ಸುದ್ದಿ ಸಂಕ್ಷೇಪ
ಜಾನುವಾರುಗಳಿಗೆಕಾಲುಬೇನೆ, ಬಾಯಿಬೇನೆ
ಕುಂದಗೋಳ: ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಜಾನುವಾರುಗಳಿಗೆ ಕಾಲುಬೇನೆ, ಬಾಯಿಬೇನೆ ಕಂಡುಬಂದಿದ್ದು, ರೈತರು ಈ ಕುರಿತು ಚಿಂತಾಕ್ರಾಂತರಾಗಿದ್ದಾರೆ. ಈ ರೋಗವನ್ನು ಹತೋಟಿಗೆ ತರಲು ಮುಂಜಾಗ್ರತ ಕ್ರಮವಾಗಿ ಜಾನುವಾರುಗಳಿಗೆ ರೈತರು ಮೆಂತೆ, ಕೊತ್ತಂಬರಿ, ಅಂಬಲಿ ಹಾಗೂ ಬಾಳೆಹಣ್ಣು ತಿನಿಸಬೇಕು. ಪ್ರತಿ ಜಾನುವಾರಿಗೆ ಕಡ್ಡಾಯವಾಗಿ ಚುಚ್ಚುಮದ್ದನ್ನು ಹಾಕಿಸಬೇಕೆಂದು ತಾಲೂಕು ಪಶುವೈದ್ಯಾಧಿಕಾರಿ ಡಾ. ಎಸ್.ಡಿ. ಚಿಕೇನಕೊಪ್ಪ ತಿಳಿಸಿದ್ದಾರೆ.
ಹುಬ್ಬಳ್ಳಿ ವ್ಯಕ್ತಿಯ ಶವ ಪತ್ತೆ: ಕೊಲೆ ಶಂಕೆ
ಕಲಘಟಗಿ: ಕಳೆದ ಒಂದು ವಾರದ ಹಿಂದೆ ಕಣ್ಮರೆಯಾದ ಹುಬ್ಬಳ್ಳಿಯ ಅಮರಗೊಳದ ನಿವಾಸಿ ಹನುಮಂತ ಪೂಜಾರ (46) ಎಂಬುವನ ಮೃತದೇಹ ತಾಲೂಕಿನ ಸುಕ್ಷೇತ್ರ ಬೂದನಗುಡ್ಡಲ್ಲಿ ಪತ್ತೆಯಾದ ಪ್ರಕರಣ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಗುರುವಾರ ಮಧ್ಯಾಹ್ನ ಸುದ್ದಿ ತಿಳಿಯುತ್ತಿದ್ದಂತೆಯೆ ಪೊಲೀಸ್ ಠಾಣೆಯ ಪಿ.ಐ. ಅಮರೇಶ ಬಾರಕೇರ ಅವರು ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಶೋಧಿಸಿದಾಗ ಮೃತನ ಬಳಿಯ ಡಿಸ್ಕವರಿ ದ್ವಿಚಕ್ರವಾಹನ ಹಾಗೂ ಕೆಲ ದಾಖಲಾತಿ ವಿವರಗಳು ಸಿಕ್ಕಿವೆ. ಈ ಮಾಹಿತಿ ಮೇರೆಗೆ ಪೊಲೀಸರು ಅಮರಗೋಳದ ಈಶ್ವರನಗರದ ಆತನ ಕುಟುಂಬಕ್ಕೆ ದೂರವಾಣಿ ಮೂಲಕ ಮಾಹಿತಿ ಪಡೆದು ಖಚಿತಪಡಿಸಿಕೊಂಡಿದ್ದಾರೆ. ನಂತರ ಆತನ ಸಹೋದರ ಲಕ್ಷ್ಮಣ ಪೂಜಾರ ಎಂಬುವನು ಪೊಲೀಸ್ ಠಾಣೆಗೆ ದೂರು ನೀಡಿದ್ದು ಮೃತ ಹನಮಂತನು ಸಬ್ಮರ್ಸಿಬಲ್ ಪಂಪ್ ಮಾರಾಟ, ಕಮೀಶನ್ ವ್ಯವಹಾರ ಮಾಡುತ್ತಿದ್ದನು. ಸೆ. 10ರಂದು ತನ್ನ ಸ್ನೇಹಿತ ಕಲಘಟಗಿ ತಾಲೂಕಿನ ಮಲಕನಕೊಪ್ಪ ಗ್ರಾಮದ ಶಿವು ಗಾಣಿಗೇರ ಎಂಬುವನನ್ನು ಬಿಟ್ಟು ಬರಲು ದ್ವಿಚಕ್ರ ವಾಹನದಲ್ಲಿ ಮಲಕನಕೊಪ್ಪಕ್ಕೆ ಹೋಗಿ ಮರಳಿ ಬರುವ ಸಂದರ್ಭ ಈ ದುರ್ಘಟನೆ ನಡೆದಿರಬಹುದೆಂದು ಶಂಕಿಸಲಾಗಿದೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿರ್ದೇಶನದಲ್ಲಿ ಕೊಲೆ ಶಂಕಿತ ವ್ಯಕ್ತಿಯ ಕುರಿತು ಮಾಹಿತಿಯನ್ನು ಕಲೆ ಹಾಕುತ್ತಿದ್ದು ಎಂದು ಪ್ರಕರಣದಾಖಲಿಸಿಕೊಂಡ ಪೊಲೀಸರು ತಿಳಿಸಿದ್ದಾರೆ.
ಡಿಕ್ಕಿ: ಇಬ್ಬರಿಗೆ ಗಾಯ
ಕಲಘಟಗಿ: ಪಟ್ಟಣದ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನಗಳೆರಡು ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಗಾಯಗೊಂಡ ಪ್ರಕರಣ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಪಟ್ಟಣದ ಶೌಕತ್ಲಾಲ ಝೆಂಡೆವಾಲೆ(27), ಬಸವರಾಜ ಕಾಳೆ ಎಂಬುವರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಕಿಮ್ಸ್ಗೆ ದಾಖಲಿಸಲಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಿಳಿಸಿದ್ದಾರೆ.
ಪಾರ್ವತಿಬಾಯಿ ಗೌಡರ
ಧಾರವಾಡ: ನಾರಾಯಣಪುರದ ನಿವಾಸಿ ಪಾರ್ವತಿಬಾಯಿ ಪರಪ್ಪಗೌಡರ (91) ಬುಧವಾರ ನಿಧನರಾದರು. ಮೃತರಿಗೆ ಮೂವರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.
ಅಣ್ಣಿಗೇರಿ: ಶಿಕ್ಷಕರಿಗೆ ಸನ್ಮಾನ
ನವಲಗುಂದ ತಾಲೂಕು ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವ ಅಣ್ಣಿಗೇರಿ ಅಮೃತೇಶ್ವರ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಪ್ರೌಢಶಾಲೆ ಸಹ ಶಿಕ್ಷಕ ಜಿ.ವೈ. ಕೊರವರ ಅವರನ್ನು ಗಣೇಶ ಮೂರ್ತಿ ವಿಸರ್ಜನೆ ಕಾರ್ಯಕ್ರಮದಲ್ಲಿ ಸಂಸ್ಥೆ ಆಡಳಿತ ಮಂಡಳಿ, ಬೋಧಕ-ಬೋಧ ಕೇತರ ಸಿಬ್ಬಂದಿ ಸನ್ಮಾನಿಸಿದರು. ಪ್ರಾಚಾರ್ಯ ಎನ್.ಜಿ. ಗದ್ದಿಗೌಡರ, ಎಸ್.ಬಿ. ಅಗಸಿಮನಿ, ಎಲ್.ವಿ. ಸಾಲಿಮಠ, ಪಿ.ಕೆ. ಕೋಕಾಟೆ, ಆಡಳಿತ ಮಂಡಳಿ ಸದಸ್ಯರು, ವಿದ್ಯಾರ್ಥಿಗಳಿದ್ದರು.
22ಕ್ಕೆ ಸಿಎಂ ಸಿದ್ದರಾಮಯ್ಯ ಹುಬ್ಬಳ್ಳಿಗೆ
ಧಾರವಾಡ: ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಲಿಕಾಪ್ಟರ್ ಮೂಲಕ ಸೆ. 22ರ ಬೆಳಗ್ಗೆ 10.45ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ನಾಡೋಜ ಡಾ. ಪಾಟೀಲ ಪುಟ್ಟಪ್ಪ ಮನೆಗೆ ಭೇಟಿ ನೀಡಿ, 11.20ಕ್ಕೆ ಧಾರವಾಡ ಕೃಷಿ ವಿವಿಗೆ ಆಗಮಿಸುವರು. ವಿವಿ ಆಯೋಜಿಸಿರುವ ಕೃಷಿ ಮೇಳ-2013ರನ್ನು ಮಧ್ಯಾಹ್ನ 12ಕ್ಕೆ ಉದ್ಘಾಟಿಸುವರು. ಮಧ್ಯಾಹ್ನ 2ಕ್ಕೆ ಧಾರವಾಡ ಜಿಪಂ ಸಭಾಂಗಣದಲ್ಲಿ ಏರ್ಪಾಡಾಗಿರುವ ಜಿಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳ ಸಭೆಯಲ್ಲಿ ಪಾಲ್ಗೊಂಡು ಪ್ರಗತಿ ಪರಿಶೀಲನೆ ನಡೆಸುವರು. ಮಧ್ಯಾಹ್ನ 3.50ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತೆರಳುವರು.