ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕೈ ಬೀಸಿ ಕರೆಯುತ್ತಿದೆ ಕೃಷಿ ಮೇಳ

Vishwanath S
Updated On : 22 Sept 2013, 12:09 pm

ಧಾರವಾಡ: ಕೃಷಿ ಸಂಶೋಧನೆಯಲ್ಲಿ ದೇಶಾದ್ಯಂತ ಖ್ಯಾತಿ ಪಡೆದ ಇಲ್ಲಿನ ಕೃಷಿ ವಿವಿಯಲ್ಲಿ ಪ್ರಸಕ್ತ ಬಾರಿ ನಾಲ್ಕು ದಿನಗಳ ಕೃಷಿ ಮೇಳ ಶನಿವಾರದಿಂದ ಆರಂಭವಾಗಿದೆ.
ಆಹಾರ ಭದ್ರತೆಗಾಗಿ ಜಲಸಂರಕ್ಷಣೆ ವಿಷಯ ಮುಖ್ಯವಾಗಿಟ್ಟುಕೊಂಡು ಆರಂಭವಾಗಿರುವ ಈ ಕೃಷಿ ಮೇಳದಲ್ಲಿ ಕಂಡುಬರುವ ಯುವಕ ಯುವತಿಯರ ದೊಡ್ಡ ದೊಡ್ಡ ಗುಂಪುಗಳು ಬರಲಿರುವ ದಿನಗಳಲ್ಲಿ ಕೃಷಿಯು ಪ್ರಾಮುಖ್ಯತೆ ಪಡೆಯುವ ಹಾಗೂ ಬಹು ಸಂಖ್ಯಾತರಿಗೆ ಉದ್ಯೋಗ ಒದಗಿಸುವ ರೀತಿಯಲ್ಲಿ ಬೆಳವಣಿಗೆ ಸಾಧಿಸುವ ಭರವಸೆ ಹುಟ್ಟಿಸುತ್ತಿದೆ.
ಆಹಾರ ಭದ್ರತೆಗಾಗಿ ಜಲ ಸಂರಕ್ಷಣೆ ಬಗ್ಗೆ ಹೆಚ್ಚು ಅರಿವು ಮೂಡಿಸುವ ವಸ್ತು ಪ್ರದರ್ಶನ, ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ವಿವಿಯ 50ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಮಳೆ ನೀರು ಕೊಯ್ಲು, ಅಂತರ್ಜಲ ಮರುಪೂರಣ, ಸಂಪನ್ಮೂಲ ಸಂರಕ್ಷಣೆಗಾಗಿ ಸಮಗ್ರ ಜಲಾನಯನ ಅಭಿವೃದ್ಧಿ, ಅಧಿಕ ಇಳುವರಿ, ನೀರಿನ ಉಳಿತಾಯಕ್ಕೆ ಸುಧಾರಿತ ನೀರಾವರಿ ಕ್ರಮಗಳು, ಸವಳು ಭೂಮಿಗಳ ಸುಧಾರಣೆ, ಫಲವತ್ತತೆ ಹೆಚ್ಚಳ ಸೇರಿದಂತೆ ರೈತರ ಆವಿಷ್ಕಾರ ಗಮನ ಸೆಳೆಯುತ್ತಿವೆ.
ಅದರಲ್ಲೂ ಫಲಪುಷ್ಪ ಪ್ರದರ್ಶನ ರೈತರನ್ನು, ಜನರನ್ನು ಕೈ ಬೀಸಿ ಕರೆಯುತ್ತಿದೆ. ಪ್ರದರ್ಶನದ ಆರಂಭದಲ್ಲಿಯೇ ತರೇಹವಾರಿ ಜಾತಿಯ ಗುಲಾಬಿ ಹೂಗಳು ಸ್ವಾಗತಿಸುತ್ತಿವೆ. ಹೈಟೆಕ್ ತೋಟಗಾರಿಕೆ ಉತ್ಪನ್ನಗಳು (ಜರ್ಜೆರಾ, ಕಾರ್ನೆಡ್, ಆರ್ಕಿಡ್ ಹೂಗಳು), ಗ್ಲಾಡಿಯೋಲಸ್ ಹೂಗಳು, ಕುಬ್ಜ ಗಿಡಗಳು, ಹಣ್ಣು-ತರಕಾರಿ, ದೊಡ್ಡ ಮೆಣಿಸಿನಕಾಯಿ, ಬದನೆಯ ವಿವಿಧ ಜಾತಿಗಳನ್ನು ಪ್ರದರ್ಶನಕ್ಕಿಡಲಾಗಿದೆ. ಪಚೌರಿ, ನಾಗದಾಳಿ, ಬಜೆ, ನೆಲಬೇವು, ಲೋಳರಸ, ದೊಡ್ಡಪತ್ರೆ, ಜಲಬ್ರಾಹ್ಮಿ ಸೇರಿದಂತೆ ಹತ್ತಾರು ರೀತಿಯ ಔಷಧಿ ಸಸ್ಯಗಳು ಸಹ ಫಲಪುಷ್ಪ ಪ್ರದರ್ಶನದಲ್ಲಿ ನೋಡಲು ಲಭ್ಯ.
ಕೃಷಿ ಮೇಳದಲ್ಲಿ ಕೃಷಿ ರಂಗದ ವಿವಿಧ ಬೆಳವಣಿಗೆಗಳ ಪ್ರದರ್ಶನವಿದ್ದರೆ ಈ ನಡುವೆ ಅದರ ಸಾಹಿತ್ಯದ ದಾಖಲೆ ಮಳಿಗೆಗಳು ಇವೆ. ಅವುಗಳಲ್ಲಿ ಬಹುಮುಖ್ಯ ಸೌಲಭ್ಯಗಳ ಜೊತೆಗೆ ಗ್ರಾಮೀಣ ಜನಸಮುದಾಯಕ್ಕೆ ನೀಡುತ್ತಿರುವ ಸೌಲಭ್ಯಗಳ ಕಿರುನೋಟ ಒದಗಿಸಲು ವಾರ್ತಾ ಇಲಾಖೆ ಪ್ರಥಮ ಬಾರಿಗೆ ಆಕರ್ಷಕ ತೋಟದ ಮನೆಯ ಮಳಿಗೆ ನಿರ್ಮಿಸಿರುವುದು ವಿಶೇಷ. ಇಲಾಖೆಯ ನಿರ್ದೇಶಕ ವಿಶುಕುಮಾರ ಅವರ ವಿಶೇಷ ಆಸ್ಥೆ ಹಾಗೂ ಉಪನಿರ್ದೇಶಕರುಗಳಾದ ಲಕ್ಷ್ಮಿನಾರಾಯಣ ಮತ್ತು ಬಸವರಾಜ ಕಂಬಿ ಅವರ ಮೇಲ್ವಿಚಾರಣೆಯಲ್ಲಿ ಆಕರ್ಷಕವಾಗಿ ಮೂಡಿ ಬಂದಿದೆ. ಕೃಷಿ ಮೇಳದಲ್ಲಿ ಮಾಹಿತಿ ನೀಡಲು ಪ್ರತ್ಯೇಕ ಮಳಿಗೆಯನ್ನು ವಸ್ತುಪ್ರದರ್ಶನ ಮುಖ್ಯದ್ವಾರದಲ್ಲಿಯೇ ತೆರೆಯಲಾಗಿದೆ.
ಮೇಳದಲ್ಲಿ ವಿವಿಧ ಸಂಸ್ಥೆ, ಮಳಿಗೆಗಳ ಕುರಿತು, ವಸತಿ, ಆರೋಗ್ಯ, ಪೊಲೀಸ್ ಇಲಾಖೆಗಳ ವಿಭಾಗಗಳು ಇಲ್ಲಿವೆ. 550 ಮಳಿಗೆಗಳಲ್ಲಿ 154 ಹೈಟೆಕ್, 340 ಸಾಮಾನ್ಯ ಕೃಷಿ ವಸ್ತುಪ್ರದರ್ಶನ, ಕೃಷಿ ಪರಿಕರ ಮಾರಾಟ, 12 ಬಯಲು ಯಂತ್ರೋಪಕರಣ, 20 ಜಾನುವಾರು, 6 ಬೀಜ ಮಾರಾಟ, 20 ಕ್ಷೇತ್ರ ತಾಕುಗಳ ಮಳಿಗೆಗಳಿವೆ. ಶನಿವಾರ 50 ಸಾವಿರಕ್ಕೂ ಹೆಚ್ಚು ರೈತರು, ವಿದ್ಯಾರ್ಥಿಗಳು, ಮಹಿಳೆಯರು ಆಗಮಿಸಿದ್ದರು.
ಜಾನುವಾರು ಪ್ರದರ್ಶನ, ಮೇವಿನ ಬೆಳೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುತ್ತಿದೆ. ಅಗ್ರಿ ಕ್ಲಿನಿಕ್, ಕೃಷಿ ವ್ಯವಹಾರ, ರಫ್ತು ಹಾಗೂ ಕೃಷಿ ಮಾಹಿತಿ ತಂತ್ರಜ್ಞಾನ ಕುರಿತು ರೈತರಿಗೆ ತಿಳಿವಳಿಕೆ ನೀಡಲಾಗುತ್ತಿದೆ. ಸಣ್ಣ ಹಾಗೂ ದೊಡ್ಡ ರೈತರಿಗೆ ಅನುಕೂಲವಾಗುವ ರೀತಿಯ ಕೃಷಿ ಪರಿಕರಗಳ ಮಾರಾಟ ಸಹ ಭರ್ಜರಿಯಾಗಿ ನಡೆಯುತ್ತಿದ್ದು, ಧಾರವಾಡ, ಬಿಜಾಪುರ, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ, ಕಾರವಾರ, ಶಿರಸಿ, ದಾವಣಗೆರೆ, ಕೊಪ್ಪಳ, ಬಳ್ಳಾರಿ ರೈತರು ಮೇಳದಲ್ಲಿ ಭಾಗವಹಿಸಿ ಮಾಹಿತಿ ಪಡೆದರು. ಹಿಂಗಾರು ಹಂಗಾಮಿಗೆ ಕಡಲೆ, ಜೋಳ ಮುಂತಾದ ಬಿತ್ತನೆ ಬೀಜಗಳನ್ನು ಖರೀದಿಸಿದರು.
ಕಳೆಗುಂದಿದ ಜಾನುವಾರು ಪ್ರದರ್ಶನ
ಪ್ರತಿ ವರ್ಷದಂತೆ ಜಾನುವಾರು ಪ್ರದರ್ಶನ ಈ ಬಾರಿ ಪೂರ್ತಿ ಸಪ್ಪೆಯಾಗಿ ಕಾಣುತ್ತಿತ್ತು. ಕೆಲವೇ ಕೆಲ ಎಮ್ಮೆ, ಕೋಣ, ಕುದುರೆ, ಆಡುಗಳ ತಳಿ ಕಂಡು ಬಂದವು. ಅಲ್ಲದೇ, ಜಾನುವಾರುಗಳ ಕುರಿತಾಗಿ ಅಷ್ಟಾಗಿ ಮಾಹಿತಿ ಸಹ ಯಾರಿಗೆ ದೊರೆಯಲಿಲ್ಲ. ಆದ್ದರಿಂದ ರೈತರಿಗಾಗಲಿ ಅಥವಾ ಜನರಿಗಾಗಿ ಜಾನುವಾರು ಪ್ರದರ್ಶನ ಅಷ್ಟೇನು ಮುದ ತರಲಿಲ್ಲ. ಭಾನುವಾರ ಶ್ವಾನಗಳ ಪ್ರದರ್ಶನ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement