ಬಾಲ ಪ್ರತಿಭೆಗಳ ಸಂಗೀತ ರಸದೌತಣ
ಹುಬ್ಬಳ್ಳಿ: ಮಂಗಲಭಾರತಿ ಹಾಗೂ ಇಂಡಿಯನ್ ಮ್ಯೂಸಿಕ್ ಅಕಾಡೆಮಿ ಆಶ್ರಯದಲ್ಲಿ ಸೋಮವಾರ ಸವಾಯಿ ಗಂಧರ್ವ ಹಾಲ್ನಲ್ಲಿ ಆಯೋಜಿಸಿದ್ದ ತನಿಷ್ಕಾ ಸ್ವರವರ್ಷಾ ಸಂಗೀತೋತ್ಸವ ಬಾಲ ಹಾಗೂ ಯುವ ಪ್ರತಿಭೆಗಳ ಕಲೆಗಳ ಸಾಕ್ಷಾತ್ಕಾರಕ್ಕೆ ಕನ್ನ್ನಡಿ ಹಿಡಿದಂತಿತ್ತು.
ನಾಡಿನ ಪ್ರಸಿದ್ಧ ಹಿಂದೂಸ್ತಾನಿ ಗಾಯಕ ಪಂ. ಬಾಲಚಂದ್ರ ನಾಕೋಡ ಸಂಗೀತೋತ್ಸವ ಉದ್ಘಾಟಿಸಿದರು. ಸಂಗೀತೋತ್ಸವದ ಆರಂಭದಲ್ಲಿ ಹುಬ್ಬಳ್ಳಿಯ 7 ವರ್ಷದ ಬಾಲಕ ಮಾ. ಹೇಮಂತ ಜೋಶಿ ತಬಲಾ ಸೋಲೊದಲ್ಲಿ ಪ್ರೇಕ್ಷಕರನ್ನು ಮಂತ್ರಮುಗ್ದಗೊಳಿಸಿದರು. ಪುಣೆಯ ಯುವ ಹಿಂದೂಸ್ತಾನಿ ಗಾಯಕ ರಮಾಕಾಂತ ಗಾಯಕವಾಡ ರಾಗ್ ಯಮನದೊಂದಿಗೆ ಕಾರ್ಯಕ್ರಮ ಆರಂಭಿಸಿ ಸುಮಾರು 1 ಗಂಟೆ ಈ ರಾಗ ಪ್ರಸ್ತುತ ಪಡಿಸಿದರು. ಉಸ್ತಾದ ಅಮೀರಖಾನ್ ಹಾಗೂ ದಂತಕಥೆಯಾಗಿದ್ದ ಉಸ್ತಾದ ಬಡೆಗುಲಾಮ ಅಲಿಖಾನರ ಪ್ರತಿಬಿಂಬದಂತೆ ಮೂಡಿಬಂದ ರಾಗ ಮೇಘ ಸಭಾಭವನದ ಒಳಗೆ ಮಳೆಯ ವಾತಾವರಣ ಸೃಷ್ಟಿಸಿತ್ತು.
ಯಾದಪಿಯಾ ಹಾಗೂ ಕಾ ಕರೂ ಸಜನಿ ಥುಮರಿಗಳು ಆಕರ್ಷಣಿಯವಾಗಿದ್ದವು. ಏತನ್ಮಧ್ಯೆ ನಾಗರಾಜ ಹೆಗಡೆ ಅವರ ಕೊಳಲು ವಾದನ ಮಾಧುರ್ಯವಾಗಿತ್ತು. ಮಂಗಲಭಾರತಿ ಅಧ್ಯಕ್ಷ ಮುರಲೀಧರ ಮಳಗಿ ಪ್ರಾಸ್ತಾವಿಕ ಮಾತನಾಡಿದರು.