ರೈತರಿಗೆ ಬೆಳೆ ಲಾಭ ಸಿಗ್ತಿಲ್ಲ
ಧಾರವಾಡ: ಕೃಷಿ ಕ್ಷೇತ್ರದಲ್ಲಿನ ಸಂಶೋಧನೆಗಳಿಂದಾಗಿ ಉತ್ಪನ್ನ ಹೆಚ್ಚುತ್ತಿದ್ದರೂ, ರೈತವರ್ಗ ಸೂಕ್ತ ಲಾಭ ಗಳಿಸುತ್ತಿಲ್ಲ. ಹೀಗಾಗಿ ಕೃಷಿ ಕ್ಷೇತ್ರ ಇಂದಿನ ಯುವಕರಿಂದ ಅಸಡ್ಡೆಗೆ ಒಳಪಡುವಂತಾಗಿದೆ ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಅಧ್ಯಕ್ಷ ಸಿ. ಸಾಂಬಶಿವ ರೆಡ್ಡಿ ವಿಷಾದಿಸಿದರು.
ಕೃಷಿ ಮೇಳದಲ್ಲಿ ತಮ್ಮ ಬ್ಯಾಂಕಿನ ಮಳಿಗೆ ಉದ್ಘಾಟಿಸಿ ಮಾತನಾಡಿ ಅವರು, ಕೃಷಿ ಕ್ಷೇತ್ರ ಅಭಿವೃದ್ಧಿಯಾಗಬೇಕಾದರೆ ಅದಕ್ಕೆ ಸಂಬಂಧಿಸಿದ ಎಲ್ಲ ಸಂಸ್ಥೆಗಳೂ ಏಕಕೋನದಲ್ಲಿ ಕೆಲಸ ಮಾಡಬೇಕು. ಹೊಸ ಹೊಸ ಸಂಶೋಧನೆಗಳು ಸಂಪೂರ್ಣ ಪ್ರಯೋಗಕ್ಕೆ ಒಳಪಟ್ಟ ಅನಂತರ ರೈತರ ಹೊಲವನ್ನು ತಲುಪುವಂತಾದರೆ ನಷ್ಟ ಚಿಂತೆಯನ್ನು ನಿವಾರಿಸಬಹುದಾಗಿದೆ. ಹೈಟೆಕ್ ಕೃಷಿಗೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ಸಾಲ ಯೋಜನೆ ಹೊಂದಿದ್ದು, ರೈತರು ಸದುಪಯೋಗ ಪಡೆಯಬೇಕು ಎಂದರು.
ಬ್ಯಾಂಕು ಹಮ್ಮಿಕೊಂಡ 'ರೈತರಡೆಗೆ' ಎಂಬ ಕಾರ್ಯಕ್ರಮಕ್ಕೆ ಎಲ್ಲೆಡೆಯಿಂದ ಸೂಕ್ತ ಸ್ಪಂದನೆ ಒದಗಿಬರುತ್ತಿದ್ದು, ಒಂದೇ ತಿಂಗಳ ಅವಧಿಯಲ್ಲಿ ಈಗಾಗಲೇ ಏಳು ಸಾವಿರ ಹೊಸ ರೈತರನ್ನು ತಲುಪಲಾಗಿದೆ. ರೈತರಿಗೆ ತಕ್ಷಣ ಸಾಲ ನೀಡಲು ವ್ಯವಸ್ಥೆ ಮಾಡಲಾಗಿದ್ದು ಈ ತಿಂಗಳ ಅಂತ್ಯದ ವರೆಗೆ ಗ್ರಾಮ ಸಭೆಗಳು ಜರುಗಲಿವೆ ಎಂದರು.
ಬ್ಯಾಂಕಿನ ಮಳಿಗೆಗೆ ಕಳೆದ ಕೃಷಿ ಮೇಳದಲ್ಲಿ ಮೂರು ಲಕ್ಷ ಜನರು ಸಂದರ್ಶಿಸಿದ್ದು ಈ ಬಾರಿ ಅದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿಕೊಡುವ ನಿರೀಕ್ಷೆ ಇದೆ. ಅವರಿಗೆ ಸೂಕ್ತ ಮಾಹಿತಿ ನೀಡಲು ಮಳಿಗೆಯಲ್ಲಿ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದರು.
ನವಲಗುಂದದ ಜಾನಪದ ಕಲಾವಿದ ರಾಮಪ್ಪ ಕಾಳೆ ಕಹಳೆವಾದನದ ಮೂಲಕ ಬ್ಯಾಂಕಿನ ಮಳಿಗೆ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬ್ಯಾಂಕಿನ ಮಹಾಪ್ರಬಂಧಕ ಸುಧೀರ ಚಂದಕ್ಕರ, ಮುಖ್ಯ ಪ್ರಬಂಧಕ ಎಂ.ಎಸ್. ಪಾಟೀಲ, ಎಂ.ಸಿ. ಪಾಟೀಲ, ಜಗನ್ನಾಥ ರಾವ್ ಇದ್ದರು.