29ರಂದು ಅಹೋರಾತ್ರಿ ಸಂಗೀತ
ಹುಬ್ಬಳ್ಳಿ: ದಿ. ಸವಾಯಿ ಗಂಧರ್ವರ 61ನೇ ಪುಣ್ಯತಿಥಿ ಅಂಗವಾಗಿ ಕುಂದಗೋಳದಲ್ಲಿ ಸೆ. 29ರಂದು ಅಹೋರಾತ್ರಿ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕುಂದಗೋಳದ ನಾಡಗಿರ ವಾಡೆಯಲ್ಲಿ ಅಂದು ಸಂಜೆ 6ಕ್ಕೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ ಎಂದು ಶ್ರೀಮಂತ ನಾನಾಸಾಹೇಬ ನಾಡಗೀರ ಸ್ಮೃತಿ ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ. ಗೋ.ಹ. ನರೇಗಲ್ ನಗರದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಪತ್ರಕರ್ತ ಕೆ. ಶಿವಸುಬ್ರಹ್ಮಣ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಂಸದ ಪ್ರಹ್ಲಾದ ಜೋಶಿ, ಶಾಸಕರಾದ ಅರವಿಂದ ಬೆಲ್ಲದ, ಸಿ.ಎಸ್. ಶಿವಳ್ಳಿ, ಮಾಜಿ ಸಚಿವ ಎಸ್. ಸುರೇಶಕುಮಾರ, ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ ಕಾರ್ಣಿಕ್, ರಾಜಾ ದೇಸಾಯಿ ಅತಿಥಿಗಳಾಗಿ ಪಾಲ್ಗೊಳ್ಳುವರು. ಕೊಳಲು ವಾದಕ ಪ್ರೊ. ಎಸ್. ಶಂಭುಭಟ್ ಕಡತೋಕ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.
ಪ್ರತಿಮೆಗೆ ಪೂಜೆ
ಇದಕ್ಕೂ ಮೊದಲು ಸೆ. 28ರಂದು ಕುಂದಗೋಳ ನಾಡಗೀರ ವಾಡೆಯಲ್ಲಿರುವ ದಿ. ಸವಾಯಿಗಂಧರ್ವರ ಪ್ರತಿಮೆಗೆ ಪೂಜೆ ಸಲ್ಲಿಸಲಾಗುವುದು. ಸೆ. 29ರ ಅಹೋರಾತ್ರಿ ಸಂಗೀತ ಕಾರ್ಯಕ್ರಮದಲ್ಲಿ ಕೊಲ್ಲಾಪುರದ ಭಾರತಿ ವೈಶಂಪಾಯನ್, ಹೊನ್ನಾವರದ ಡಾ. ಅಶೋಕ ಹುಗ್ಗಣ್ಣವರ, ಹುಬ್ಬಳ್ಳಿಯ ಪಂ. ಕೃಷ್ಣೇಂದ್ರ ವಾಡಿಕರ, ಧಾರವಾಡದ ನೀಲಮ್ಮ ಕೊಡ್ಲಿ, ಸಂಶಿಯ ಮಲ್ಲಿಕಾರ್ಜುನ, ಬೀದರನ ಶಿವಾಜಿರಾವ್ ಸೇರಿದಂತೆ ಹಲವಾರು ಗಾಯಕರು, ವಾಯಲಿನ್, ಕೊಳಲು, ತಬಲಾ ಹಾಗೂ ಹಾರ್ಮೋನಿಯಂ ಕಲಾವಿದರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. ನಾಡಗೀರ ವಾಡೆ ಹಾಗೂ ಸಂಗೀತ ಪರಿಸರದ ಕುರಿತಂತೆ ಸಂಶೋಧನೆಗೆ ಪ್ರತಿಷ್ಠಾನದ ವತಿಯಿಂದ ಒತ್ತು ನೀಡಲಾಗುವುದು. ಸಂಗೀತ ಪ್ರೇಮಿಗಳ ಸಹಯೋಗಿತ್ವದಲ್ಲಿ ಪ್ರತಿ 3 ಅಥವಾ 4 ತಿಂಗಳಿಗೊಮ್ಮೆ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಪ್ರತಿಷ್ಠಾನದಲ್ಲಿ ನಡೆಯುವ ಸಂಗೀತ ಕಾರ್ಯಕ್ರಮಗಳ ಪುಸ್ತಕ ಪ್ರಕಟಿಸುವುದು ಸೇರಿದಂತೆ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಕುಂದಗೋಳ ಪಟ್ಟಣದಲ್ಲಿ ಜನೋಪಯೋಗಿ ಕಾರ್ಯಗಳಿಗೆ ನೂರಾರು ಎಕರೆ ಭೂಮಿ ದಾನ ನೀಡಿರುವ ಶ್ರೀಮಂತ ನಾನಾಸಾಹೇಬ ನಾಡಗೀರ ಹೆಸರಿನ ಪ್ರವೇಶ ದ್ವಾರ ನಿರ್ಮಿಸಲು, ಕುಂದಗೋಳ ಪಟ್ಟಣವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಲು ಹಾಗೂ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶೀಘ್ರದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು. ಪ್ರತಿಷ್ಠಾನದ ಹನುಮಂತಗೌಡ ಪಾಟೀಲ ಉಪಸ್ಥಿತರಿದ್ದರು.