ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

4 ವರ್ಷದಲ್ಲಿ ಶೇ. 20 ಕೃಷಿ ಇಳುವರಿ ಹೆಚ್ಚಳ

Mainashree
Updated On : 23 Sept 2013, 11:28 am

ಕನ್ನಡಪ್ರಭ ವಾರ್ತೆ, ಧಾರವಾಡ, ಸೆ. 22
ಮುಂದಿನ ನಾಲ್ಕು ವರ್ಷಗಳಲ್ಲಿ ಶೇ. 20ರಷ್ಟು ಕೃಷಿ ಇಳುವರಿಯನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಪ್ರಯತ್ನಿಸಲಿದೆ ಎಂದು ಕೃಷಿ ಇಲಾಖೆ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಮೇಳದ ಉದ್ಘಾಟನೆ ವೇಳೆ ಮಾತನಾಡಿದ ಅವರು, ನೀರಾವರಿ, ಸವಳು ಭೂಮಿ ಪುನಶ್ಚೇತನ, ರೈತರ ಬೆಳೆಗಳಿಗೆ ನ್ಯಾಯಯುತ ಬೆಲೆ ಹಾಗೂ ಕೃಷಿ ವಿವಿಗಳ ಮೂಲಕ ಹೊಸ ತಳಿಗಳ ಸಂಶೋಧನೆಯ ಹಿನ್ನೆಲೆಯಲ್ಲಿ ಕೃಷಿ ಇಳುವರಿ ಹೆಚ್ಚಿಸಲಾಗುವುದು. ಕೇಂದ್ರ ಸರ್ಕಾರದ ಸಹಯೋಗದಲ್ಲಿ ರಾಜ್ಯದ ಸಾವಿರಾರು ಹೆಕ್ಟೇರ್ ಪ್ರದೇಶ ಸವಳು ಭೂಮಿಯನ್ನು 3/2ರ (ಮೂರರಲ್ಲಿ ಎರಡು ಭಾಗ) ಅನ್ವಯ ಪುನಶ್ಚೇತನಕ್ಕೆ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.
ರೈತರ ಹೆಸರಿನಲ್ಲಿ ಪುಕ್ಕಟೆ ಪ್ರಚಾರ ಹಾಗೂ ರಾಜಕೀಯ ಗಿಮಿಕ್ ಮಾಡುವುದಿಲ್ಲ. ರೈತರಿಗೆ ಅನುಕೂಲ ರೀತಿಯ ಕಾರ್ಯಕ್ರಮಗಳನ್ನು ರೂಪಿಸಿ ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತೇವೆ. ಸದ್ಯ ರೈತರಿಗೆ ಕೃಷಿ ಕಾರ್ಮಿಕರ ಸಮಸ್ಯೆ ಇದ್ದು, ಇದರ ಪರಿಹಾರಕ್ಕೆ ಕೃಷಿ ಯಂತ್ರೋಪಕರಣಗಳನ್ನು ರೈತರು ಬಳಸಬೇಕು. ಅಲ್ಲದೇ, ಕೃಷಿ ವಿವಿಗಳ ಸಂಶೋಧನೆ ಹಾಗೂ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ರೈತರು ಕೃಷಿಯನ್ನು ಲಾಭದಾಯಕ ಉದ್ದಿಮೆಯಾಗಿ ರೂಪಿಸಿಕೊಳ್ಳಬೇಕು. ರೈತರ ಜೊತೆಗೆ ಎಂದಿಗೂ ಸರ್ಕಾರ ಕೈ ಜೋಡಿಸಲಿದ್ದು, ಯಾವುದಕ್ಕೂ ಎದೆಗುಂದದೆ ರೈತ ಮುನ್ನುಗ್ಗಬೇಕೆಂದು ಕೃಷಿ ಸಚಿವರು ಭರವಸೆಯ ಮಾತುಗಳನ್ನಾಡಿದರು.
ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ರೈತರ ಹೆಸರಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುವುದು ಹಾಗೂ ಅವರನ್ನು ಪ್ರಚೋದಿಸುವ ಕೆಲಸ ಕಾಂಗ್ರೆಸ್ ಸರ್ಕಾರದ್ದಲ್ಲ. ರೈತರ ಸೇವೆಗೆ ನಿಜವಾಗಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಮುಂದಾಗಿದ್ದು, ಈಗಾಗಲೇ ಜಾರಿಗೆ ತಂದ ಜನಪರ ಯೋಜನೆಗಳೇ ಸಾಕ್ಷಿ. ರೈತನ ಬದುಕು ಹಸನಾಗಲು ಕಾನೂನಾತ್ಮಕ ಕೃಷಿ ಮಾರುಕಟ್ಟೆ ನೀತಿ, ಹೊಲಗಳಿಂದ ಹೊಲಗಳಿಗೆ, ಹೊಲಗಳಿಂದ ಹಳ್ಳಿಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲು ರಸ್ತೆ ಜಾಲ ಮಾಡಲು ಸಹ ರಾಜ್ಯ ಸರ್ಕಾರ ಚಿಂತಿಸುತ್ತಿದೆ. ರೈತ ಕೃಷಿ ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳಿಂದ ಶೋಷಣೆಗೆ ಒಳಗಾಗಬಾರದೆಂದು ಈಗಾಗಲೇ ಜೋಳವನ್ನು ರು. 1800ಕ್ಕೆ ಬೆಂಬಲ ಬೆಲೆ ನೀಡಿ ಖರೀದಿಸುತ್ತಿದೆ ಎಂದರು.
ಕಾನೂನು ಸಚಿವ ಟಿ.ಬಿ. ಜಯಚಂದ್ರ, ರಾಜ್ಯ ಸರ್ಕಾರ ಅನ್ಯಭಾಗ್ಯ ಹಾಗೂ ಕ್ಷೀರಭಾಗ್ಯ ಯೋಜನೆ ಜಾರಿ ಮಾಡಿದ್ದು, ಕೇಂದ್ರ ಸರ್ಕಾರ ಆಹಾರ ಭದ್ರತೆ ಕಾನೂನು ಜಾರಿಗೆ ಮಾಡುತ್ತಿದೆ. ಈ ಮೂಲಕ ಭಾರತವನ್ನು ಹಸಿರು ದೇಶ ಮಾಡಬೇಕಿದೆ. ಈ ಹಿಂದೆ ಎಂದೂ ಕಾಣದಂತಹ ಅನಿವಾರ್ಯತೆಗಳು ಕೃಷಿ ಕ್ಷೇತ್ರದಲ್ಲಿ ಕಾಣುತ್ತಿದ್ದು, ಇನ್ನಷ್ಟು ಹೊಸ ಸಂಶೋಧನೆ ಹಾಗೂ ಆವಿಷ್ಕಾರಗಳ ಮೂಲಕ ಹೆಚ್ಚಿನ ಆಹಾರದ ಉತ್ಪಾದನೆ ಮಾಡಬೇಕಿದೆ ಎಂದು ಆಶಿಸಿದರು.
ಸಿಎಂಗೆ ಮನವಿ: ಅಧ್ಯಕ್ಷತೆ ವಹಿಸಿದ್ದ ಶಾಸಕ ವಿನಯ ಕುಲಕರ್ಣಿ, ಈ ಭಾಗದಲ್ಲಿ ವಿದ್ಯುತ್ ಸಮಸ್ಯೆ ಮೊದಲು ಬಗೆಹರಿಸಬೇಕು. 3ರಿಂದ 4 ಗಂಟೆ ಮಾತ್ರ ತ್ರಿಫೇಸ್ ವಿದ್ಯುತ್ ನೀಡುತ್ತಿದ್ದು, ಇದು 8 ಗಂಟೆಗೆ ಏರಬೇಕು. ಅಲ್ಲದೇ, ಅಂತರ್ಜಲದ ಕೊರತೆಯಿಂದ ನೀರಾವರಿ ಸಮಸ್ಯೆ ಜಾಸ್ತಿ ಇದೆ. ಆದ್ದರಿಂದ ಈಗಿರುವ 5 ಎಕರೆ ಹನಿ ನೀರಾವರಿಗೆ ನೀಡುತ್ತಿರುವ ರಿಯಾಯ್ತಿಯನ್ನು 10 ಎಕರೆಗೆ ಏರಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ರೈತರು ಭೂಮಿಯಿಂದ ಕೊಳವೆ ಬಾವಿಗಳ ಮೂಲಕ ಪಡೆದ ಪ್ರಮಾಣದಷ್ಟೇ ನೀರನ್ನು ಇಂಗಿಸುವ ಮೂಲಕ ಮರಳಿ ಭೂಮಿಗೆ ಮರಳಿಸಬೇಕೆಂದು ಮನವಿ ಮಾಡಿದರು.
ಸಚಿವರಾದ ಸಂತೋಷ ಲಾಡ್, ಪ್ರಕಾಶ ಹುಕ್ಕೇರಿ, ಶಾಸಕರಾದ ಬಸವರಾಜ ಹೊರಟ್ಟಿ, ಎನ್.ಎಚ್. ಕೋನರಡ್ಡಿ, ಅಬ್ಬಯ್ಯ ಪ್ರಸಾದ, ವೀರಣ್ಣ ಮತ್ತಿಕಟ್ಟಿ, ನಾಗರಾಜ ಛಬ್ಬಿ, ಸಿ.ಎಸ್. ಶಿವಳ್ಳಿ, ಕೃಷಿ ವಿವಿ ಕುಲಪತಿ ಡಾ. ಎಚ್.ಎಸ್. ವಿಜಯಕುಮಾರ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement