ದೀನದಯಾಳರ ಕನಸು ಮೋದಿಯಿಂದ ನನಸು
ಹುಬ್ಬಳ್ಳಿ: ಪಂಡಿತ ದೀನದಯಾಳ ಉಪಾಧ್ಯಾಯ ಅವರು ರಾಷ್ಟ್ರದ ಬಗ್ಗೆ ಕಂಡಿದ್ದ ಪರಿಕಲ್ಪನೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಂದ ಮಾತ್ರ ಈಡೇರಲು ಸಾಧ್ಯ ಎಂದು ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಬುಧವಾರ ಆಯೋಜಿಸಿದ್ದ ಪಂಡಿತ ದೀನದಯಾಳ ಉಪಾಧ್ಯಾಯ ಅವರ ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿ ಬಗ್ಗೆ ಪಂ. ದೀನದಯಾಳ ಉಪಾಧ್ಯಾಯ ಅನೇಕ ಕನಸು ಕಂಡಿದ್ದರು ಎಂದರು.
ಶಿಕ್ಷಣ ತಜ್ಞ, ಅಪ್ರತಿಮ ರಾಷ್ಟ್ರಭಕ್ತ, ಪ್ರಾಮಾಣಿಕ ರಾಜಕಾರಣಿಯಾಗಿದ್ದ ಪಂ. ದೀನದಯಾಳ ಅವರು ಹಲವಾರು ಸಂಕಷ್ಟ ಪರಿಸ್ಥಿತಿಗಳ ಮಧ್ಯೆಯೂ ಜನಸಂಘ ಕಟ್ಟಿ, ಬೆಳೆಸಿದರು. ರಾಷ್ಟ್ರವು ಪ್ರಾಮಾಣಿಕ ಹಾಗೂ ದೇಶಭಕ್ತ ರಾಜಕಾರಣಿಗಳ ಹಿಡಿತದಲ್ಲಿರಬೇಕೆಂಬ ಆಶಯ ಹೊಂದಿದ್ದರು. ಯುವಕರು ರಾಜಕಾರಣಕ್ಕೆ ಬರಬೇಕೆಂಬ ಹಂಬಲ ಅವರದ್ದಾಗಿತ್ತು ಎಂದರು.
ವಿದೇಶ ಸೈನಿಕರ ಹಾಗೂ ಭಯೋತ್ಪಾದಕರ ಅತಿಕ್ರಮಣಗಳು ಹೆಚ್ಚುತ್ತಿದ್ದರೂ ಯುಪಿಎ ಸರ್ಕಾರ ಕೈಕಟ್ಟಿ ಕುಳಿತಿದೆ. ರಾಷ್ಟ್ರ ರಕ್ಷಣೆಗೆ ಮುಂದಾಗದ ಕಾಂಗ್ರೆಸ್‌ಗೆ ಮುಂದಿನ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ. ಆರ್ಥಿಕ ಸ್ಥಿತಿ ಕುಸಿಯುತ್ತಿದ್ದರೂ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕ ಅರವಿಂದ ಬೆಲ್ಲದ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಮಾತನಾಡಿದರು. ಮಹಾನಗರ ಜಿಲ್ಲಾಧ್ಯಕ್ಷ ಲಿಂಗರಾಜ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಹಿರಿಯ ಕಾರ್ಯಕರ್ತರಾದ ಆರ್.ಪಿ. ನವಲೆ, ಗುರು ಸಾಲಿಮಠ, ಕಲ್ಲಪ್ಪ ಹಳ್ಳೂರ, ಜಿ.ಎಸ್. ಉಬಲಿ, ಎಂ.ಎಸ್. ಕುಲಕರ್ಣಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ನಾಗುಸಾ ಕಲಬುರ್ಗಿ, ಸತೀಶ ಶೇಜವಾಡಕರ ಮತ್ತಿತರರಿದ್ದರು. ಶಂಕರ ಛಬ್ಬಿ ಸ್ವಾಗತಿಸಿದರು. ರಂಗಾ ಬದ್ದಿ ನಿರೂಪಿಸಿದರು.
ವರಿಷ್ಠರು ಸ್ಪಷ್ಟ ನಿಲುವು ತಾಳಲಿ
ಸಚಿವ ಸಂತೋಷ್ ಲಾಡ್ ಅವರು ಅಕ್ರಮ ಗಣಿಗಾರಿಕೆ ನಡೆಸಿದ ಬಗ್ಗೆ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರ ವರದಿಯಲ್ಲಿಯೇ ಸ್ಪಷ್ಟಪಡಿಸಿದೆ. ಆದರೆ, ಗಣಿ ಗುತ್ತಿಗೆ ಪಡೆದ ಕಂಪನಿ ಮತ್ತು ಅದಿರು ಸಾಗಣೆ ಮಾಡಿದ ಕಂಪನಿಗಳೇ ಬೇರೆ ಎಂದು ಮುಖ್ಯಮಂತ್ರಿಗಳು ಲಾಡ್ ಅವರನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಹಿಂದೆ ಬಳ್ಳಾರಿವರೆಗೆ ಪಾದಯಾತ್ರೆ ಸಂದರ್ಭ ತಮ್ಮ ಕಾಲುಗಳಿಗೆ ಮಸಾಜ್ ಮಾಡಿಸಿಕೊಂಡಿದ್ದ ಸಿದ್ದರಾಮಯ್ಯ ಲಾಡ್ ಅವರನ್ನು ಸಮರ್ಥನೆ ಮಾಡಿಕೊಳ್ಳುವುದು ನೋಡಿದರೆ ಈಗ ತಲೆಗೆ ಮಸಾಜ್ ಮಾಡಿಸಿಕೊಳ್ಳುವುದು ಒಳಿತು.
- ಡಿ.ವಿ. ಸದಾನಂದಗೌಡ