ತಡವಾಗಿ ದರ್ಶನ ನೀಡಿದ ಸಿಎಂ
ಧಾರವಾಡ: ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಧಾರವಾಡ ಜಿಲ್ಲೆಗೆ ಆಗಮಿಸಿದ್ದ ಸಿದ್ದರಾಮಯ್ಯ ಅವರು ಕೃಷಿ ಮೇಳವನ್ನು ನಿಗದಿಪಡಿಸಿದ ಸಮಯಕ್ಕಿಂತ ಬರೋಬ್ಬರಿ ಮೂರು ಗಂಟೆ ತಡವಾಗಿ ಉದ್ಘಾಟಿಸಿದರು.
ಬೆಳಗ್ಗೆ 11ಕ್ಕೆ ಕೃಷಿ ಮೇಳದ ಉದ್ಘಾಟನೆ ನಿಗದಿಯಾಗಿತ್ತು. ಹುಬ್ಬಳ್ಳಿಯ ಕೆಲ ಸಮಾರಂಭಗಳನ್ನು ಮುಗಿಸಿಕೊಂಡು ಸಿದ್ದರಾಮಯ್ಯ ಅವರು ಮಧ್ಯಾಹ್ನ 2 ಗಂಟೆಗೆ ಕೃಷಿ ಮೇಳಕ್ಕೆ ಆಗಮಿಸಿದರು. ಬೆಳಗ್ಗೆಯಿಂದ ಕಾದು ಕಾದು ಸುಸ್ತಾಗಿದ್ದ ರೈತರಿಗೆ ಮುಖ್ಯಮಂತ್ರಿಯವರು ತಡವಾಗಿ ದರ್ಶನ ನೀಡಿದರು. ಸ್ವಾಗತ, ಉದ್ಘಾಟನೆ, ಸಚಿವರ ಮಾತುಗಳ ಅನಂತರ ಇನ್ನೇನು ಮುಖ್ಯಮಂತ್ರಿ ಮಾತನಾಡಬೇಕು ಎನ್ನುವಷ್ಟರಲ್ಲಿ ಕೃಷಿ ಮೇಳದ ಆವರಣದಲ್ಲಿ ಸುಮಾರು ಅರ್ಧ ಗಂಟೆ ಮಳೆ ಸುರಿಯಿತು. ಸಿದ್ದರಾಮಯ್ಯ ಅವರು ಮಳೆಯಲ್ಲಿಯೇ ಮಾತು ಆರಂಭಿಸಿದರು. ಆದರೆ, ಕೆಲವರು ಮಳೆಯಿಂದಾಗಿ ದಿಕ್ಕಾಪಾಲಾಗಿ ಓಡಿದರೆ ಇನ್ನು ಕೆಲವರು ವೇದಿಕೆ ಮುಂಭಾಗಕ್ಕೆ ಮುತ್ತಿಕ್ಕಿದರು.
ಕೃಷಿ ಮೇಳದ ಉದ್ಘಾಟನೆ ಅನಂತರ ಮಧ್ಯಾಹ್ನ 2ಕ್ಕೆ ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ನಡೆಯಬೇಕಿದ್ದ ಜಿಲ್ಲೆಯ ಪ್ರಗತಿ ಪರಿಶೀಲನೆ ತಡವಾದ ಕಾರಣ ನಡೆಯಲಿಲ್ಲ. ಅವಸರವಾಗಿ ಮುಖ್ಯಮಂತ್ರಿಯವರು ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರಿಂದ ಈ ಭಾಗದ ಜನಪ್ರತಿನಿಧಿಗಳಿಗೆ ತೀವ್ರ ಬೇಸರ ಉಂಟಾಯಿತು.
ಸಭೆಯಲ್ಲಿ ಭಾಗವಹಿಸಿ ಮುಖ್ಯಮಂತ್ರಿಯವರ ಗಮನ ಸೆಳೆಯಲು ಎಲ್ಲ ಕಡತಗಳೊಂದಿಗೆ ಬಂದಿದ್ದೆ. ಆದರೆ, ಪ್ರಗತಿ ಪರಿಶೀಲನೆ ಸಭೆ ರದ್ದಾಗಿದ್ದರಿಂದ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ ತೆರಳಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಪ್ರಗತಿ ಪರೀಶೀಲನೆಗೆ ಜಿಪಂನಲ್ಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಜಿಲ್ಲೆಯ ಸಮಸ್ಯೆಗಳ ಬಗ್ಗೆ ಇನ್ನಷ್ಟು ಹೊತ್ತು ಇದ್ದು ಸಭೆ ನಡೆಸಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜಿಲ್ಲಾ ಪ್ರವಾಸ ಸಾರ್ಥಕವಾಗುತ್ತಿತ್ತು. 'ಬಂದ ಪುಟ್ಟ ಹೋದ ಪುಟ್ಟ' ರೀತಿಯಲ್ಲಿ ಅವರು ಬಂದು ಹೋಗಿದ್ದು ನಮಗೆ ಸರಿ ಎನಿಸಲಿಲ್ಲ ಎಂದು ಕೋನರಡ್ಡಿ ಅಭಿಪ್ರಾಯಿಸಿದ್ದಾರೆ.