ದೇಸಿ ಬೀಜಗಳ ರಕ್ಷಕ ಕೊಂಬಳಿ
ಧಾರವಾಡ: ಮಳೆ ನೀರು ಕೊಯ್ಲಿನಲ್ಲಿ ಸಾಧನೆಗೈದು 2005ರ 'ಕನ್ನಡಪ್ರಭ ವರ್ಷದ ವ್ಯಕ್ತಿ'ಯಾಗಿ ಹೊರಹೊಮ್ಮಿದ್ದ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಕಾಕೋಳ ಗ್ರಾಮದ ಚನ್ನಬಸಪ್ಪ ಕೊಂಬಳಿ, ಈಗ ಸಾವಯವ ಕೃಷಿ ಮೂಲಕ ದೇಸಿ ತಳಿ ಬೀಜಗಳ ಸಂರಕ್ಷಣೆಯಲ್ಲಿ ತೊಡಗಿಕೊಂಡಿದ್ದಾರೆ.
ದೇಸಿ ಕೃಷಿಕರ ಬಳಗದ ಅಧ್ಯಕ್ಷರಾದ ಅವರು, ಹೈಬ್ರಿಡ್ ತಳಿಗಳಿಗೆ ಮೊರೆ ಹೋದ ರೈತರಿಗೆ ಮತ್ತೆ ಜವಾರಿ ತಳಿಗಳ ಬೀಜಗಳನ್ನು ಪರಿಚಯಿಸುತ್ತಿದ್ದಾರೆ. ಸದ್ಯ 105 ಬತ್ತ, 24 ಹತ್ತಿ, 24 ಬದನೆ ತಳಿಗಳು, ಸೊಪ್ಪಿನ ಬೀಜ, ಬೇಳೆಕಾಳು ಬೀಜ, ಸಿರಿಧಾನ್ಯ, ತರಕಾರಿ ಬೀಜ ಹೀಗೆ ತರಹೇವಾರಿ ಕೃಷಿ ಉತ್ಪನ್ನಗಳ ಬೀಜಗಳನ್ನು ಸಾವಯವ ಕೃಷಿ ಮೂಲಕ ಸಂರಕ್ಷಿಸುತ್ತಿದ್ದಾರೆ.
ಇದರ ಜೊತೆಗೆ ಚನ್ನಬಸಪ್ಪ, ಜಿಲ್ಲೆಯಲ್ಲಿ ಸುಮಾರು 600 ಎಕರೆ ಅರಣ್ಯ ಪ್ರದೇಶ ನಿರ್ಮಿಸಿ ಪರಿಸರ ಕಾಳಜಿ ಮೆರೆದಿದ್ದಾರೆ. ಸಾವಯವ ಕೃಷಿಗೆ ಎರೆಹುಳು ಗೊಬ್ಬರ, ಪಂಚದ್ರವ್ಯ, ಜೀವಾಮೃತಗಳ ಬಳಕೆ ಸಹ ಮಾಡುವ ಇವರು, ನೈಸರ್ಗಿಕ ಕೀಟ ಹತೋಟಿ ಕ್ರಮ ಕೈಗೊಂಡಿದ್ದಾರೆ. ಅಲ್ಲದೇ, ವಿವಿಧ ಹಸಿರು ಕಸ (ಕಳೆ)ಗೆ ಉಪ್ಪು, ಬೆಲ್ಲ, ಕಸಾಯ ಹೀಗೆ ವಿವಿಧ ಬಗೆಯ ಸಾಮಗ್ರಿಗಳನ್ನು ಹಾಕಿ 21 ದಿನ ನೀರಿನಲ್ಲಿ ನೆನೆಯಿಟ್ಟು ದ್ರವರೂಪದ ಗೊಬ್ಬರಯುಕ್ತ ಔಷಧಿ ತಯಾರಿಸುತ್ತಾರೆ. ತಯಾರಿಸಿದ ದ್ರವ್ಯವನ್ನು ಹೊಲಕ್ಕೆ ಸಿಂಪಡಿಸುವ ಮೂಲಕ ಬೆಳೆಯನ್ನು ರೋಗಕ್ಕೆ ತುತ್ತಾಗದಂತೆ ನೋಡಿಕೊಳ್ಳುತ್ತಿರುವುದು ವಿಶೇಷ.
ಕೃಷಿ ಮೇಳದಲ್ಲಿ ಮಳಿಗೆ: ಪ್ರಸ್ತುತ ಧಾರವಾಡದ ಕೃಷಿ ವಿವಿ ಏರ್ಪಡಿಸಿದ್ದ ಕೃಷಿಮೇಳದಲ್ಲಿ ಮಳಿಗೆ ತೆರೆದು ದೇಸಿ ಬೀಜಗಳನ್ನು ರೈತರಿಗೆ ಪರಿಚಯಿಸುವ ಕಾರ್ಯದಲ್ಲಿ ಕೊಂಬಳಿ ನಿರತರಾಗಿದ್ದಾರೆ. ದೇಸಿ ತಳಿ ಬೀಜಗಳ ಜೊತೆಗೆ ಆಯಾ ಪ್ರಾದೇಶಿಕ ಬೀಜಗಳ ಸಂರಕ್ಷಣೆಯನ್ನು ಸಹ ಮಾಡುತ್ತಿದ್ದಾರೆ. ಸಾವಯವ ಕೃಷಿಯಿಂದ ಸಂರಕ್ಷಣೆ ಮಾಡಿದ ಬೀಜಗಳನ್ನು ರೈತರಿಗೆ ನೀಡಿ ಅವರಿಗೆ ಬೀಜ ಸಂರಕ್ಷಣೆ ಕುರಿತು ಮಾಹಿತಿ ನೀಡುತ್ತಿದ್ದಾರೆ. ಸಾವಯವ ಕೃಷಿ ಮಾಡ ಬಯಸುವ ಕೃಷಿಕರಿಗೆ ಸ್ವತಃ ಚನ್ನಬಸಪ್ಪ ಅವರು, ಸಾವಯವ ಕೃಷಿ ಘಟಕ ನಿರ್ಮಿಸಿಕೊಟ್ಟು ಉಚಿತ ಬೀಜ ವಿತರಣೆ ಮಾಡುವ ಮೂಲಕ ಸಾವಯವ ಕೃಷಿಗೆ ಪ್ರೋತ್ಸಾಹ ನೀಡುತ್ತಿರುವುದು ಸಾವಯವ ಕೃಷಿಕರ ಆಸಕ್ತಿ ಹೆಚ್ಚಿಸಿದೆ.
ಮಾನವನ ದುರಾಸೆಯಿಂದ ಗಾಳಿ, ನೀರು, ಮಣ್ಣು ಮಲಿನವಾಗುತ್ತಿದೆ. ಇಳುವರಿ ಪಡೆಯಲು ರಾಸಾಯನಿಕಗಳ ಬಳಕೆ ಹೆಚ್ಚಾಗ ತೊಡಗಿದೆ. ಇದರ ಪರಿಣಾಮದಿಂದ ಸಕ್ಕರೆ ಕಾಯಿಲೆ, ಹೃದಯ ಸಂಬಂಧಿ ರೋಗಗಳು ಅಂಟಿಕೊಳ್ಳುತ್ತಿವೆ. ದೇಸಿ ಜವಾರಿ ತಳಿಗಳಲ್ಲಿ ಔಷಧೀಯ ಗುಣಗಳಿದ್ದು, ಪೌಷ್ಟಿಕಾಂಶ ಹೆಚ್ಚಿರುತ್ತದೆ. ರೋಗ ನಿರೋಧಕಗಳ ಶಕ್ತಿ ಹೆಚ್ಚಾಗುತ್ತವೆ ಎನ್ನುತ್ತಾರೆ ಚನ್ನಬಸಪ್ಪ ಕೊಂಬಳಿ. ರೈತರ, ಪರಿಸರ, ದೇಸಿ ತಳಿ ಬೀಜಗಳ ಕಾಳಜಿ ಹಾಗೂ ಸಾವಯವ ಕೃಷಿ ಅಳವಡಿಕೆಯ ಕ್ರಮದ ಫಲವಾಗಿ ವಿವಿಧ ಸಂಘ ಸಂಸ್ಥೆ, 2004ರಲ್ಲಿ ಕೃಷಿ ಮಾಧ್ಯಮ ಕೇಂದ್ರದ ರಾಜ್ಯಮಟ್ಟದ ವಿಶೇಷ ಪ್ರಶಸ್ತಿ, 2006ರಲ್ಲಿ ರಾಜ್ಯ ಸರ್ಕಾರದ ಕೃಷಿ ಪಂಡಿತ ಪ್ರಶಸ್ತಿ, 2007ರಲ್ಲಿ ಶ್ರೀ ಕೃಷ್ಣದೇವರಾಯ ಪ್ರಶಸ್ತಿ, 2008ರಲ್ಲಿ ಸೃಷ್ಟಿ ಸಮ್ಮಾನ ರಾಷ್ಟ್ರೀಯ ಪ್ರಶಸ್ತಿ ಹಾಗೂ 2010ರಲ್ಲಿ ರೈತ ವಿಜ್ಞಾನಿ ರಾಷ್ಟ್ರೀಯ ಪ್ರಶಸ್ತಿಗಳು ಚನ್ನಬಸಪ್ಪನಿಗೆ ಲಭಿಸಿವೆ.
ಸಾವಯವ ಕೃಷಿ ಹಾಗೂ ದೇಸಿ ತಳಿ ಬೀಜಗಳ ಹೆಚ್ಚಿನ ಮಾಹಿತಿಗಾಗಿ ಮೊ 98458-90411 ಸಂಪರ್ಕಿಸಬಹುದು.
-ಕಲ್ಮೇಶ ಪಟ್ಟಣದವರ
ಸಿರಿಧಾನ್ಯಗಳಿಂದ ಆಹಾರ ಪದಾರ್ಥ
ಸಿರಧಾನ್ಯಗಳಿಂದ ಹೋಳಿಗೆ, ಕರದಂಟು, ಜ್ಯೂಸ್, ಉಂಡೆ, ಶಾವಿಗೆ, ಚಕ್ಕಲಿ, ಪಾನಿಪುರಿ, ಅವಲಕ್ಕಿ, ಕೀರು, ಕಡಬು, ನೂಡಲ್ಸ್ ಹೀಗೆ ತರಹೇವಾರಿ ಆಹಾರ ಪದಾರ್ಥಗಳನ್ನು ತಯಾರಿಸಬಹುದಾಗಿದೆ. ಸಾಕಷ್ಟು ಜನರಿಗೆ ಈ ಬಗ್ಗೆ ತಿಳಿದಿಲ್ಲ. ಇದನ್ನು ತಿಳಿಪಡಿಸುವ ನಿಟ್ಟಿನಲ್ಲಿ ತಯಾರಿಕೆ ವಿಧಾನಗಳ ಪರಿಚಯಿಸುವ ಪುಸ್ತಕವನ್ನು ಮೇಳದಲ್ಲಿ ಮಾರಾಟ ಮಾಡಲಾಗುತ್ತಿದೆ. ಹೈಬ್ರಿಡ್ ತಳಿಯಿಂದ ಬೆಳೆದ ಪದಾರ್ಥಗಳಿಂದ ಆಹಾರ ಪದಾರ್ಥಗಳು ರುಚಿಕರವಲ್ಲ. ಆದರೆ, ಜವಾರಿ ತಳಿಯ ಸಿರಿಧಾನ್ಯಗಳಿಂದ ತಯಾರಿಸಿದ ಪದಾರ್ಥಗಳು ನಾಲಿಗೆಗೆ ರುಚಿ ನೀಡುವುದಲ್ಲದೆ, ದೇಹಕ್ಕೂ ಪೌಷ್ಟಿಕಾಂಶ ನೀಡುತ್ತವೆ.
-ಚನ್ನಬಸಪ್ಪ ಕೊಂಬಳಿ ಅಧ್ಯಕ್ಷರು, ದೇಸಿ ಕೃಷಿಕರ ಬಳಗ