ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಸುದ್ದಿ ಸಂಕ್ಷೇಪ

Mainashree
Updated On : 19 Sept 2013, 11:06 am

ಗಡಿ ಕುರಿತಾದ ಕಾರ್ಯಕ್ರಮ
ಧಾರವಾಡ: ವಿದ್ಯಾವರ್ಧಕ ಸಂಘ ಹಾಗೂ ಸಶ್ರೀ ಕುಂಮಾವು ಪ್ರತಿಷ್ಠಾನ ಜಂಟಿಯಾಗಿ ಇಲ್ಲಿನ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಸೆ. 19 ರಂದು ಸಂಜೆ 6ಕ್ಕೆ ಪಾಕಿಸ್ತಾನ ಚೀನಾ ಗಡಿಯಲ್ಲಿ ನಮ್ಮ ರಾಷ್ಟ್ರೀಯ ಭದ್ರತೆ ವಿಷಯ ಕುರಿತಾದ ಕಾರ್ಯಕ್ರಮ ಹಮ್ಮಿಕೊಂಡಿದೆ. ಲೆ. ಜನರಲ್ ಎಸ್.ಸಿ. ಸರದೇಶಪಾಂಡೆ ಅಧ್ಯಕ್ಷತೆ ವಹಿಸುವರು. ಭಾಷಣಕಾರರಾಗಿ ಲೆ. ಜನರೆಲ್ ರಮೇಶ ಹಲಗಲಿ ಆಗಮಿಸುವರು ಎಂದು ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ದಿಶಾಂತರ ಪ್ರದರ್ಶನ
ಧಾರವಾಡ: ಇಲ್ಲಿನ ಪಾಟೀಲ ಪುಟ್ಟಪ ಸಭಾಭವನದಲ್ಲಿ ಸೆ. 19ರಂದು ಸಂಜೆ 6ಕ್ಕೆ ದಿಶಾಂತರ ತಿರುಗಾಟದ ನಾಟಕ ಪ್ರದರ್ಶನ ನಡೆಯಲಿದೆ. ಶ್ರತಿ ಸಂಸ್ಕೃತಿ ಸಂಸ್ಥೆ ಆಶಾಪುರ, ರಾಯಚೂರು ಇವರಿಂದ ಪ್ರಸ್ತುತಗೊಳ್ಳುವ ನಾಟಕವನ್ನು ಡಾ. ಡಿ.ಎಸ್. ಚೌಗಲೆ ರಚನೆ ಮಾಡಿದ್ದಾರೆ. ಪ್ರದೀಪ ತಿಪಟೂರ ನಿರ್ದೇಶನ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರೊ. ಬಿ.ವಿ. ಗುಂಜೆಟ್ಟಿ ಅಧ್ಯಕ್ಷತೆ ವಹಿಸುವರು.  ಡಾ. ಪ್ರಕಾಶ ಗರುಡ ಭಾಗವಹಿಸುವರು.
ಮೂರನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ
ಧಾರವಾಡ: ಪ್ರಾಚಾರ್ಯರನ್ನು ಬದಲಾವಣೆ ಮಾಡಬೇಕು ಹಾಗೂ ಪ್ರಾಧ್ಯಾಪಕ ವಿಕ್ಟರ್ ಅವರನ್ನು ಮರಳಿ ಸೇವೆಗೆ ಪಡೆಯಬೇಕೆಂದು ಇಲ್ಲಿನ ಕಿಟಲ್ ಕಾಲೇಜಿನ ವಿದ್ಯಾರ್ಥಿಗಳು ಕವಿಕಾಶಿ ಸಂಘದ ನೇತೃತ್ವದಲ್ಲಿ ನಡೆಸುತ್ತಿರುವ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಎರಡು ದಿನಗಳಿಂದ ಸತತವಾಗಿ ಪ್ರತಿಭಟಿಸುತ್ತಿದ್ದರೂ ಆಡಳಿತ ಮಂಡಳಿ ಸ್ಪಂದಿಸುತ್ತಿಲ್ಲ. ಪ್ರಾಧ್ಯಾಪಕ ವಿಕ್ಟರ್ ತಪ್ಪು ಮಾಡಿದ್ದಾರೆ ಎಂದು ಆರೋಪಿಸಿ ಯಾವುದೇ ರೀತಿಯ ನೋಟಿಸ್ ನೀಡದೇ ಅವರನ್ನು ಅಮಾನತುಗೊಳಿಸಿರುವ ಆಡಳಿತ ಮಂಡಳಿಯ ಕ್ರಮ ಖಂಡಿಸಿ ಆಡಳಿತ ಮಂಡಳಿ ವಿರುದ್ಧ ಧಿಕ್ಕಾರ ಹಾಕಿದರು. ಅಲ್ಲದೆ, ಪ್ರಾಚಾರ್ಯರು ಇಲ್ಲಸಲ್ಲದ ಆರೋಪಗಳನ್ನು ಹಾಕುತ್ತ ಅಲ್ಲಿಯ ಸಿಬ್ಬಂದಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿ, ವಿನಾಕಾರಣ ಅಮಾನತ್ತಿನಲ್ಲಿಟ್ಟ ಸಹಪ್ರಾಧ್ಯಾಪಕ ಡಾ. ಜಿ.ಆರ್. ವಿಕ್ಟರ್ ಅವರನ್ನು ಮರಳಿ ಸೇವೆಗೆ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಶಾಂತಿಯುತವಾಗಿ ನಡೆಸುತ್ತಿರುವ ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಳ್ಳುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಕಲ್ಲಕಣಿಯಲ್ಲಿ ಮುಳುಗಿ ಯುವಕ ಸಾವು
ಅಣ್ಣಿಗೇರಿ: ಗಣಪತಿ ವಿಸರ್ಜನೆಗೆ ತೆರಳಿದ್ದ ಯುವಕನೋರ್ವ ಕಲ್ಲಕಣಿಯ ದಂಡೆ ಕುಸಿದ ಪರಿಣಾಮ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಸ್ಥಳೀಯ ಹೊಸಪೇಟೆ ಓಣಿಯ ಮಂಜುನಾಥ ಪರಮೇಶ್ವರ ಇಂಗಳಹಳ್ಳಿ (25) ಎಂಬಾತನೆ ಮೃತಪಟ್ಟ ದುರ್ದೈವಿ. ಅಣ್ಣಿಗೇರಿ ಪ್ರವಾಸಿ ಮಂದಿರದ ಹಿಂಭಾಗದ ಕಲ್ಲಕಣಿಯಲ್ಲಿ ರಾತ್ರಿ 12 ಗಂಟೆಗೆ ಸಾರ್ವಜನಿಕ ಗಣಪತಿ ವಿಸರ್ಜನೆ ಮಾಡುವಾಗ ಕಲ್ಲಕಣಿಯ ದಂಡೆಯ ಕುಸಿದ ಪರಿಣಾಮ ಮೃತನು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಸ್ಥಳೀಯ ಆರಕ್ಷಕ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ಠಾಣಾಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement