ಇಂದು ಕಟ್ಟಡ ಉದ್ಘಾಟನೆ
ಧಾರವಾಡ: ತಾಲೂಕಿನ ಮನಗುಂಡಿ ಗ್ರಾಮ ಪಂಚಾಯತಿ ಕಾರ್ಯಾಲಯ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಸೆ. 24ರ ಬೆಳಗ್ಗೆ 11.30ಕ್ಕೆ ಉದ್ಘಾಟಿಸಲಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಿದ ಈ ಕಟ್ಟಡದ ಸಮಾರಂಭದಲ್ಲಿ ಗ್ರಾಪಂ ಅಧ್ಯಕ್ಷ ಕರೆಪ್ಪ ಯತ್ತಿನಗುಡ್ಡ ಅಧ್ಯಕ್ಷತೆ ವಹಿಸುವರು. ಬೈಲೂರ ನಿಷ್ಕಲಮಂಟಪ ನಿಜಗುಣಾನಂದ ವಿರಕ್ತ ಮಠದ ಸಿದ್ಧಲಿಂಗಯ್ಯ ಸ್ವಾಮೀಜಿ, ಮಹಾಮನೆ ಚನ್ನಯಗಿರಿ ಸ್ವಾಮಿಗಳಾದ ಬಸವಾನಂದ ಮನಸೂರ, ರೇವಣಸಿದ್ಧೇಶ್ವರ ಮಹಾಮಠದ ಬಸವರಾಜ ದೇವರು ಹಾಗೂ ರಾಣಯ್ಯ ಸಂಗಯ್ಯ ಹಿರೇಮಠ ಸಾನ್ನಿಧ್ಯ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
ನಾಳೆಯೊಳಗೆ ವಿವರ ನೀಡಿ
ಧಾರವಾಡ: ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಮಹಿಳಾ ಸ್ವಸಹಾಯ ಸಂಘಗಳ ವಿವರಗಳನ್ನು ಸೆ. 25ರೊಳಗಾಗಿ ನಿಗದಿತ ನಮೂನೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿಗಳು ಸಂಗ್ರಹಿಸುತ್ತಿವೆ. ಈ ರೀತಿ ಪಡೆದ ಮಾಹಿತಿಯನ್ನು ಪಂಚತಂತ್ರ ತಂತ್ರಾಂಶದಲ್ಲಿ ಅಳವಡಿಸಲಾಗುತ್ತಿದ್ದು, ಸಂಬಂಧಿಸಿದ ಗ್ರಾಪಂ ಸಿಬ್ಬಂದಿ ಹಾಗೂ ಅಂಗನವಾಡಿ ಕಾರ್ಯಕರ್ತರು ಮಾಹಿತಿ ಸಂಗ್ರಹಣೆಗೆ ಭೇಟಿ ನೀಡಿದಾಗ ತಮ್ಮ ಸ್ವ ಸಹಾಯ ಸಂಘಕ್ಕೆ ಹಾಗೂ ಸಂಘದ ಸದಸ್ಯರಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ನೀಡಿ ಸಹಕರಿಸಬೇಕೆಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ.
ಫಲಪುಷ್ಪ ಪ್ರದರ್ಶನದ ಸ್ಥಳ ಬದಲಾವಣೆ
ಧಾರವಾಡ: ಇಲ್ಲಿನ ಕಲಾಭವನದಲ್ಲಿ ಪ್ರಸಕ್ತ ಸಾಲಿನ ಫಲಪುಷ್ಪ ಪ್ರದರ್ಶನ ಏರ್ಪಡಿಸಲು ಈ ಮೊದಲು ಸ್ಥಳ ನಿಗದಿಪಡಿಸಲಾಗಿತ್ತು. ಕಲಾಭವನ ನವೀಕರಣ ಕಾಮಗಾರಿ ಪೂರ್ಣಗೊಳ್ಳದ ಕಾರಣದಿಂದ ಹುಬ್ಬಳ್ಳಿ ಗ್ಲಾಸ್‌ಹೌಸ್‌ನಲ್ಲಿ ಅ. 2ರಿಂದ 4ರ ವರೆಗೆ ಏರ್ಪಡಿಸಲು ತೀರ್ಮಾನಿಸಲಾಗಿದೆ. ಪ್ರದರ್ಶನದಲ್ಲಿ ಭಾಗವಹಿಸುವ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಯವರು ತಮ್ಮ ಪ್ರದರ್ಶಿಕೆಗಳನ್ನು ಅ. 2ರ ಬೆಳಗ್ಗೆ 10ರೊಳಗಾಗಿ ತೆಗೆದುಕೊಂಡು ಬಂದು ನೋಂದಣಿ ಮಾಡಿಸಿಕೊಳ್ಳಬೇಕೆಂದು ಧಾರವಾಡ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಶಾಂತಲಾ ಪಾಟೀಲ ದತ್ತಿ ಪುರಸ್ಕಾರ
ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘದ ಶಾಂತಲಾ ಪಾಟೀಲ ದತ್ತಿ ಅಂಗವಾಗಿ ಶಾಂತಲಾ ಪಾಟೀಲ ಇವರ ಹೆಸರಿನ ಸಾಹಿತ್ಯ ಪುರಸ್ಕಾರ ಕಾರ್ಯಕ್ರಮವನ್ನು ಸೆ. 24ರ ಸಂಜೆ 5.30ಕ್ಕೆ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಏರ್ಪಡಿಸಲಾಗಿದೆ. ಸಾಹಿತಿ ಮೈಸೂರಿನ ಡಾ. ಲತಾ ರಾಜಶೇಖರ ಪ್ರಶಸ್ತಿ ಸ್ವೀಕರಿಸುವರು. ಕವಿವಿ ಕುಲಪತಿ ಡಾ. ಎಚ್.ಬಿ. ವಾಲೀಕಾರ ಪ್ರಶಸ್ತಿ ಪ್ರದಾನ ಮಾಡುವರು. ವಿಮರ್ಶಕ ಡಾ.ಎಸ್.ಎಂ. ವೃಷಭೇಂದ್ರಸ್ವಾಮಿ ಅಧ್ಯಕ್ಷತೆ ವಹಿಸುವರು. ಡಾ. ಶಾಂತಾ ಇಮ್ರಾಪುರ, ನಾಡೋಜ ಡಾ. ಪಾಟೀಲ ಪುಟ್ಟಪ್ಪ ಭಾಗವಹಿಸಲಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.