ಆಡಳಿತದಲ್ಲಿ ಕನ್ನಡ ಜಾರಿಗೆ ಕ್ರಮ
ಹುಬ್ಬಳ್ಳಿ: ಕನ್ನಡ ಆಡಳಿತ ಭಾಷೆಯಾಗಿದ್ದರೂ ಸಂಪೂರ್ಣವಾಗಿ ಅನುಷ್ಠಾನಗೊಂಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖೇದ ವ್ಯಕ್ತಪಡಿಸಿದ್ದಾರೆ.
ಇಲ್ಲಿಯ ಆದರ್ಶನಗರದಲ್ಲಿ ರಾಜ್ಯ ಸರ್ಕಾರದ ವಿಶೇಷ ಅನುದಾನ ರು. 100 ಕೋಟಿ ಯೋಜನೆಯಲ್ಲಿ ನಿರ್ಮಿಸಿರುವ ಕನ್ನಡ ಭವನವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ, ರಾಜ್ಯದಲ್ಲಿ ಕನ್ನಡದ ವಾತಾವರಣ, ಅನಿವಾರ್ಯತೆ ನಿರ್ಮಾಣವಾಗಬೇಕು. ಆಡಳಿತದಲ್ಲಿ ಕನ್ನಡ ಕಟ್ಟುನಿಟ್ಟಾಗಿ ಜಾರಿಗೆ ತರಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಇದಕ್ಕೆ ಪ್ರತಿಯೊಬ್ಬ ಕನ್ನಡಿಗ ಕೈ ಜೋಡಿಸಬೇಕೆಂದರು.
ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರ ರಾಜ್ಯದ ಯಾವುದೇ ಪ್ರದೇಶವನ್ನು ನಿರ್ಲಕ್ಷಿಸುವುದಿಲ್ಲ. ಸಮಗ್ರ ಕರ್ನಾಟಕವನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಲಾಗುವುದು. ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಸರ್ಕಾರ ಕಟಿಬದ್ಧವಾಗಿದೆ ಎಂದ ಸಿದ್ದರಾಮಯ್ಯ ಹಿಂದಿನ ಸರ್ಕಾರದ ಅಭಿವೃದ್ಧಿಗಾಗಿ ಘೋಷಿಸಿದ್ದ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.
ಡಾ. ಸರೋಜಿನಿ ಮಹಿಷಿ ವರದಿಯನ್ನು ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡುವ ಮೂಲಕ ಕನ್ನಡಿಗರಿಗೆ ಸೌಲಭ್ಯ, ಹೆಚ್ಚು ಉದ್ಯೋಗ ಒದಗಿಸುವ ಅವಶ್ಯಕತೆ ಇದೆ. ಸ್ಥಳೀಯ ಉದ್ಯೋಗಗಳು ಕನ್ನಡಿಗರಿಗೇ ದೊರಕಬೇಕೆಂಬ ಈ ವರದಿಯನ್ನು ಅನುಷ್ಠಾನಕ್ಕೆ ತರಬೇಕಿದೆ. ಚೀನಾ ಪ್ರವಾಸದಿಂದ ಹಿಂದಿರುಗಿದ ಮೇಲೆ ಎಲ್ಲ ಜಿಲ್ಲೆಗಳ ಪ್ರವಾಸ ಕೈಗೊಂಡಿರುವ ತಾವು ಜನರ ಅಹವಾಲುಗಳನ್ನು ಸ್ವೀಕರಿಸಿ, ಅವರ ಆಶೋತ್ತರಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವುದಾಗಿ ಭರವಸೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜನರ ವಿಶ್ವಾಸಕ್ಕೆ ಧಕ್ಕೆ ಬರುವ ಕೆಲಸಗಳನ್ನು ಮಾಡುವುದಿಲ್ಲವೆಂದರು.
ಕನ್ನಡ ನಾಡು, ನುಡಿಗೆ ಧಕ್ಕೆ ಬಂದಾಗ ಕೈಕಟ್ಟಿಕೊಂಡು ಕೂಡುವುದು ಸರಿಯಲ್ಲ. ಅಂಥ ಸಮಯ ಬಂದಾಗ ಸರ್ಕಾರ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲಿದೆ. ಕನ್ನಡ ಉಳಿಸಿ, ಬೆಳೆಸುವ ಕಾರ್ಯ ಮಾಡಲಾಗುವುದು ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, ಬಿ. ಎಸ್. ಯಡಿಯೂರಪ್ಪ ಹಾಗೂ ಡಿ. ವಿ. ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳಿಗೆ ರು. 200 ಕೋಟಿಯ ವಿಶೇಷ ಅನುದಾನ ನೀಡಿದ್ದರು. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಬಳಿಕ ತಮ್ಮ ತವರು ಜಿಲ್ಲೆಯಾದ ಮೈಸೂರಿಗೆ ರು. 100 ಕೋಟಿ ವಿಶೇಷ ಅನುದಾನ ನೀಡಿದ್ದಾರೆ. ಮೈಸೂರಿಗೆ ಅನುದಾನ ನೀಡಿದ್ದಕ್ಕೆ ತಮ್ಮ ಅಭ್ಯಂತರವಿಲ್ಲ, ಹುಬ್ಬಳ್ಳಿ-ಧಾರವಾಡ ಇನ್ನಿತರ ಪಾಲಿಕೆಗೂ ವಿಶೇಷ ಅನುದಾನ ನೀಡುವ ಉದಾರತೆಯನ್ನು ಸಿದ್ದರಾಮಯ್ಯ ತೋರಲಿ ಎಂದರು.
ಬಿಜೆಪಿ ಅಧಿಕಾರಾವಧಿಯಲ್ಲಿ ಕಳಸಾ ಬಂಡೂರಿ ಯೋಜನೆಗೆ ಸುಮಾರು ರು. 100 ಕೋಟಿ ಖರ್ಚು ಮಾಡಲಾಗಿದೆ. ಕಳಸಾ ನಾಲಾ ತಿರುವು ಕಾಮಗಾರಿ ನಿಂತಿದೆ. ಕಳಸಾ ನಾಲಾ ಕಾರ್ಯ ಕೈಗೊಂಡಿದ್ದೇ ಆದರೆ ರಾಜ್ಯಕ್ಕೆ ತತ್ಕ್ಷಣ 1.25 ಟಿಎಂಸಿ ನೀರು ಹರಿದು ಬರಲಿದೆ. ಇದೇ ವೇಳೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಕಳಸಾ-ಬಂಡೂರಿ ಯೋಜನೆಗಿರುವ ಅಡೆತಡೆಗಳನ್ನು ದೂರ ಮಾಡಬೇಕೆಂದರು.
ಎಸ್ಎಫ್ಜಿ ಅನುದಾನ ವಿಳಂಬವಾಗುತ್ತಿದ್ದು, ಅದಷ್ಟು ಬೇಗ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ ಶೆಟ್ಟರ್, ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹುಬ್ಬಳ್ಳಿ-ಧಾರವಾಡ ಪಾಲಿಕೆ ರು. 26 ಕೋಟಿಯ ವಿಶೇಷ ಅನುದಾನ ನೀಡಲು ಮಂಜೂರಾತಿ ನೀಡಿದ್ದೆವು, ಈ ಪೈಕಿ ಕೇವಲ ರು. 9 ಕೋಟಿ ಮಾತ್ರ ಬಿಡುಗಡೆಯಾಗಿದೆ. ಬಾಕಿ ಅನುದಾನ ಬಿಡುಗಡೆಯ ಜತೆಗೆ ಧಾರವಾಡ ಜಿಲ್ಲಾ ಪಂಚಾಯಿತಿಗೆ ಬಿಡುಗಡೆಯಾಗಬೇಕಿದ್ದ ರು. 26 ಕೋಟಿ ವಿಶೇಷ ಅನುದಾನವನ್ನೂ ಬಿಡುಗಡೆಗೊಳಿಸಬೇಕು. ಹುಬ್ಬಳ್ಳಿ-ಧಾರವಾಡ ನಡುವಿನ ಬಿಆರ್ಟಿಸಿ ಹಾಗೂ ಚತುಷ್ಪಥ ರಸ್ತೆ ಕಾಮಗಾರಿಗೆ ಅಗತ್ಯ ಹಣಕಾಸು ಬಿಡುಗಡೆ ಮಾಡಿ ಕಾರ್ಯಾರಂಭಿಸಬೇಕೆಂದರು.
ಕನ್ನಡ ಭವನ ತಮ್ಮ ಕನಸಿನ ಕೂಸಾಗಿತ್ತು ಈಗ ಉದ್ಘಾಟನೆಯಾಗಿದೆ. ಇಲ್ಲಿ ನಿರಂತರ ಕನ್ನಡ ಚಟುವಟಿಕೆ ನಡೆಯಲಿ ಎಂದ ಶೆಟ್ಟರ್ ಕನ್ನಡ ಭವನಕ್ಕೆ 'ಡಿ. ಎಸ್. ಕರ್ಕಿ' ಭವನ ಎಂದು ನಾಮಕರಣ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಸಚಿವರಾದ ಸಂತೋಷ್ ಲಾಡ್, ಎಚ್.ಕೆ. ಪಾಟೀಲ, ಶಾಸಕರಾದ ಪ್ರಸಾದ ಅಬ್ಬಯ್ಯ, ವಿನಯ ಕುಲಕರ್ಣಿ, ಎನ್.ಎಚ್. ಕೋನರಡ್ಡಿ, ವೀರಣ್ಣ ಮತ್ತಿಕಟ್ಟಿ, ಬಸವರಾಜ ಹೊರಟ್ಟಿ, ನಾಗರಾಜ ಛಬ್ಬಿ, ಸಂಸದ ಪ್ರಹ್ಲಾದ ಜೋಶಿ, ಹಿರಿಯ ಪತ್ರಕರ್ತ, ನಾಡೋಜ ಡಾ. ಪಾಟೀಲ ಪುಟ್ಟಪ್ಪ, ಹಿರಿಯ ಕವಿ ನಾಡೋಜ ಡಾ. ಚನ್ನವೀರ ಕಣವಿ ಮತ್ತಿತರರು ಉಪಸ್ಥಿತರಿದ್ದರು.