ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕನ್ನಡದ ಪ್ರಪ್ರಥಮ ಮಾರ್ಕ್ಸ್‌ವಾದ ಕೃತಿ ರಚನೆ

Lingaraj Badiger
Updated On : 27 Sept 2013, 10:46 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಸೆ. 26
ಮಾರ್ಕ್ಸ್‌ವಾದವನ್ನು ಅಧ್ಯಯನ ಮಾಡಬೇಕೆಂಬ ಕನ್ನಡ ಓದುಗರಿಗೆ ರಾಜ್ಯದಲ್ಲಿ ಈವರೆಗೂ ಕನ್ನಡ ಕೃತಿ ಲಭ್ಯವಿರಲಿಲ್ಲ. ಆದರೀಗ ಆ ಕೊರಗು ದೂರವಾಗಿದೆ.
ಹೌದು...ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಮಾರ್ಕ್ಸ್‌ವಾದ ಅಧ್ಯಯನ ಮಾಡುವವರಿಗೆ ಅನುಕೂಲವಾಗುವ ನಿಟ್ಟಿನಲ್ಲೀಗ ಕನ್ನಡ ಕೃತಿ ಸಿದ್ಧವಾಗಿದೆ.
ಕಾರ್ಮಿಕರು, ದಿನಗೂಲಿ ನೌಕರರು, ಶ್ರಮಜೀವಿಗಳ ಹೋರಾಟಕ್ಕೆ ಬೆನ್ನೆಲುಬಾಗಿ ನಿಂತಿರುವ ಡಾ.ಕೆ.ಎಸ್. ಶರ್ಮಾ ಇಂಥದೊಂದು ಅಪರೂಪದ ಕೃತಿಯನ್ನು ರಚಿಸಿದ್ದಾರೆ. "ರಾಜ್ಯವ್ಯವಸ್ಥೆ: ಮಾರ್ಕ್ಸ್‌ವಾದಿ ದೃಷ್ಟಿಕೋನ" ಎಂಬ ಕೃತಿಯ ಮೂಲಕ ಮಾರ್ಕ್ಸ್‌ವಾದದ ಆಳ ಅಗಲವನ್ನು ನಿರೂಪಿಸಿದ್ದಾರೆ. ಮಾರ್ಕ್ಸ್‌ವಾದದ ಕುರಿತಾಗಿ ಶಾಲಾ-ಕಾಲೇಜು ಪಠ್ಯ ಪುಸ್ತಕಗಳಲ್ಲಿ ಮಾಹಿತಿ ಇದ್ದರೂ ಸಂಪೂರ್ಣ ಮಾಹಿತಿ ಲಭ್ಯವಿರಲಿಲ್ಲ.
ಅದರಲ್ಲಿಯೂ ಕನ್ನಡ ಭಾಷೆಯಲ್ಲಿ ಮಾರ್ಕ್ಸ್‌ವಾದದ ಸಂಪೂರ್ಣ ಪರಿಕಲ್ಪನೆ ನೀಡುವ ಪುಸ್ತಕ ಇದ್ದಿರಲಿಲ್ಲ. ಮಾರ್ಕ್ಸ್‌ವಾದ ಎಂಬ ಪದ ಕೇಳಿದ್ದರೂ ಇದರ ಹೂರಣ ಸಾಮಾನ್ಯರಿಗೆ ತಿಳಿಯದಾಗಿತ್ತು. ಇಂಗ್ಲಿಷ್ ಭಾಷೆಯ ಬಲ್ಲವರು ಮಾತ್ರ ಮಾರ್ಕ್ಸ್‌ವಾದ ಸಂಬಂಧಿತ ಪುಸ್ತಕಗಳನ್ನು ಓದಿ ತಿಳಿಯುವಂತಾಗಿತ್ತು. ಆದರೆ, ಈಗ ಆ ಕೊರಗು ದೂರಾಗಿದೆ. ಮಾರ್ಕ್ಸ್‌ವಾದ, ಮಾರ್ಕ್ಸ್‌ವಾದಿಗಳ ಕುರಿತಾದ ವಿಶ್ಲೇಷಣೆಯುಳ್ಳ 600 ಪುಟಗಳ ಕೃತಿಯನ್ನು ಶರ್ಮಾ ಸಿದ್ಧಗೊಳಿಸಿದ್ದಾರೆ.
ಕೃತಿಯಲ್ಲಿ ಏನಿದೆ?: ಮಾರ್ಕ್ಸ್‌ವಾದದ ಪ್ರವರ್ತಕರಾದ ಮಾರ್ಕ್ಸ್, ಎಂಗೆಲ್ಸ್ ತಾವು ಪ್ರತಿಪಾದಿಸಿದ ತತ್ವಶಾಸ್ತ್ರದ ಸೂತ್ರಗಳನ್ನು ಆರ್ಥಿಕ ರಚನೆ, ಬುನಾದಿಗೆ ಅನುಗುಣವಾಗಿ ರೂಪಿಸಿದ್ದರ ಮಾಹಿತಿಯಿಂದ ಆರಂಭಗೊಂಡು, ಇವರು ಫ್ರಾನ್ಸ್, ಜರ್ಮನಿ ಹಾಗೂ ಇಂಗ್ಲೆಂಡ್‌ಗಳ ಕುರಿತು ಮಾಡಿದ ರಾಜಕೀಯ ಅಧ್ಯಯನಗಳು ಕೃತಿಯಲ್ಲಿ ಅಡಕವಾಗಿದೆ. ಅದರಲ್ಲಿಯೂ ಪ್ರಮುಖವಾಗಿ ಮಾರ್ಕ್ಸ್‌ವಾದಿ ರಾಜ್ಯಶಾಸ್ತ್ರದ ತತ್ತ್ವಶಾಸ್ತ್ರವನ್ನು ಭಾರತೀಯ ಸನ್ನಿವೇಶಗಳಿಗೆ ಅನ್ವಯಿಸಿ, ಅದನ್ನು ದೇಶಿ ಭಾಷೆಯಾದ ಕನ್ನಡದಲ್ಲಿ ಸಮರ್ಪಿಸಿದ್ದಾರೆ. ಇದು ಸ್ಥಳೀಯ ಮಾರ್ಕ್ಸ್‌ವಾದಿ ಅನುಷ್ಠಾನಪರರಿಗೆ ಹಾಗೂ ಓದುಗರಿಗೆ ಪೂರಕವಾಗಿದೆ.
ಲೆನಿನ್, ಸ್ಟಾಲಿನ್, ಟ್ರಾಟಸ್ಕಿ, ಮಾವೋ ಸೇರಿದಂತೆ ಕ್ಲಾಸಿಕಲ್ ಮಾರ್ಕ್ಸ್‌ವಾದಿಗಳಾದ ಆಲ್‌ಥುಸರ್, ಗ್ರಾಮಸಿ, ಮರ್ಕ್ಯೂಸ್, ಲುಕಾಷ್, ಮೆಂಡಲ್, ಅವರ ಅಧ್ಯಯನ ಕೃತಿಯಲ್ಲಿದೆ. ಸಾಲದ್ದಕ್ಕೆ ಭಾರತೀಯ ಅಕಾಡೆಮಿ ಮಾರ್ಕ್ಸ್‌ವಾದಿಗಳ ವಿಚಾರವೂ ಇದರಲ್ಲಿದೆ. ಪ್ರಮುಖವಾಗಿ ಆರ್ಥಿಕ ವ್ಯವಸ್ಥೆ ಸಬಲತೆ, ಅದರಲ್ಲಿಯೂ ಭಾರತೀಯ ಅರ್ಥ ವ್ಯವಸ್ಥೆ ಸಬಲಗೊಳ್ಳುವ ಸಂಗತಿಯೊಂದಿಗೆ ಸಮಗ್ರತೆಯನ್ನು ಹೊಂದಿರುವ ಕೃತಿ ಇದಾಗಿದೆ.
ಮಾರ್ಕ್ಸ್‌ವಾದದ ಕುರಿತಾಗಿ ಕನ್ನಡದಲ್ಲಿ ಪ್ರಕಟವಾದ ಮೊದಲ ಕೃತಿ ಇದಾಗಿದೆಯಾದರೂ ದೇಶದ ಇನ್ನಿತರ ಪ್ರಾದೇಶಿಕ ಭಾಷೆಯಲ್ಲಿಯೂ ಮಾರ್ಕ್ಸ್‌ವಾದದ ಕುರಿತಾದ ಬೆರಳೆಣಿಕೆಯಷ್ಟು ಪುಸ್ತಕವಿದೆ. ಈ ನಿಟ್ಟಿನಲ್ಲಿ ಶರ್ಮಾ ಅವರದ್ದು ವಿಶಿಷ್ಟ ಪ್ರಯೋಗ ಎಂದೆನ್ನಬಹುದು.

30ರಂದು ಬಿಡುಗಡೆ
ಕೇವಲ 13 ಸದಸ್ಯರೊಡಗೂಡಿ ಶೋಷಿತರ ಪರ ಹೋರಾಟ ಆರಂಭಿಸಿದ್ದ ಶರ್ಮಾ ರಾಜ್ಯದಲ್ಲಿಂದು ನಾನಾ ಸಂಘಟನೆಗಳಿಗೆ ಮುಂಚೂಣಿಯಲ್ಲಿದ್ದು ಒಂದು ಲಕ್ಷಕ್ಕೂ ಅಧಿಕ ಹೋರಾಟಗಾರ ಸದಸ್ಯರ ಬಳಗವನ್ನು ಹೊಂದಿದ್ದಾರೆ. ಕಳೆದ 3 ದಶಕಗಳಿಂದ ಹೋರಾಟ ನಡೆಸುತ್ತಿರುವ ಶರ್ಮಾ ಸೆ. 30ಕ್ಕೆ 80ನೇ ವರ್ಷಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಈ ದಿನದಂದು ಕನ್ನಡದ ಪ್ರಪ್ರಥಮ ಮಾರ್ಕ್ಸ್‌ವಾದ ಕೃತಿ ಹುಬ್ಬಳ್ಳಿಯ ವಿಶ್ವ ಶ್ರಮ ಚೇತನದ ಆವರಣದಲ್ಲಿ ಸಂಜೆ 4ಕ್ಕೆ ಬಿಡುಗಡೆಗೊಳ್ಳಲಿದೆ. ರಾಜ್ಯಶಾಸ್ತ್ರಜ್ಞ ಡಾ. ಕೆ. ರಾಘವೇಂದ್ರ ರಾವ್, ಮಾಜಿ ಶಿಕ್ಷಣ ಸಚಿವ ಬಿ. ಸುಬ್ಬಯ್ಯ ಶೆಟ್ಟಿ, ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಮೋಹನ ಕಾತರಕಿ, ಕ್ರಾಂತಿಕಾರಿ ಕವಿ ನಿಖಿಲೇಶ್ವರ, ಅರ್ಥಶಾಸ್ತ್ರಜ್ಞ ಡಾ. ವಿ. ಶಿವ ಪ್ರಕಾಶಮ್ ಪಾಲ್ಗೊಳ್ಳುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement