ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಮಣ್ಣಲ್ಲಿ ಹೊನ್ನು ಬೆಳೆದ ರೈತರು

Lingaraj Badiger
Updated On : 24 Sept 2013, 11:01 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಸೆ. 23
ಒಕ್ಕಲುತನ ಒಂದು ಕಾಲದಲ್ಲಿ ಎಲ್ಲರಿಗೂ ಬೇಕಾಗಿದ್ದ ಮತ್ತು ಇಷ್ಟವಾಗುತ್ತಿದ್ದ ವೃತ್ತಿ. ಕೂಲಿ ಕಾರ್ಮಿಕರ ಸಮಸ್ಯೆ ಹೀಗೆ ಹತ್ತು ಹಲವಾರು ಸಮಸ್ಯೆಗಳ ಮಧ್ಯೆಯೇ ಕೃಷಿಯಲ್ಲಿ ಒಂದಿಷ್ಟು ಸಾಧನೆ ಮಾಡಿ ಕೃಷಿಯೂ ಲಾಭದಾಯಕವಾಗಬಲ್ಲುದು ಎನ್ನುವುದನ್ನು ತೋರಿಸಿಕೊಟ್ಟವರ ಪರಿಚಯ ಇಲ್ಲಿದೆ. ಅಂದ ಹಾಗೆ ಇವರಿಗೆಲ್ಲರಿಗೂ ಧಾರವಾಡ ಕೃಷಿ ವಿವಿ ಶ್ರೇಷ್ಠ ಕೃಷಿಕ, ಕೃಷಿ ಮಹಿಳೆ ಪ್ರಶಸ್ತಿ ನೀಡಿ ಗೌರವಿಸಿದೆ.
ಪ್ರಸಾದ್ ರಾಮ ಹೆಗಡೆ: ಓದಿದ್ದು ಕಾನೂನು ಪದವಿ. ಆದರೆ ಕೈಹಿಡಿದಿದ್ದು ಕೃಷಿ. ಇದು ಉ-ಕ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಾನಗೋಡು ಎಂಬ ಕುಗ್ರಾಮದ ಪ್ರಸಾದ ರಾಮ ಹೆಗಡೆ ಅವರ ಸಾಧನೆ. ತಮ್ಮ ತೋಟ ಮತ್ತು ಗದ್ದೆಗೆ ಬೇಕಾಗುವ ನೀರನ್ನು ಇವರು ಪಡೆದುಕೊಂಡಿದ್ದು, ತೋಟಕ್ಕೆ ಹೊಂದಿಕೊಂಡಂತೆ ಇರುವ ಬೆಟ್ಟದ ಇಳಿಜಾರಿನಲ್ಲಿ ಸುಮಾರು 40ಕ್ಕೂ ಹೆಚ್ಚು ಇಂಗುಗುಂಡಿ ನಿರ್ಮಿಸುವ ಮೂಲಕ. ಮಳೆಗಾಲದಲ್ಲಿ ಇಂಗುಗುಂಡಿಗಳಲ್ಲಿ ಇಂಗುವ ನೀರು ನೇರವಾಗಿ ಇವರ ತೋಟದಲ್ಲಿನ ಕೃಷಿ ಹೊಂಡಕ್ಕೆ ಅಂತರ್ಜಲ ಪೂರೈಸುತ್ತದೆ.
ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ಪ್ರಸಾದ, ಉತ್ತರ ಕನ್ನಡ ಜಿಲ್ಲೆಯ ಸಾಂಪ್ರದಾಯಿಕ ಬೆಳೆಗಳಾದ ಅಡಿಕೆ, ತೆಂಗಿನ ಜೊತೆಗೆ ಕಾಳು ಮೆಣಸು, ಏಲಕ್ಕಿ, ಜಾಯಿಕಾಯಿ ಜೊತೆಗೆ ವೆನಿಲ್ಲಾ ಅಗಾರವುಡ್ ಮತ್ತು ಕಾಫಿ ಬೆಳೆಯುತ್ತಿದ್ದಾರೆ. ಸಾವಯವ ಕೃಷಿಗೆ ಪೂರಕವಾಗುವಂತೆ ಎತ್ತು ಹಸು ಸಾಕಾಣಿಕೆ ಮಾಡಿದ್ದಾರೆ. ಆರ್ಥಿಕ ಸ್ವಾವಲಂಬನೆಗಾಗಿ 40ಕ್ಕೂ ಹೆಚ್ಚು ವಿವಿಧ ತಳಿಯ ಔಷಧಿ ಸಸ್ಯಗಳನ್ನು ಬೆಳೆದು, ಇಡೀ ತಮ್ಮ ತೋಟ ಮತ್ತು ಗದ್ದೆಯನ್ನು ಕೃಷಿ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡು ಕೃಷಿಯಲ್ಲೂ ಲಾಭ ಮಾಡಿದ್ದಾರೆ.
ಸಮಗ್ರ ಕೃಷಿಕ ಗದಿಗಯ್ಯ: ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನ ಮುನವಳ್ಳಿಯ ಈ ಪ್ರಗತಿಪರ ರೈತರ ಹೊಲಕ್ಕೆ ಕಾಲಿಟ್ಟರೆ ಸಾಕು, ಒಕ್ಕಲುತನ ಅಂದರೆ ಹೀಗಿರಬೇಕು ಎಂದೆನಿಸುತ್ತದೆ. ನೀರಿನ ಸದ್ಬಳಕೆ ಅದರಿಂದ ವಿದ್ಯುತ್ ಉತ್ಪಾದನೆ, ತರಕಾರಿ ಬೆಳೆ, ನೆರಳು ಮತ್ತು ಹಣ ನೀಡುವ ಮರಗಳ ಸಾಲು, ಹೊಲಕ್ಕೆ ಬೇಕಾಗುವ ಗೊಬ್ಬರ ತಯಾರಿಕಾ ಘಟಕ ಈ ಪಟ್ಟಿ ಇನ್ನೂ ಬೆಳೆಯುತ್ತಲೇ ಹೋಗುತ್ತದೆ.
ವೈದಿಕ ವೃತ್ತಿಯಲ್ಲಿರುವ ಮುನವಳ್ಳಿಯ ಗದಿಗಯ್ಯ ಹಿರೇಮಠ ಅವರದ್ದು, ನೀರಿನ ಸದ್ಬಳಕೆಯಲ್ಲಿ ಎತ್ತಿದ ಕೈ. ಊರಿನ ತ್ಯಾಜ್ಯ ನೀರನ್ನು ತಮ್ಮ 25 ಎಕರೆ ಹೊಲಕ್ಕೆ ನೀರಾವರಿ ಮೂಲವಾಗಿರಿಸಿಕೊಳ್ಳುವ ಜೊತೆಗೆ ನೀರು ಹರಿಯುವ ಜಾಗದಲ್ಲಿ ಫ್ಯಾನ್ ಮತ್ತು ಡೈನಮೋ ಅಳವಡಿಸಿ ಅಲ್ಪ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸುತ್ತಿದ್ದಾರೆ.
ವರ್ಷಕ್ಕೆ ಸರಾಸರಿ 10-12 ಲಕ್ಷ ಆದಾಯ ಗಳಿಸುವ ಗದಿಗಯ್ಯ ತಾವು ಬೆಳೆಯುವ ತರಕಾರಿಯನ್ನು ಹತ್ತಿರದ ಟಿಬೇಟಿಯನ್ ಕಾಲೋನಿಗೆ ಪೂರೈಸುವ ಗುತ್ತಿಗೆ ಪಡೆದುಕೊಂಡು, ಕೃಷಿಯಲ್ಲಿ ನಷ್ಟವಿಲ್ಲ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.
ಸಣ್ಣ ರೈತನ ದೊಡ್ಡ ಸಾಧನೆ: ಇರೋ ನಾಲ್ಕೂವರೆ ಎಕರೆಯಲ್ಲಿ ಏನೆಲ್ಲ ಮಾಡಬಹುದು ಅದೂ ಬಯಲು ಸೀಮೆಯಲ್ಲಿ. ಬರದ ನೆಲದಲ್ಲೂ ಕೃಷಿಯಿಂದ ಉತ್ತಮ ಲಾಭ ಪಡೆಯಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದು ಗದಗ ಜಿಲ್ಲೆ ರೋಣ ತಾಲೂಕಿನ ಚಿಕ್ಕಮಣ್ಣೂರ ಗ್ರಾಮದ ರೈತ ಹನುಮಂತಪ್ಪ ನಾಗಪ್ಪ ಪಟ್ಟೇದ.
ಉ-ಕದ ರೈತರು ಹೇಳುವಂತೆ ಬದು ಇರೋ ಹೊಲಕ್ ರೋಗ ಬಾಳಾ, ಮತ್ತಿ ಮಣ್ಣಿಗೆ ನೀರ್ ಬ್ಯಾಡಾ, ಈ ಮಾತನ್ನು ಅಕ್ಷರಶಃ ಪಾಲಿಸಿ ಹೊಲದ ಸುತ್ತಲೂ ನಿರ್ಮಿಸಿದ ಬದುಗಳ ಮೇಲೆ ಸಾಗವಾನಿ, ಬೇವು ಸೇರಿದಂತೆ ಕಾಡು ಮರ ಬೆಳೆದಿದ್ದಾರೆ. ಒಕ್ಕಲುತನದ ಜೊತೆಗೆ ಹೈನುಗಾರಿಕೆ, ಆಡು ಸಾಕಾಣಿಕೆ, ಎರೆ ಹುಳು ಗೊಬ್ಬರ ತಯಾರಿಕೆ ಹೀಗೆ ಹತ್ತು ಹಲವು ಕೃಷಿ ಸಂಬಂಧಿತ ಚಟುವಟಿಕೆಗಳಿಂದ ಇರೋ ನಾಲ್ಕೂವರೆ ಎಕರೆಯಲ್ಲಿ ಲಕ್ಷಗಟ್ಟಲೆ ಹಣ ಎಣಿಸುತ್ತಿದ್ದಾರೆ.
ಹೈನುಗಾರಿಕೆಯಿಂದ ಲಕ್ಷ ಆದಾಯ: ತರಕಾರಿ ಮತ್ತು ಹೈನುಗಾರಿಕೆಯಂತ ಕೃಷಿ ಪೂರಕ ಚಟುವಟಿಕೆಗಳಿಂದ ಸರಾಸರಿ ನಾಲ್ಕು ಲಕ್ಷ ರು. ಆದಾಯ ಗಳಿಸುತ್ತಿರುವ ಧಾರವಾಡ ಜಿಲ್ಲೆ ಮರೆವಾಡ ಗ್ರಾಮದ ಬಸವರಾಜ ಮಲ್ಲೇಶಪ್ಪ ಕುಂದಗೋಳ ಅವರದ್ದು ಭೂಹಿಡುವಳಿ ಪ್ರಕಾರ ನೋಡಿದರೆ ದೊಡ್ಡ ರೈತರಾಗಬೇಕು. 11 ಎಕರೆ ನೀರಾವರಿ 28 ಎಕರೆ ಒಣ ಬೇಸಾಯ ಮಾಡಿಕೊಂಡಿರುವ ಬಸವರಾಜ, ಕೃಷಿಯಲ್ಲಿ ಆಧುನಿಕತೆ ಮತ್ತು ಸಾಂಪ್ರದಾಯಿಕತೆ ಎರಡನ್ನೂ ಅಳವಡಿಸಿಕೊಂಡಿದ್ದಾರೆ. ಆರು ಎಕರೆ ಹೊಲಕ್ಕೆ ನಿರ್ಮಿಸಿರುವ ಬದುಗಳ ಮೇಲೆ ಕಾಡು ಮರ ಬೆಳೆಯಲಾಗಿದ್ದು, ಕೃಷಿಯಲ್ಲಿ ಕೊಟ್ಟಿಗೆ ಮತ್ತು ಎರೆ ಹುಳು ಗೊಬ್ಬರದ ಬಳಕೆ ಜಾಸ್ತಿ.
ಇತರೇ ಆದಾಯವೇ ಲಕ್ಷ!: ಮೀನು ಮಾರಾಟದಿಂದ ರು. 6 ಸಾವಿರ, ಕೋಳಿ ಮಾರಾಟದಿಂದ ರು. 30 ಸಾವಿರ, ಹೈನುಗಾರಿಕೆಯಿಂದ 40 ಸಾವಿರ ಮತ್ತು ಆಡು ಸಾಕಾಣಿಕೆಯಿಂದ 15 ಸಾವಿರ ಇದು ಕೃಷಿಯೇತರ ಚಟುವಟಿಕೆಯಿಂದ ಬರಡು ಭೂಮಿಯಲ್ಲಿ ಗೇಯ್ಮೆ ಮಾಡುತ್ತಿರುವ ರೈತನೊಬ್ಬನ ಆದಾಯ.  
ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಪಟ್ಟಿಹಾಳ ಕೆ.ಬಿ. ಎಂಬ ಸಣ್ಣ ಗ್ರಾಮದ ಮಹಾದೇವಪ್ಪ ಬಸಪ್ಪ ತಿರಕಣ್ಣವರ ಎಂಬ ರೈತನ ಸಾಧನೆ ಇದು. ಈ ಸಾಧನೆಗೆ ಧಾರವಾಡ ಕೃಷಿ ವಿವಿಯ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಿದೆ.
ಇರುವ 7.14 ಎಕರೆಯಲ್ಲಿ ಕಬ್ಬು, ಬಾಳೆ, ಗೋವಿನ ಜೋಳ, ಹತ್ತಿ, ಹೆಸರು, ಉದ್ದು ಮತ್ತು ದನಗಳಿಗೆ ಮೇವು ಬೆಳೆಯುತ್ತಿದ್ದಾರೆ. ಬಾಳೆ ತೋಟದಲ್ಲಿ ಮಿಶ್ರ ಬೇಸಾಯ ಮಾಡುತ್ತಿದ್ದು, ಬಾಳೆ ಸಾಲುಗಳ ಮಧ್ಯ ಮೂಲಂಗಿ, ಕೊತಂಬರಿ, ಸಬ್ಬಸಿಗೆ ಬೆಳೆಯುತ್ತಿದ್ದು, ಕುಟುಂಬದ ಖರ್ಚು ವೆಚ್ಚ ತರಕಾರಿ ಮಾರಾಟದಿಂದ ನೀಗುತ್ತದೆ. ತೆರೆದ ಬಾವಿಯಲ್ಲಿ ಸಂಗ್ರಹವಾಗುವ ನೀರಿನಲ್ಲಿ ಕಾಟ್ಲಾ ಮೀನು ಸಾಕಾಣಿಕೆ ಮಾಡುತ್ತಿದ್ದಾರೆ. ಮನೆಯಲ್ಲಿನ ಕಸ ಮುಸುರೆ, ದನದ ಬಾಣಿ ನೇರವಾಗಿ ಬಾವಿಗೆ ಸೇರುತ್ತದೆ. ಹೀಗಾಗಿ ಮೀನುಗಳಿಗೆ ಖರ್ಚಿಲ್ಲದೇ ಆಹಾರ ಪೂರೈಸುತ್ತಿದ್ದಾರೆ.

ತಳಿ ಸಮುದಾಯ ಬೀಜ ಬ್ಯಾಂಕ್
ಸಕ್ಕರೆ ರೋಗಿಗಳಿಗೆ ಡಯಾಬಿಟಿಸ್ ಅಕ್ಕಿ, ಬಾಣಂತಿ ಭತ್ತ. ಅಕ್ಕಿಗೊಂದು, ಅವಲಕ್ಕಿಗೊಂದು, ನುಚ್ಚಿಗೊಂದು, ತಂಬಿಟ್ಟಿಗೆ ಇನ್ನೊಂದು. ರೊಟ್ಟಿಗೊಂದು, ಚಕ್ಕುಲಿಗೆ ಇನ್ನೊಂದು. ಇನ್ನು, ಬರೀ ಪಾಲಿಶ್ ಅಕ್ಕಿ ತಿಂದು ಬೇಸರವಾಗಿದ್ದರೆ ರುಚಿಗೆ ಮತ್ತೊಂದು.
ಹೀಗೆ ತರಹೇವಾರಿ ತಳಿಗಳ ಬತ್ತ ಮಾತ್ರವಲ್ಲ, ಅಪರೂಪದ ದೇಸೀ ತಳಿಗಳ ಸಂಗ್ರಹವೇ ಇಲ್ಲಿದೆ. ಅಪರೂಪದ ದೇಸೀ ತಳಿ ಸಂಗ್ರಹಿಸಿ, ಅಭಿವೃದ್ಧಿ ಪಡಿಸಿ ಪೀಳಿಗೆಯಿಂದ ಪೀಳಿಗೆ ಹಂಚುವ ಕಾರ್ಯ ಇಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ. ಧಾರವಾಡದ ಕೃಷಿ ವಿವಿಯಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗುಂಡೇನಟ್ಟಿಯ ಸಿದ್ಧಾರೂಢ ಸಾವಯವ ಕೃಷಿಕರ ಬಳಗ ಕಟ್ಟಿಕೊಂಡ ಸಮುದಾಯ ಬೀಜ ಬ್ಯಾಂಕ್ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ. ಗ್ರೀನ್ ಫೌಂಡೇಶನ್ ಸಹಕಾರದಿಂದ ಕಳೆದ ಏಳು ವರ್ಷದಿಂದ ಗ್ರಾಮದ ಸುಮಾರು 40 ರೈತರೇ ಸೇರಿಕೊಂಡು ಸಮುದಾಯ ಬೀಜ ಬ್ಯಾಂಕ್ ಸ್ಥಾಪಿಸಿಕೊಂಡು ದೇಸೀ ಹಾಗೂ ಜವಾರಿ ಬೀಜಗಳ ಸಂಸ್ಕೃತಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.
ಯಾವ್ಯಾವ ತಳಿಗಳು: ಬತ್ತದಲ್ಲಿಯೇ ವೈವಿಧ್ಯಮಯ ಎನ್ನಬಹುದಾದ ಮತ್ತು ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿರುವ ಕೆಂಪಕ್ಕಿ, ಕುಂಕುಮಸಾಳಿ, ಜೀರಿಗೆ ಸಣ್ಣ, ರಾಜಮುಡಿ, ಗಂಧಸಾಳಿ, ಕರಿಭತ್ತ, ಕರಿ ಗಿರಜವಿಲಿ, ಸೊರಟಾ ಅಕ್ಕಿ,ಬರ್ಮಾ ಕಪ್ಪ ಅಕ್ಕಿ, ನವರಾ ಹೀಗೆ ಸುಮಾರು 70 ವಿವಿಧ ಬಗೆಯ ಅಪರೂಪದ ಅಕ್ಕಿ ತಳಿಗಳನ್ನು ಈ ಕೃಷಿಕರ ಬಳಗ ತಮ್ಮೂರಲ್ಲಿಯೇ ಬೆಳೆದು ಇನ್ನುಳಿದ ರೈತರಿಗೂ ಬೆಳೆಯಲು ಪ್ರೇರಣೆ ನೀಡುತ್ತಿದೆ.
ಕಳೆದ ಏಳು ವರ್ಷದಿಂದ ಆರಂಭವಾದ ನಮ್ಮ ಸಮುದಾಯ ಬೀಜ ಬ್ಯಾಂಕ್ ಬರೀ ಭತ್ತ ಮಾತ್ರವಲ್ಲ ತರಕಾರಿ (ಗೊಂಚಲ ಹೀರೆ, ಸಿಹಿ ಮೂಲಂಗಿ, ಎಳಲಿ ಬೆಂಡಿ, ಜವಾರಿ ಸೌತಿ ಇತ್ಯಾದಿ), ಏಕದಳ (ರಾಗಿ, ನವಣೆ, ಆರ್ಕ, ಉದಲು, ಸಾವೆ ಇತ್ಯಾದಿ) ಜೋಳ (ಮೂಲದಂಡೆ, ಗಿಡಗಂಡೆ, ನುಚ್ಚಿಗಾಗಿ ಸಕ್ಕರೆ ಮುಕ್ಕ, ಹೊಸ ಜೋಳ, ಕಡುಬಿನ ಜೋಳ) ಎಣ್ಣೆ ಕಾಳು (ಅಗಸಿ, ಸಾಸಿವೆ, ಬಿಳಿ ಹಾಗೂ ಕರೆ ಎಳ್ಳು ಇತ್ಯಾದಿ) ತಳಿಗಳನ್ನು ಸಹ ಅಭಿವೃದ್ಧಿಪಡಿಸಲಾಗುತ್ತಿದೆ. ಸಾಮಾನ್ಯ ರೈತರೆಲ್ಲರೂ ದೇಸೀ ತಳಿ ಬೆಳೆಯುವ ಮೂಲಕ ನಮ್ಮ ತಳಿ ಸಂಸ್ಕೃತಿ ಉಳಿಸಿಕೊಂಡು ಹೋಗಬೇಕು ಎನ್ನುವುದು ನಮ್ಮ ಆಶಯ. ಸಂಪರ್ಕಕ್ಕಾಗಿ -ಮೊ.  99721 50378.
-ಸತೀಶ ಪಾಗಾದ/ಬಸವರಾಜ ಹಿರೇಮಠ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement