ಪೌರಕಾರ್ಮಿಕರ ದಿನಾಚರಣೆ: ಆರೋಗ್ಯ ಶಿಬಿರ
ಹುಬ್ಬಳ್ಳಿ: ಪೌರಕಾರ್ಮಿಕರ ದಿನಾಚರಣೆ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯಿಂದ ಪೌರಕಾರ್ಮಿಕರಿಗೆ ಉಚಿತ ಆರೋಗ್ಯ ಶಿಬಿರ ಹಾಗೂ ಕಣ್ಣಿನ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ನಗರದ ಚಿಟಗುಪ್ಪಿ ಆಸ್ಪತ್ರೆ ಮತ್ತು ಧಾರವಾಡದ ಪಾಲಿಕೆಯ ಆಸ್ಪತ್ರೆಯಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.
ಹುಬ್ಬಳ್ಳಿಯಲ್ಲಿ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ನೇತ್ರ ವೈದ್ಯ ಡಾ. ಎಂ.ಎಂ. ಜೋಶಿ, ಪೌರಕಾರ್ಮಿಕರು ತಮ್ಮ ಆರೋಗ್ಯ್ನ ಕಾಪಾಡಿಕೊಂಡು ಉತ್ತಮ ಜೀವನ ನಿರ್ವಹಣೆ ಮಾಡುವಂತೆ ಸಲಹೆ ನೀಡಿದರು. ಈ ಆರೋಗ್ಯ ಶಿಬಿರದಲ್ಲಿ 157 ಪೌರಕಾರ್ಮಿಕರು ಭಾಗವಹಿಸಿದ್ದರು. ನಗರದ ಇಂಡಿಯನ್ ರೆಡ್‌ಕ್ರಾಸ್ ಸಂಸ್ಥೆ ಶಾಖೆಯ ಉಪಾಧ್ಯಕ್ಷ ಡಾ. ತಮ್ಮಗೊಂಡರ, ಸದಸ್ಯರಾದ ಡಾ. ಗ್ರಾಮಪುರೋಹಿತ, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಟಗರಗುಂಟಿ, ಪದಾಧಿಕಾರಿಗಳು, ಪಾಲಿಕೆಯ ಆರೋಗ್ಯ ಅಧಿಕಾರಿ ಡಾ. ಬಿರಾದಾರ ಮತ್ತು ಪಾಲಿಕೆಯ ವಿಶೇಷ ಅಧಿಕಾರಿ ಎಸ್.ಎಚ್. ನರೇಗಲ್ ಭಾಗವಹಿಸಿದ್ದರು.
ಈ ಉಚಿತ ಆರೋಗ್ಯ ಹಾಗೂ ಕಣ್ಣಿನ ತಪಾಸಣೆ ಶಿಬಿರದಲ್ಲಿ ಪೌರಕಾರ್ಮಿಕರ ಸಾಮಾನ್ಯ ಆರೋಗ್ಯ ತಪಾಸಣೆ, ರಕ್ತ ತಪಾಸಣೆ, ಸಕ್ಕರೆ ಕಾಯಿಲೆ ತಪಾಸಣೆ, ಕಣ್ಣು ತಪಾಸಣ್ನೆ ನಡೆಸಲಾಯಿತು.