ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಹಣದಾಸೆಗಾಗಿ ಚಿಕ್ಕಪ್ಪನನ್ನೇ ಅಪಹರಿಸಿದ ಭೂಪ!

Lingaraj Badiger
Updated On : 24 Sept 2013, 11:04 am

ಹುಬ್ಬಳ್ಳಿ: ಆಸ್ತಿಗಾಗಿ ಬೆಂಗಳೂರಿನಲ್ಲಿ ವ್ಯಕ್ತಿಯೋರ್ವನನ್ನು ಅಪಹರಿಸಿಕೊಂಡು ಹುಬ್ಬಳ್ಳಿಗೆ ಬಂದ ಅಪಹರಣಕಾರರ ತಂಡವನ್ನು ಹುಬ್ಬಳ್ಳಿ ಶಹರ ಪೊಲೀಸರು ಸೋಮವಾರ ರಾತ್ರಿ ರೇಲ್ವೆ ಸ್ಟೇಶನ್ ರಸ್ತೆಯಲ್ಲಿ ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ.
ಬೆಂಗಳೂರಿನ ಲಿಂಗನಕೆರೆ ನಿವಾಸಿ ಮುನಿಯಪ್ಪ (53) ಎಂಬುವವರೇ ಅಪಹರಣಕ್ಕೊಳಗಾದ ವ್ಯಕ್ತಿ. ಇವರನ್ನು ಅಪಹರಿಸಿದ ಬೆಂಗಳೂರಿನ ನಿವಾಸಿಗಳಾದ ಪ್ರವೀಣಕುಮಾರ(28,) ಯಶವಂತ (20), ವಿನಾಯಕ (22) ಇದೀಗ ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯ ಅತಿಥಿಯಾಗಿದ್ದಾರೆ.
ಘಟನೆ ವಿವರ: ಲಿಂಗನಕೆರೆ ನಿವಾಸಿ ಮುನಿಯಪ್ಪ ಸೋಮವಾರ ಬೆಳಗಿನ ಜಾವ ವಾಕಿಂಗ್ ಹೋಗಿದ್ದರು. ಈ ವೇಳೆ ಇಂಡಿಕಾ ಕಾರಿನಲ್ಲಿ (ಕೆಎ-04 ಬಿ-8514) ಬಂಧ ದುಷ್ಕರ್ಮಿಗಳು ಮುನಿಯಪ್ಪನನ್ನು ಅಪಹರಿಸಿದ್ದಾರೆ. ಅಲ್ಲಿಂದ ಶಿವಮೊಗ್ಗ ಮಾರ್ಗವಾಗಿ ಹುಬ್ಬಳ್ಳಿಗೆ ಬರಲು ತಂಡ ಪ್ಲಾನ್ ಹಾಕಿದೆ.
ಮಗನೇ ಸೂತ್ರಧಾರ: ಮುನಿಯಪ್ಪನ ಅಣ್ಣನ ಮಗ ರಂಗೇಗೌಡ ಎಂಬುವವನೇ ಈ ಅಪಹರಣದ ಸೂತ್ರಧಾರ ಎಂಬುದು ಗಮನಾರ್ಹ ಸಂಗತಿ. ಮುನಿಯಪ್ಪನ ಆಸ್ತಿಗಾಗಿ, ಚೀಟಿ ವ್ಯವಹಾರಕ್ಕೆ ಸಂಬಂಧಿಸಿದಂತೆ ರಂಗೇಗೌಡ ಆಗಾಗ ಜಗಳ ಕಾಯುತ್ತಿದ್ದ. ಹೇಗಾದರೂ ಮಾಡಿ ಮುನಿಯಪ್ಪನಿಂದ ದುಡ್ಡು ಕಸಿದುಕೊಳ್ಳಬೇಕೆಂದು ತನ್ನ ಮಿತ್ರರೊಡಗೂಡಿ ಅಪಹರಿಸುವ ಪ್ಲಾನ್ ಹಾಕಿದ.
ತನ್ನ ಮಿತ್ರರಾದ ಪ್ರವೀಣಕುಮಾರ, ಯಶವಂತ, ವಿನಾಯಕ, ತಿಮ್ಮಣ್ಣ ಎಂಬುವವರ ಸಹಾಯದಿಂದ ಮುನಿಯಪ್ಪನನ್ನು ಸೋಮವಾರ ಅಪಹರಿಸಿದ್ದಾರೆ. ಮುನಿಯಪ್ಪನಿಗೆ ಒತ್ತಾಯ ಪೂರ್ವಕವಾಗಿ ನಿದ್ರೆ ಮಾತ್ರೆ ತಿನ್ನಿಸಿದ್ದಾರೆ. ಹುಬ್ಬಳ್ಳಿಗೆ ಬರುವ ಮಾರ್ಗ ಮಧ್ಯೆ ರಂಗೇಗೌಡ ಯಾರಿಗೂ ಸಂದೇಹ ಬಾರದಿರಲಿ ಎಂದು ಶಿವಮೊಗ್ಗದಲ್ಲಿ ಇಳಿದಿದ್ದಾನೆ. ಇನ್ನೊಬ್ಬ ಮಿತ್ರ ತಿಮ್ಮಣ್ಣ ಸಿದ್ದಾಪುರದಲ್ಲಿ ಇಳಿದುಕೊಂಡಿದ್ದಾನೆ.
ಶಿವಮೊಗ್ಗದಿಂದ ಮುನಿಯಪ್ಪನ ಮನೆಗೆ ಕರೆ ಮಾಡಿದ ರಂಗೇಗೌಡ ರು. 6 ಕೋಟಿ ನೀಡಬೇಕು, ಇಲ್ಲಿದಿದ್ದಲ್ಲಿ ಮುನಿಯಪ್ಪನ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆ. ಇದರಿಂದ ಭಯಭೀತರಾದ ಮುನಿಯಪ್ಪನ ಮನೆಯವರು ಬೆಂಗಳೂರಿನ ತಾವರಕೆರೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತಾವರಕೆರಿ ಪಿಎಸ್‌ಐ ಜಗದೀಶ ತನಿಖೆ ಕೈಗೊಂಡಿದ್ದಾರೆ.
ಏತನ್ಮಧ್ಯೆ ಅಪಹರಣಕಾರರು ಸಿದ್ದಾಪುರ-ಸಿರ್ಸಿ ಮಾರ್ಗವಾಗಿ ಹುಬ್ಬಳ್ಳಿಗೆ ತಲುಪಿದ್ದಾರೆ. ಈ ಕುರಿತು ಹುಬ್ಬಳ್ಳಿ ಶಹರ ಠಾಣೆಯ ಸಿಪಿಐ ಎಸ್. ಎಂ. ಸಂದಿಗವಾಡ ಅವರಿಗೆ ಖಚಿತ ಮಾಹಿತಿ ಸಿಕ್ಕಿದೆ. ಮಹಾನಗರ ಪೊಲೀಸ್ ಆಯುಕ್ತ ಬಿ.ಎ. ಪದ್ಮನಯನ ಮಾರ್ಗದರ್ಶನದ ಮೇರೆಗೆ ವಿಶೇಷ ತಂಡ ರಚಿಸಿದ ಸಂದಿಗವಾಡ, ಹುಬ್ಬಳ್ಳಿಯ ಪಿಂಟೋ ಸರ್ಕಲ್ ಬಳಿ ಅಪಹರಣಕಾರರನ್ನು ಸುತ್ತುವರಿದು ಬಂಧಿಸಿದ್ದಾರೆ.
ಬಂಧಿತರಿಂದ ಕಾರದ ಪುಡಿ, ಮಾಸ್ಕ್, ಹ್ಯಾಂಡ್‌ಗ್ಲೌಸ್, ನಿದ್ದೆ ಮಾತ್ರೆ, 5 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ವಿಚಾರಣೆಗೆ ಒಳಪಡಿಸಿದಾಗ ಅಪಹರಣದ ಸಂಗತಿ ಬಾಯಿಬಿಟ್ಟಿದ್ದಾರೆ. ಈ ಕುರಿತು ಶಹರ ಠಾಣೆಯ ಪೊಲೀಸರು ತಾವರಗೇರಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.
ಅಪಹರಣಕಾರರಿಂದ ಹಲ್ಲೆಗೊಳಗಾದ ಮುನಿಯಪ್ಪನ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಪ್ಪಿಸಿಕೊಂಡಿರುವ ಪ್ರಮುಖ ಆರೋಪಿ ರಂಗೇಗೌಡ ಹಾಗೂ ತಿಮ್ಮಣ್ಣನ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಕಾರ್ಯಾಚರಣೆಯಲ್ಲಿ ಪಿಎಸ್‌ಐ ಕಲಬಾವಿ, ಕೃಷ್ಣಾ ಕಟ್ಟಿಮನಿ, ಸುನೀಲ, ಶಿವರಾಜ, ಪಟ್ಟಣಶೆಟ್ಟಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement