿಗಾಗಿ ಆಯಾ ಪಾಲಿಕೆಗಳಿಂದ ಸೆಸ್ ಸಂಗ್ರಹಿಸಬೇಕು. ಈ ಹಣವನ್ನು ಅದೇ ಜಿಲ್ಲೆ ಅಭಿವೃದ್ಧಿಗೆ ಬಳಸಬೇಕು. ಇಂತಹ ಆಲೋಚನೆ ಮಾಡಲಾಗುತ್ತದೆ ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದರು.
ರಾಜ್ಯ ಸರ್ಕಾರ ಸದ್ಯದಲ್ಲಿಯೇ ಮಾಹಿತಿ ನೀತಿಯನ್ನು ಜಾರಿಗೆ ತರಲಿದ್ದು, ಈ ಮೂಲಕ ಜಾಹೀರಾತು, ಪ್ರಚಾರ, ಪ್ರಕಟಣೆ ಸೇರಿದಂತೆ ಎಲ್ಲ ರೀತಿಯ ಪ್ರಕ್ರಿಯೆಗಳಿಗೆ ಮಾನದಂಡ ರಚನೆಯಾಗಲಿದೆ ಎಂದು ವಾರ್ತಾ ಸಚಿವರೂ ಆಗಿರುವ ಸಂತೋಷ್ ಲಾಡ್ ತಿಳಿಸಿದರು.
ಸರ್ಕಾರದ ಕಾರ್ಯಕ್ರಮಗಳು ಸೇರಿದಂತೆ ನಾಗರಿಕರಿಗೆ ತಲುಪಬೇಕಾದ ಮಾಹಿತಿಯನ್ನು ಆನ್‌ಲೈನ್, ಎಸ್‌ಎಂಎಸ್ ಮೂಲಕ ಒದಗಿಸಲಾಗುವುದು. ಇತರ ಸೌಲಭ್ಯಗಳನ್ನು ಬಳಸಿಕೊಳ್ಳುವ ಬಗ್ಗೆಯೂ ನೀತಿ ರಚನೆಯಾಗಲಿದೆ ಎಂದರು.
ವಾರ್ತಾ ಇಲಾಖೆಯ ಸಿಬ್ಬಂದಿ ಎರವಲು ಸೇವೆ ಮೇಲೆ ಬೇರೆಬೇರೆ ಇಲಾಖೆಗೆ ಹೋಗಿದ್ದಾರೆ. ಅವರೆಲ್ಲರನ್ನೂ ವಾಪಸ್ ಕರೆಯಿಸಿಕೊಂಡು ಇಲ್ಲೇ ಕಾರ್ಯನಿರ್ವಹಿಸುವಂತೆ ಮಾಡಲು ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.