ಬಾಲಚಂದ್ರ ಮೇಲಿನ ಆರೋಪ ಸುಳ್ಳು
ಗೋಕಾಕ: ತಾಲೂಕಿನ ತಪಸಿ ಗ್ರಾಮದ ರೇಣುಕಾ ನಾಯಿಕ ಅವರು ತಮ್ಮನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಬೆಂಬಲಿಗರು ಬೆತ್ತಲೆಗೊಳಿಸಿದ್ದಾರೆ ಮತ್ತು ಗ್ರಾಮದಿಂದ ಬಹಿಷ್ಕಾರ ಹಾಕಿದ್ದಾರೆ ಎಂದು ಮಾಡಿರುವ ಆರೋಪ ಶುದ್ಧ ಸುಳ್ಳು. ಈ ಘಟನೆಯಲ್ಲಿ ಸ್ಥಳೀಯ ಶಾಸಕರಾಗಲಿ ಅಥವಾ ಅವರ ಬೆಂಬಲಿಗರದ್ದಾಗಲಿ ಯಾವುದೇ ತಪ್ಪಿಲ್ಲ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚಂದ್ರಗುಪ್ತ ಅವರು ತಿಳಿಸಿದ್ದಾರೆ.
ಗೋಕಾಕ ತಾಲೂಕಿನ ತಪಸಿ ಗ್ರಾಮದ ಮಹಿಳೆಯನ್ನು ಬೆತ್ತಲೆಗೊಳಿಸಿದ ಆರೋಪಕ್ಕೆ ಸಂಬಂಧಪಟ್ಟಂತೆ ಭಾನುವಾರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಂದ ಮಾಹಿತಿ ಸಂಗ್ರಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವೇ ಪೊಲೀಸ್‌ರಿಗೆ ಸುಳ್ಳು ದೂರು ನೀಡಿದ್ದೇವೆಂದು ಸ್ವತಃ ರೇಣುಕಾ ಬಾಳಪ್ಪ ನಾಯಿಕ ಮತ್ತು ಬಾಳಪ್ಪ ನಾಯಿಕ ಅವರೇ ತಮ್ಮ ತಪ್ಪನ್ನು ತಾವು ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.
ತಪಸಿ ಗ್ರಾಮದ ಘಟನೆಗೆ ಸಂಬಂಧಿಸಿಂದಂತೆ ಗೃಹ ಕಾರ್ಯದರ್ಶಿಗೆ ವರದಿ ನೀಡಲಾಗುವುದು ಎಂದು ಹೇಳಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮ ಮದ್ಯ ಸಂಗ್ರಹಿಸಿದ್ದಾರೆ ಎಂದು ಆರೋಪಿಸಿ ಬಾಳಪ್ಪ ನಾಯಿಕ ಅವರು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಗ್ರಾಮದ ಅನೇಕ ಮನೆಯ ಮೇಲೆ ದಾಳಿ ಮಾಡಿದರೂ ಯಾವುದೇ ಅಕ್ರಮ ಪತ್ತೆಯಾಗಿರಲಿಲ್ಲ. ತಮ್ಮ ಹಾಗೂ ತಮ್ಮ ಪತ್ನಿ ಮೇಲೆ ಶಾಸಕ ಬಾಲಚಂದ್ರ ಜಾರಕಿಹೊಳಿ ಬೆಂಬಲಿಗರು ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಮತ್ತೇ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದಾದ ನಂತರ ಸೆ. 3ರಂದು ಬೆಂಗಳೂರಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ನಾಯಿಕ ದಂಪತಿ ಈ ಬಗ್ಗೆ ಮುಖ್ಯಮಂತ್ರಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ಮುಖ್ಯಮಂತ್ರಿ ಅವರು ತಕ್ಷಣ ಈ ಘಟನೆ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಿ ತಮಗೆ ವರದಿ ನೀಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದರು.
ತಪ್ಪೊಪ್ಪಿಗೆ: ಈ ಘಟನೆಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ತಪಸಿ ಗ್ರಾಮದ ರೇಣುಕಾ ಬಾಳಪ್ಪ ನಾಯಿಕ ಅವರು ಭಾನುವಾರ ಗೋಕಾಕ ನಗರದಲ್ಲಿ ಸುದ್ದಿಗಾರರನ್ನು ಭೇಟಿಯಾಗಿ ಸ್ಪಷ್ಟಪಡಿಸಿದ್ದಾರೆ.
ಶಾಸಕರ ವಿರುದ್ಧ ಸುಳ್ಳು ಆರೋಪ ಮಾಡಿ ಪೊಲೀಸರಿಗೆ ದೂರು ನೀಡಿದ್ದೆ. ತಪ್ಪಿನ ಅರಿವಾಗಿ ಎಸ್‌ಪಿ ಅವರಿಗೆ ನೀಡಿದ ದೂರನ್ನು ಸ್ವಯಂ ಪ್ರೇರಣೆಯಿಂದ ಹಿಂಪಡೆಯುತ್ತೇನೆ ಎಂದು ಹೇಳಿದ್ದಾರೆ. ಕಳೆದ ಚುನಾವಣೆಯಲ್ಲಿ ತಮ್ಮ ಪತಿ ಬಾಳಪ್ಪ ಅವರು ಅಕ್ರಮ ಮದ್ಯ ಸಂಗ್ರಹದ ಬಗ್ಗೆ ಚುನಾವಣಾಧಿಕಾರಿಗೆ ಮಾಹಿತಿ ನೀಡಿದ್ದರು. ಆದರೆ ಆ ಮಾಹಿತಿ ಸುಳ್ಳಾಗಿತ್ತು. ಗಂಡನ ಬಂಧನದ ಭೀತಿಯಿಂದ ಶಾಸಕರ ಬೆಂಬಲಿಗರ ಮೇಲೆ ಸುಳ್ಳು ಆರೋಪ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಶಾಸಕರ ಬೆಂಬಲಿಗರು ತಮ್ಮ ಮೇಲೆ ಯಾವುದೇ ರೀತಿಯ ಹಲ್ಲೆ ಮಾಡಿಲ್ಲ. ತಮ್ಮನ್ನು ಬೆತ್ತಲೆಗೊಳಿಸಿಲ್ಲ. ಗ್ರಾಮಸ್ಥರು ಬಹಿಷ್ಕಾರವನ್ನು ಸಹ ಹಾಕಿರಲಿಲ್ಲ. ಸುಳ್ಳು ಆರೋಪದ ಪಶ್ಚಾತಾಪದಿಂದ ತಪಸಿ ಗ್ರಾಮದಿಂದ ಸ್ವತಃ ನಾವೇ ಊರು ಬಿಟ್ಟು ಹೋಗಿದ್ದೇವೆಂದು ರೇಣುಕಾ ನಾಯಿಕ ಸುದ್ದಿಗಾರರಿಗೆ ತಿಳಿಸಿದ್ದಾರೆ.