ವಿಘ್ನೇಶನ ವಿಸರ್ಜನೆಗೆ ಶೆಟ್ಟರ್ ಚಾಲನೆ
ಹುಬ್ಬಳ್ಳಿ: ಕಳೆದ 10 ದಿನಗಳಿಂದ ನಗರದ ವಿವಿಧೆಡೆ ಪ್ರತಿಷ್ಠಾಪಿಸಿದ್ದ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಇಂದಿರಾ ಗಾಜಿನ ಮನೆ ಆವರಣದಲ್ಲಿರುವ ಬಾವಿಯಲ್ಲಿ ಬುಧವಾರ ವಿಸರ್ಜಿಸಲಾಯಿತು. ಸಾರ್ವಜನಿಕ ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆಗೆ ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ ಶೆಟ್ಟರ್ ದುರ್ಗದಬೈಲ್‌ನಲ್ಲಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶೆಟ್ಟರ್, ಜಾತಿ ಹಾಗೂ ಪಕ್ಷ ಭೇದ ಮರೆತು ಸಾರ್ವಜನಿಕರು ಗಣೇಶ ಚತುರ್ಥಿ ಆಚರಿಸುತ್ತಿರುವುದು ಸಂತಸದ ಸಂಗತಿ ಎಂದರು. ಆಶೀರ್ವಚನ ನೀಡಿದ ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳ ಗಣೇಶ ಚತುರ್ಥಿ ಸಂದರ್ಭದಲ್ಲಿ ಹಮ್ಮಿಕೊಳ್ಳುತ್ತಿರುವ ಚಟುವಟಿಕೆ ಶ್ಲಾಘನೀಯ. ಸರ್ವಧರ್ಮದವರು ಸೇರಿ ಹಬ್ಬಗಳನ್ನು ಆಚರಿಸುವುದರಿಂದ ಸಹೋದರತ್ವ ಹಾಗೂ ಭಾವೈಕ್ಯತೆಯ ಭಾವನೆ ಮೂಡುತ್ತದೆ ಎಂದು ಹೇಳಿದರು.ಸಂಸದ ಪ್ರಹ್ಲಾದ ಜೋಶಿ, ಶಾಸಕ ಪ್ರಸಾದ ಅಬ್ಬಯ್ಯ, ಮಾಜಿ ಸಚಿವ ಜಬ್ಬಾರಖಾನ ಹೊನ್ನಳ್ಳಿ, ವೀರಣ್ಣ ಹಂಜಿ, ಲಿಂಗರಾಜ ಪಾಟೀಲ, ಉದ್ದಿಮೆದಾರ ಜಿತೇಂದ್ರ ಮಜೇಥಿಯಾ, ಶಾಂತರಾಜ ಪೋಳ, ರಾಘವೇಂದ್ರ ಮುರಗೋಡ, ಸಿ.ಎಚ್. ಗೊಬ್ಬ, ಅನಿಲ ಕವಿಶೆಟ್ಟಿ ಮತ್ತಿತರರು ಅತಿಥಿಗಳಾಗಿದ್ದರು. ಮಹಾಮಂಡಳದ ಗೌರವ ಅಧ್ಯಕ್ಷ ಮೋಹನ ಲಿಂಬಿಕಾಯಿ, ಅಧ್ಯಕ್ಷ ಶ್ರೀಶೈಲಪ್ಪ ಶೆಟ್ಟರ, ಉಪಾಧ್ಯಕ್ಷ ಶ್ಯಾಮಸುಂದರ ಹಬೀಬ, ಅಲ್ತಾಫ ಕಿತ್ತೂರ, ಎಸ್.ಎಸ್. ಕಮಡೊಳ್ಳಿಶೆಟ್ರ, ಅಮರೇಶ ಹಿಪ್ಪರಗಿ ಮತ್ತಿತರರು ಹಾಜರಿದ್ದರು.