ಈರುಳ್ಳಿ ಬೆಲೆ ಕುಸಿತ: ರೈತರಿಂದ ರಸ್ತೆ ತಡೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಸೆ.20
ಹಠಾತ್ ಕುಸಿದ ಈರುಳ್ಳಿ ದರದಿಂದ ಕಂಗೆಟ್ಟ ರೈತರು ಶುಕ್ರವಾರ ಅಮರಗೋಳ ಎಪಿಎಂಸಿ ಎದುರು ಹು-ಧಾ ರಸ್ತೆ ಬಂದ್ ಮಾಡಿ, ಯೋಗ್ಯ ದರ ನೀಡುವಂತೆ ಆಗ್ರಹಿಸಿದರು.
ಬೆಳಗಾವಿ ಜಿಲ್ಲೆಯ ಸವದತ್ತಿ, ರಾಮದುರ್ಗ, ಬಾಗಲಕೋಟೆ ಮತ್ತು ಬಿಜಾಪುರ ಜಿಲ್ಲೆಗಳಿಂದ ಈರುಳ್ಳಿ ಮಾರುವುದಕ್ಕೆ ಬಂದಿದ್ದ ರೈತರಿಗೆ ದಲ್ಲಾಳಿಗಳ ದರ ಕೇಳಿದ್ದೇ ತಡ ಒಂದರೆಕ್ಷಣ ಜಂಘಾಬಲವೇ ಉಡುಗಿ ಹೋಯಿತು. ಬಳಿಕ ಸಾವರಿಸಿಕೊಂಡ ರೈತರು ರಸ್ತೆ ತಡೆ ನಡೆಸಿ ದಲ್ಲಾಳಿಗಳ ಲಾಭಕೋರತನಕ್ಕೆ ಧಿಕ್ಕಾರ ಕೂಗಿದರು.
ಮಧ್ಯಾಹ್ನ ಒಂದೂವರೆ ಸುಮಾರಿಗೆ ದಿಢೀರ್ ಎಂದು ರಸ್ತೆಗಿಳಿದ ರೈತರು ಹು-ಧಾ ರಸ್ತೆ ತಡೆ ನಡೆಸಿ ಎರಡೂ ಬದಿಗೆ ವಾಹನಗಳನ್ನು ಸಾಲುಗಟ್ಟಿ ನಿಲ್ಲುವಂತೆ ಮಾಡಿದರು. ರೈತರ ದಿಢೀರ್ ಪ್ರತಿಭಟನೆ ವಿಚಾರ ತಿಳಿಯುತ್ತಿದ್ದಂತೆಯೇ ಡಿಸಿಪಿ ಸುಭಾಷ್ ಗುಡಿಮನಿ ಅವರು ಪ್ರತಿಭಟನಾ ಸ್ಥಳಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿದ್ದು ಅಲ್ಲದೇ ವಾಹನ ಸಂಚಾರ ಮಾರ್ಗ ಕೂಡ ಬದಲಿಸಿ ಹೆಚ್ಚುತ್ತಿದ್ದ ವಾಹನ ದಟ್ಟಣೆಯನ್ನು ಕಡಿಮೆ ಮಾಡಿದರು.
ಇತ್ತ ರಸ್ತೆ ತಡೆ ನಡೆಸುತ್ತಿದ್ದ ರೈತರು ಬೈಕ್ ಸವಾರರನ್ನು ಮತ್ತು ವಾಹನಗಳನ್ನು ತಡೆದು ಗಾಡಿ ನಿಲ್ಲಿಸಿ ಎಂದು ಹೇಳುತ್ತಿದ್ದರೆ, ವಾಹನ ನಿಲ್ಲಿಸಿದಂತೆ ಮಾಡುತ್ತಿದ್ದ ಕೆಲವರು ಪಕ್ಕದ ಸಂದಿಗೊಂದಿಗಳಲ್ಲಿ ಸಾಗಿ ಮನೆ ಆಫೀಸು ತಲುಪುವ ಹರಸಾಹಸ ಮಾಡಿದರು.
ಫಲಿಸದ ಎಪಿಎಂಸಿ ಅಧ್ಯಕ್ಷರ ಸಂಧಾನ
ರೈತರ ದಿಢೀರ್ ಪ್ರತಿಭಟನೆ ಎಪಿಎಂಸಿ ಅಧ್ಯಕ್ಷ ಸುರೇಶ ದಾಸನೂರ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರನ್ನು ಸಂಧಾನಕ್ಕೆ ಕರೆದರು. ಆದರೆ, ದಾಸನೂರ ಅವರ ಮಾತುಗಳನ್ನು ಕೇಳಿಸಿಕೊಳ್ಳುವ ತಾಳ್ಮೆ ಇಲ್ಲದ ರೈತರು ನೀವೇ ಮಾಡಿಕೊಂಡು ತೀರ್ಮಾನಕ್ಕೆ ಬನ್ನಿ ಅಲ್ಲಿಯವರೆಗೆ ಹೋರಾಟ ನಿಲ್ಲದು ಎಂದರು.
ಚಾಲ್ತಿ ದರಕ್ಕೆ ದಲ್ಲಾಳಿಗಳ ಸಮ್ಮತಿ
ಉಪವಿಭಾಗಾಧಿಕಾರಿ ಮಹೇಶ ಕರ್ಜಗಿ, ಡಿಸಿಪಿ ಸುಭಾಷ ಗುಡಿಮನಿ ಮತ್ತಿತರ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಈರುಳ್ಳಿ ದರ ಕುಸಿತದಿಂದ ಕಂಗೆಟ್ಟು ರೈತರ ಪ್ರತಿಭಟನೆ ಕುರಿತು ಸುದೀರ್ಘ ಚರ್ಚೆ ನಡೆಯಿತು.
ಸಭೆಯಲ್ಲಿ ಕೊನೆಗೆ ಶುಕ್ರವಾರ ಚಾಲ್ತಿಯಲ್ಲಿರುವ ದರದಲ್ಲಿ ಈರುಳ್ಳಿ ಖರೀದಿಸುವುದಕ್ಕೆ ದಲ್ಲಾಳಿಗಳು ಮತ್ತು ವ್ಯಾಪಾರಿಗಳು ಸಮ್ಮತಿಸಿದಾಗ ಬಿಕ್ಕಟ್ಟು ಪರಿಹಾರವಾಯಿತು.