ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

28, 29ರಂದು ಕುಂದಗೋಳದಲ್ಲಿ ಸಂಗೀತೋತ್ಸವ

Lingaraj Badiger
Updated On : 27 Sept 2013, 10:58 am

ಹುಬ್ಬಳ್ಳಿ: ಸಂಗೀತ ಸಾಮ್ರಾಟ್ ದಿ. ಸವಾಯಿ ಗಂಧರ್ವರ 61ನೇ ಪುಣ್ಯತಿಥಿ ಅಂಗವಾಗಿ ಕುಂದಗೋಳದ ಸವಾಯಿ ಗಂಧರ್ವ ಸ್ಮಾರಕ ಭವನದಲ್ಲಿ ಸೆ. 28 ಹಾಗೂ 29ರಂದು ಸಂಗೀತೋತ್ಸವ ಹಮ್ಮಿಕೊಳ್ಳಲಾಗಿದೆ.
ನಗರದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದ ದಿ. ಸವಾಯಿ ಗಂಧರ್ವ ಸ್ಮಾರಕ ವಿಶ್ವಸ್ಥ ಸಂಸ್ಥೆಯ ಕಾರ್ಯಕಾರಿ ಮಂಡಳಿ ಸದಸ್ಯ ಎ.ಎಂ. ಕಟಗಿ, ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾಗಿ ತಿಳಿಸಿದರು.
ಸೆ. 28ರಂದು ಸಂಜೆ 7ಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕುಂದಗೋಳ ಪಂಚಗ್ರಹ ಹಿರೇಮಠದ ಶ್ರೀ ಶಿತಿಕಂಠೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಚಿವ ಸಂತೋಷ ಲಾಡ್, ಸಂಸದ ಪ್ರಹ್ಲಾದ ಜೋಶಿ, ಶಾಸಕ ಸಿ.ಎಸ್. ಶಿವಳ್ಳಿ, ಮಾಜಿ ಶಾಸಕರಾದ ಎಸ್.ಐ. ಚಿಕ್ಕನಗೌಡರ, ಎಂ.ಎಸ್. ಅಕ್ಕಿ, ಹುಡಾ ಮಾಜಿ ಅಧ್ಯಕ್ಷ ರಾಜಾ ದೇಸಾಯಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಡಿ. ಹಿರೇಗೌಡರ ಹಾಗೂ ಕರ್ನಾಟಕ ಬ್ಯಾಂಕ್ ಹುಬ್ಬಳ್ಳಿ ಪ್ರಾದೇಶಿಕ ಕಚೇರಿ ಮುಖ್ಯ ವ್ಯವಸ್ಥಾಪಕ ಸಿ.ಜೆ. ಬಸ್ತಿ ಅತಿಥಿಗಳಾಗಿ ಪಾಲ್ಗೊಳ್ಳುವರು. ಐ.ಎಂ. ನಾವಳ್ಳಿ ಅಧ್ಯಕ್ಷತೆ ವಹಿಸುವರು. ಮುಂಬಯಿನ ಸಂಗೀತಗಾರ ಪಂ. ಅಚ್ಯುತ್ ಅಭ್ಯಂಕರ್ ಅವರಿಗೆ ಪುರಸ್ಕಾರ ನೀಡಲಾಗುವುದು, ಧಾರವಾಡದ ಗಾಯಕ ಪಂ. ಎಂ. ವೆಂಕಟೇಶಕುಮಾರ, ಮುಂಬಯಿ ತಬಲಾ ವಾದಕ ಪಂ. ಸದಾನಂದ ನಾಯಂಪಳ್ಳಿ, ಪುಣೆ ಗಾಯಕ ಪಂ. ಅನಂತ ತೇರದಾಳರನ್ನು ಸನ್ಮಾನಿಸಲಾಗುವುದು. ಅಹೋರಾತ್ರಿ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ. ಪಂ. ನಾಗನಾಥ ಒಡೆಯರ ಸೇರಿ 15ಕ್ಕೂ ಹೆಚ್ಚು ಗಾಯಕರು, ತಬಲಾ,  ಹಾಮೋನಿಯಂ ವಾದಕರು ಪಾಲ್ಗೊಳ್ಳಲಿದ್ದಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement