ಕೃಷಿಯಿಂದ ಯುವಜನತೆ ವಿಮುಖ
ಕನ್ನಡಪ್ರಭ ವಾರ್ತೆ, ಧಾರವಾಡ, ಸೆ. 21
ಯುವ ಜನತೆ ಕೃಷಿಯಿಂದ ವಿಮುಖರಾಗುತ್ತಿದ್ದು, ಭವಿಷ್ಯದಲ್ಲಿ ಕೃಷಿ ಮುಂದುವರೆಯಲು ಯುವಕ ಹಾಗೂ ಯುವತಿಯರಿಗೆ ಉತ್ತೇಜನ ದೊರೆಯಬೇಕಿದೆ ಎಂದು ಕೃಷಿ ಇಲಾಖೆ ಸಚಿವ ಕೃಷ್ಣಬೈರೇಗೌಡ ಹೇಳಿದರು.
ಇಲ್ಲಿನ ಕೃಷಿ ವಿವಿ ಏರ್ಪಡಿಸಿದ ಕೃಷಿ ಮೇಳದಲ್ಲಿ ಶನಿವಾರ ಬೆಳಗಾವಿ ಜಿಲ್ಲೆಯ ಯುವ ಕೃಷಿಕ ಹಾಗೂ ಯುವ ಕೃಷಿ ಮಹಿಳೆಯರಿಗೆ ಯುವ ಕೃಷಿಕ ಯುವ ಕೃಷಿ ಮಹಿಳೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಪ್ರಸ್ತುತ ಹೆಚ್ಚಾನುಹೆಚ್ಚು ಯುವಜನತೆ ಉದ್ಯೋಗವಕಾಶಕ್ಕಾಗಿ ನಗರದೆಡೆಗೆ ಮುಖ ಮಾಡುತ್ತಿದ್ದಾರೆ. ಹಾಗಾಗಿ, ದಿನದಿಂದ ದಿನಕ್ಕೆ ಕೃಷಿ ಆಸಕ್ತರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಯುವಜನತೆಯನ್ನು ಕೃಷಿಯಲ್ಲಿ ತೊಡಗಿಸುವ ನಿಟ್ಟಿನಲ್ಲಿ ಎರಡು ವರ್ಷದ ಡಿಪ್ಲೋಮಾ ಕೋರ್ಸ್ ಸಹ ಶುರು ಮಾಡಲಾಗಿದೆ. ಆದರೆ, ಡಿಪ್ಲೋಮಾ ಪದವಿ ಪಡೆದ ವಿದ್ಯಾರ್ಥಿಗಳು ಕೃಷಿ ಕಷ್ಟದ ಕೆಲಸ ಎಂದು ಕೃಷಿಯಿಂದ ದೂರ ಸರಿಯುತ್ತಿದ್ದು, ಬೇರೆ ಉದ್ಯೋಗಕ್ಕಾಗಿ ಹಾತೊರೆಯುತ್ತಿದ್ದಾರೆ. ಆದ್ದರಿಂದ ಯುವ ಜನಾಂಗವನ್ನು ಕೃಷಿಗೆ ಒಲವು ತೋರಿಸುವ ಸಲುವಾಗಿ ಕಡಿಮೆ ವೆಚ್ಚದ ಯಾಂತ್ರಿಕತೆಯ ಮೂಲಕ ಕೃಷಿಯನ್ನು ಸರಳೀಕರಣ ಮಾಡುವ ಅಗತ್ಯವಿದೆ ಎಂದರು.
ಅರ್ಹತೆ ಆಧಾರದ ಮೇಲೆ ಕೃಷಿ ವಿವಿ ಯುವ ಕೃಷಿಕ ಪ್ರಶಸ್ತಿಗೆ ಆಯ್ಕೆ ಮಾಡಿದ ಯುವ ಕೃಷಿ ಮಹಿಳೆ ಹಾಗೂ ಕೃಷಿಕರನ್ನು ಇನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ತೇಜಿಸುವ ನಿಟ್ಟಿನಲ್ಲಿ ಯುವ ಕೃಷಿಕರಿಗೆ ಹೆಚ್ಚಿನ ಅಧ್ಯಯನಕ್ಕೆ ದೇಶದಾದ್ಯಂತ ರಾಜ್ಯ ಸರ್ಕಾರದ ವೆಚ್ಚದಲ್ಲಿ ಪ್ರವಾಸ ಕಳುಹಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರಸ್ತುತ ರಾಜ್ಯದೆಲ್ಲೆಡೆ ವಾಡಿಕೆ ಹಾಗೂ ವಾಡಿಕೆಗಿಂತ ಹೆಚ್ಚು ಮಳೆ ಬಿದ್ದಿದ್ದು, ಉತ್ತಮ ಫಸಲು ಬಂದಿದೆ. ಕೆಲವೊಂದು ಕಡೆಗಳಲ್ಲಿ ಕೊಂಚ ಬೆಳೆ ಹಾನಿ ಉಂಟಾಗಿದ್ದು ಬಿಟ್ಟರೆ, ಎಲ್ಲೆಡೆ ಆಶಾದಾಯಕ ಮಳೆ ಸುರಿದಿರುವುದು ರೈತರ ಸಂತಸಕ್ಕೆ ಕಾರಣವಾಗಿದೆ. ಕಳೆದ ಎರಡ್ಮೂರು ವರ್ಷಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಈ ಬಾರಿ ಬಿತ್ತನೆಯಾಗಿದೆ. ಅಲ್ಲದೆ, ರಾಜ್ಯ ಸರ್ಕಾರ ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ರೈತರಿಗೆ ಸಮರ್ಪಕವಾಗಿ ನೀಡುವಲ್ಲಿ ಯಶಸ್ವಿಯಾಗಿದೆ. ಹಾಗೆಯೇ, ಇದೀಗ ಹಿಂಗಾರು ಬಿತ್ತನೆಗೆ ರೈತ ಸಮುದಾಯ ಸಜ್ಜಾಗುತ್ತಿದೆ. ಅದಕ್ಕಾಗಿ ರಾಜ್ಯ ಸರ್ಕಾರ ಹಾಗೂ ಇಲಾಖೆಗಳು ಸಂಪೂರ್ಣ ಸಿದ್ದತೆ ಮಾಡಿಕೊಳ್ಳುತ್ತಿವೆ ಎಂದರು.
ಕೃಷಿ ವಿಶ್ವ ವಿದ್ಯಾಲಯದ ಪ್ರಭಾರಿ ಕುಲಪತಿ ಡಾ.ಎಚ್.ಎಸ್. ವಿಜಯಕುಮಾರ, ವಿಸ್ತರಣಾ ನಿರ್ದೇಶಕ ಡಾ.ಎಲ್. ಕೃಷ್ಣಾ ನಾಯಕ, ಫಾದರ್ ಜ್ಯಾಕೋಬ್, ಡಾ.ಡಿ. ರಾಜಶೇಖರ, ಹೇಮಾಕ್ಷಿ ಕಿರೆಸೂರ ಮುಂತಾದವರು ಉಪಸ್ಥಿತರಿದ್ದರು.
ಯುವಜನತೆಯನ್ನು ಕೃಷಿಯಲ್ಲಿ ತೊಡಗಿಸುವ ನಿಟ್ಟಿನಲ್ಲಿ 2 ವರ್ಷದ ಡಿಪ್ಲೋಮಾ ಕೋರ್ಸ್ ಆರಂಭಿಸಿದೆ. ಡಿಪ್ಲೋಮಾ ಪದವಿ ಪಡೆದ ವಿದ್ಯಾರ್ಥಿಗಳು ಕೃಷಿ ಕಷ್ಟದ ಕೆಲಸ ಎಂದು ಕೃಷಿಯಿಂದ ದೂರಾಗಿ, ಬೇರೆ ಉದ್ಯೋಗಕ್ಕೆಹಾತೊರೆಯುತ್ತಿದ್ದಾರೆ. ಯುವ ಜನಾಂಗವನ್ನು ಕೃಷಿಯಲ್ಲಿ ಒಲವು ತೋರಿಸುವ ಸಲುವಾಗಿ ಕಡಿಮೆ ವೆಚ್ಚದ ಯಾಂತ್ರಿಕತೆಯ ಮೂಲಕ ಕೃಷಿಯನ್ನು ಸರಳೀಕರಣ ಮಾಡಬೇಕಾಗಿದೆ.
- ಕೃಷ್ಣಬೈರೇಗೌಡ, ಸಚಿವ