ನಮ್ಮ ಸಂರಕ್ಷಣೆ ಜಾಗೃತಿಗೆ ಸಹಕರಿಸಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಸೆ. 19
'ನಾಲ್ಕೈದು ದಿನಗಳ ಹಿಂದೆ ನಾನು ತೋಡಿಕೊಂಡಿದ್ದ ದುಃಖಕ್ಕೆ ಪರಿಹಾರ ದೊರಕುವ ಆಶಾಕಿರಣವೊಂದು ಕಾಣುತ್ತಿದೆ. ಉಣಕಲ್ ಸುತ್ತಲಿನ ನಾಗರಿಕರೆಲ್ಲ ನನ್ನ ರಕ್ಷಣೆಗೆ ಕಂಕಣಬದ್ಧರಾಗಿದ್ದನ್ನು ನೋಡಿದರೆ, ನನ್ನ ಕಷ್ಟದ ದಿನಗಳು ದೂರಾಗುವ ಕ್ಷಣ ಸಮೀಪಿಸುತ್ತಿದೆಯೆನೋ ಎನಿಸುತ್ತಿದೆ.'
ಉಣಕಲ್ ಸೇರಿದಂತೆ ಹುಬ್ಬಳ್ಳಿ-ಧಾರವಾಡ ಜನತೆಯ ಪ್ರೀತಿಗೆ ಪಾತ್ರನಾಗಿರುವ ನನ್ನ ಹೆಸರು ಉಣಕಲ್ ಕೆರೆ. ನಾಲ್ಕೈದು ದಿನಗಳ ಹಿಂದೆ ಉಣಕಲ್ ಹಾಗೂ ಸುತ್ತಲಿನ ನಿವಾಸಿಗಳು ನನ್ನ ಒಡಲು ನೀರಿನಿಂದ ತುಂಬಿದ್ದರಿಂದ ಬಾಗಿನ ಅರ್ಪಿಸಿದ್ದ ಸಂದರ್ಭ 'ಕನ್ನಡಪ್ರಭ'ದ ಇದೇ ವೇದಿಕೆಯಲ್ಲಿ ನನ್ನ ಸಂಕಟ ತೋಡಿಕೊಂಡಿದ್ದೆ. ಇದರ ಪ್ರತಿಫಲವೆನೋ ಎನ್ನುವಂತೆ ಉಣಕಲ್ ಹಾಗೂ ಸುತ್ತಲಿನ ನಿವಾಸಿಗಳು ನನಗೆ ಈ ಸಂಕಟದಿಂದ ವಿಮೋಚನೆ ದೊರಕಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಜನಪ್ರತಿನಿಧಿಗಳು, ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ಸೆ. 22ರಂದು ನನ್ನ ದಂಡೆಯ ಸುತ್ತ ಮಾನವ ಸರಪಳಿ ರಚಿಸುವ ಮೂಲಕ ನನ್ನ ರಕ್ಷಣೆಗಾಗಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಜೊತೆಗೆ ರಾಜ್ಯದ ಗಮನ ಸೆಳೆಯುವ ಪ್ರಯತ್ನದಲ್ಲಿ ಇಲ್ಲಿಯ ನಾಗರಿಕರು ಹೆಜ್ಜೆ ಇಡುತ್ತಿದ್ದಾರೆ. ಆ ಮೂಲಕ ಕೇವಲ ನನ್ನ ಒಡಲು ಸ್ವಚ್ಛಗೊಳಿಸುವುದಷ್ಟೇ ಅಲ್ಲದೇ, ಇಡಿ ರಾಜ್ಯದಲ್ಲಿ ಚರಂಡಿ ನೀರು ಸೇರುವ ಕೆರೆಗಳನ್ನೂ ರಕ್ಷಿಸಬೇಕೆಂಬ ಮಹತ್ತರ ಉದ್ದೇಶ ಇಲ್ಲಿಯ ಜನತೆಯದ್ದು.
ಮಾನವ ಸರಪಳಿ ಸಂದರ್ಭ ಅತಿ ಹೆಚ್ಚು ಜನರು ಪಾಲ್ಗೊಳ್ಳಬೇಕೆಂಬ ಕಳಕಳಿ ಇಲ್ಲಿಯ ಜನತೆಯದ್ದು. ಇದೇ ಕಾರಣಕ್ಕಾಗಿ ನನ್ನಲ್ಲಿ ಸೇರುವ ಚರಂಡಿ ನೀರಿನ ಮಾರ್ಗ ಬದಲಾಯಿಸುವುದು ಹಾಗೂ ನನ್ನೊಡಲು ಸ್ವಚ್ಛಗೊಳಿಸುವ ಮೂಲಕ ನನ್ನನ್ನು ರಕ್ಷಿಸುವುದಕ್ಕಾಗಿ ಸಾರ್ವಜನಿಕರ ಮೊದಲ ಹೋರಾಟಕ್ಕೆ ಸೆ. 20ರಂದು ಚಾಲನೆ ದೊರೆಯಲಿದೆ.
ಮಾನವ ಸರಪಳಿ ರಚನೆ ಹಾಗೂ ಮತ್ತಿತರ ವಿಷಯಗಳ ಕುರಿತು ಚರ್ಚಿಸಲು ಅಂದು ಸಂಜೆ 4ಕ್ಕೆ ಉಣಕಲ್ನ ಶ್ರೀ ಸದ್ಗುರು ಸಿದ್ದೇಶ್ವರ ಕೈಲಾಸ ಮಂಟಪದಲ್ಲಿ ಸಾರ್ವಜನಿಕರ ಸಭೆ ಕರೆಯಲಾಗಿದೆ.
ಜನಪ್ರತಿನಿಧಿ-ಸಾರ್ವಜನಿಕರಿಗೆ ಆಹ್ವಾನ: ಸಭೆಯಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಸಂಸದ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ ಶೆಟ್ಟರ್, ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ವಿನಯ ಕುಲಕರ್ಣಿ, ಸಿ.ಎಸ್. ಶಿವಳ್ಳಿ, ಎನ್.ಎಚ್. ಕೋನರಡ್ಡಿ, ವಿಪ ಸದಸ್ಯರಾದ ಶ್ರೀನಿವಾಸ ಮಾನೆ, ಬಸವರಾಜ ಹೊರಟ್ಟಿ, ವೀರಣ್ಣ ಮತ್ತಿಕಟ್ಟಿ ಅವರನ್ನು ಆಹ್ವಾನ ಸಲ್ಲಿಸಲಾಗಿದೆ.
ಮಹಾನಗರ ಪಾಲಿಕೆಯ ಎಲ್ಲ ಸದಸ್ಯರಿಗೆ, ಅವಳಿ ನಗರದ ಎಲ್ಲ ಶಾಲಾ-ಕಾಲೇಜುಗಳಿಗೆ, ವಿವಿಧ ಸಂಘ-ಸಂಸ್ಥೆಗಳಿಗೆ, ಸ್ತ್ರೀ- ಶಕ್ತಿ ಸಂಘಟನೆಗಳಿಗೂ ಮಾನವ ಸರಪಳಿ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಇಲ್ಲಿಯ ಜನರು ಆಹ್ವಾನ ನೀಡಿದ್ದಾರೆ.
ನನ್ನ ದಂಡೆಯ ಮೇಲಿದ್ದ ಸುಂದರ ಉದ್ಯಾನವನ್ನಷ್ಟೇ ನೋಡಿದ್ದ ಸಾರ್ವಜನಿಕರಿಗೆ ನನ್ನೊಡಲಿನ ಕೆಸರು, ಕಸದ ಬಳ್ಳಿ, ಚರಂಡಿ ನೀರಿನಿಂದ ನನ್ನೊಡಲಿನಲ್ಲಾಗಿರುವ ದುಷ್ಪರಿಣಾಮಗಳ ಬಗ್ಗೆ ಅಂದಿನ ಸಭೆಯಲ್ಲಿ ಮಾಹಿತಿ ನೀಡಲೂ ಇಲ್ಲಿಯ ನಾಗರಿಕರು ನಿರ್ಧರಿಸಿದ್ದಾರೆ.
ದಶಕಗಳ ಹಿಂದೆ ಹುಬ್ಬಳ್ಳಿಯ ಅರ್ಧಭಾಗಕ್ಕೆ ಕುಡಿಯುವ ನೀರು ಪೂರೈಸುತ್ತಿದ್ದ ನನ್ನ ಇಂದಿನ ದುಸ್ಥಿತಿ ಯಾವುದೇ ವೈರಿಗೂ ಬೇಡ ಎನ್ನುವಂತಾಗಿದೆ. ನನ್ನ ದಂಡೆ ಮೇಲೆ ರು. 2 ಕೋಟಿಗೂ ಹೆಚ್ಚು ಹಣ ವ್ಯಯಿಸಿ ನಿರ್ಮಿಸಿರುವ ಉದ್ಯಾನದ ಉದ್ಘಾಟನೆ ಸಂದರ್ಭದಲ್ಲಿಯೇ ಇಲ್ಲಿಯ ನಾಗರಿಕರು ಕೆರೆ ಸ್ವಚ್ಛಗೊಳಿಸದ ಹೊರತು ಉದ್ಯಾನ ಉದ್ಘಾಟನೆಗೆ ಅವಕಾಶ ನೀಡುವುದಿಲ್ಲವೆಂದು ಪ್ರತಿಭಟಿಸಿದ್ದರು. ಆದರೆ, ಆ ಸಮಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂದಿನ ವರ್ಷದೊಳಗೆ ಒಳಚರಂಡಿ ನೀರು ಕೆರೆಗೆ ಸೇರದಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಅಂದಿನ ಭರವಸೆ ಈವರೆಗೂ ಈಡೇರಿಲ್ಲ.
ನನ್ನ ಒಡಲು ಸ್ವಚ್ಛಗೊಳ್ಳುವ ಹಾಗೂ ನನ್ನ ಒಡಲಿಗೆ ಚರಂಡಿ ನೀರು ಸೇರದಂತೆ ತಡೆಯುವ ಯೋಜನೆ ಜಾರಿಗೊಳ್ಳಬಹುದೆಂಬ ಆಶಯ ದಿನದಿಂದ ದಿನಕ್ಕೆ ಕಡಿಮೆಯಾಗುತ್ತ ಬಂದಿದೆ. ಆದರೀಗ ಉಣಕಲ್ ಹಾಗೂ ಸುತ್ತಲಿನ ಗ್ರಾಮಸ್ಥರು ನನ್ನ ದಂಡೆ ಸುತ್ತ ಮಾನವ ಸರಪಳಿ ರಚಿಸುವ ಮೂಲಕ ಆಡಳಿತದ ಗಮನ ಸೆಳೆಯಲು ಮುಂದಾಗಿರುವುದು ನನ್ನಲ್ಲಿ ಹೊಸ ಆಶಯ ಚಿಗುರುವಂತೆ ಮಾಡಿದೆ. ನನ್ನ ಕಳೆದ ದಿನಗಳು ಮತ್ತೆ ಮರುಕಳಿಸಬಹುದೆಂಬ ಆಶಯ ಮತ್ತೆ ನನ್ನಲ್ಲಿ ಹೊಸ ಚೈತನ್ಯ ಮೂಡಿಸಿದೆ. ಈ ಆಶಯ ನೈಜರೂಪ ಪಡೆಯುವುದೋ ಇಲ್ಲವೋ ಎಂಬುದನ್ನು ಕಾಯ್ದು ನೋಡಬೇಕು.
ಅಂದ ಹಾಗೆ ಸೆ. 20ರಂದು ಉಣಕಲ್ನಲ್ಲಿ ನಡೆಯುವ ಸಭೆಗೆ ಎಲ್ಲರೂ ಬನ್ನಿ. ಸೆ. 22ರಂದು ನನ್ನ ದೇಹದ ಸುತ್ತಲೂ ರಚಿಸುವ ಮಾನವ ಸರಪಳಿಯಲ್ಲಿ ಸಹಸ್ರಾರು ನಾಗರಿಕರು ಪಾಲ್ಗೊಳ್ಳುವ ಮೂಲಕ ನನ್ನ ಸ್ವಚ್ಛತೆಗೆ ಆಡಳಿತದ ಗಮನ ಸೆಳೆಯಲು ಕೈಜೋಡಿಸಿ ಎಂದು ಮನವಿ ಮಾಡಿಕೊಳ್ಳುತ್ತೇನೆ.