ಜಗತ್ತಿಗೆ ಕನ್ನಡ ರಂಗಭೂಮಿ ಪರಿಚಯಿಸಿದ ತ್ರಿರತ್ನಗಳು
ಧಾರವಾಡ: ಶ್ರೀರಂಗರು, ಶಂಬಾ ಜೋಶಿ ಹಾಗೂ ಬೇಂದ್ರೆ ಜಗತ್ತಿಗೆ ಭಾರತದ ಮತ್ತು ಕನ್ನಡ ರಂಗಭೂಮಿಯ ಆಯಾಮಗಳನ್ನು ಪರಿಚಯಿಸಿದ ಮೂರು ರತ್ನಗಳು ಎಂದು ಡಾ ದ.ರಾ. ಬೇಂದ್ರೆ ರಾಷ್ಟ್ರೀಯ ಟ್ರಸ್ಟ್‌ನ ಅಧ್ಯಕ್ಷ ಡಾ ಶ್ಯಾಮಸುಂದರ ಬಿದರಕುಂದಿ ಹೇಳಿದರು.
ರಂಗಾಯಣ ಹಾಗೂ ಸುಲೋಚನಾ ಕೋಟೂರ ಸ್ಮಾರಕ ಸಮಿತಿ ಶ್ರೀರಂಗರ 110ನೇ ಜನ್ಮದಿನದ ಅಂಗವಾಗಿ ಸಾಂಸ್ಕೃತಿಕ ಸಮುಚ್ಚಯದಡಿ ಗುರುವಾರ ಹಮ್ಮಿಕೊಂಡಿದ್ದ ಉಪನ್ಯಾಸ ಹಾಗೂ 'ಕೇಳು ಜನಮೇಜಯ' ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ರಂಗಭೂಮಿಗೆ ಸಾಕಷ್ಟು ಕೊಡುಗೆ ನೀಡಿದ ಶ್ರೀರಂಗರನ್ನು ಕರ್ನಾಟಕವೇ ನೆನಪಿಸಿಕೊಳ್ಳಬೇಕಿತ್ತು. ಈ ಕೆಲಸವನ್ನು ಸುಲೋಚನಾ ಕೋಟೂರ ಮಾಡಿದ್ದರು. ಭಾರತದಲ್ಲಿ ರಂಗ ರೆಪರ್ಟರಿಯ ಮೂಲ ಕಲ್ಪನೆ ಹುಟ್ಟು ಹಾಕಿದವರು ಶ್ರೀರಂಗರು. ಅವರು 40 ಪೂರ್ಣಾವಧಿ ನಾಟಕಗಳನ್ನು ರಚಿಸಿದ್ದು, ಇವರ ಎಲ್ಲ ನಾಟಕಗಳು ರಂಗಭೂಮಿಗೆ ಹೊಸ ಆಯಾಮಗಳನ್ನು ನೀಡಿವೆ. ಶ್ರೀರಂಗರ ನಾಟಕಗಳನ್ನು ಹೆಚ್ಚು ಜನರಿಗೆ ಪರಿಚಯಿಸಿದ ಕೀರ್ತಿ ಸುಲೋಚನಾ ಕೋಟೂರ ಅವರಿಗೆ ಸಲ್ಲುತ್ತದೆ ಎಂದರು.
ತಮ್ಮ ಅಂತರಾಳದಲ್ಲಿನ ರಂಗ ಕಲ್ಪನೆಯನ್ನು ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಹಾಗೂ ರಂಗ ಕಲಾವಿದರಾದ ಬಿ.ವಿ. ಕಾರಂತರಿಗೆ ಮನವರಿಕೆ ಮಾಡಿಕೊಟ್ಟು ಕಾರಂತರ ಮೂಲಕ ರಂಗಾಯಣ ಹುಟ್ಟು ಹಾಕುವ ಕೆಲಸ ಮಾಡಿದ ಹಿರಿಮೆ ಶ್ರೀರಂಗರದು ಎಂದರು.
ಸುಲೋಚನಾ ಕೋಟೂರು ಸ್ಮಾರಕ ಸಮಿತಿಯ ಪ್ರೊ ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ಜನರ ಆಶೋತ್ತರಗಳನ್ನು ತಮ್ಮ ಬರಹದಲ್ಲಿ ರೂಢಿಸಿಕೊಂಡು ಸಮಾಜಕ್ಕೆ ಹತ್ತಿರವಾದವರು ಶ್ರೀರಂಗರು. ಶ್ರೀರಂಗರು ಹಾಗೂ ಸಹೋದರಿ ಸುಲೋಚನಾ ಅವರನ್ನು ನೆನಪು ಮಾಡಲೆಂದು ಪ್ರತಿವರ್ಷ ಈ ರೀತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇನೆ ಎಂದರು. ರಂಗಾಯಣ ಆಡಳಿತಾಧಿಕಾರಿ ಕೆ.ಎಚ್. ಚನ್ನೂರ ಸ್ವಾಗತಿಸಿದರು. ಸಾಹಿತಿ ಡಾ ವಿಜಯಾ ಗುತ್ತಲ ವಿಶೇಷ ಉಪನ್ಯಾಸ ನೀಡಿದರು. ವಿಷಯಾ ಜೇವೂರ ನಿರೂಪಿಸಿದರು.
ವಿಚಾರವಂತಿಕೆಯ ನಾಟಕ: ಸಮಾರಂಭದ ನಂತರ ರವಿ ಕುಲಕರ್ಣಿ ನಿರ್ದೇಶನದಲ್ಲಿ ಶ್ರೀರಂಗರ 'ಕೇಳು ಜನಮೇಜಯ' ನಾಟಕ ಅದ್ಭುತವಾಗಿ ಮೂಡಿಬಂತು. ನಾಟಕದಲ್ಲಿ ಬರುವ ಮುದುಕ, ಯುವಕ, ಯುವತಿ ಹಾಗೂ ಸಾಮಾನ್ಯಪ್ಪ ಆರಂಭದಲ್ಲಿ ನಿರ್ಜೀವದಂತೆ ಕಂಡು ಕ್ರಮೇಣ ಸಜೀವಗೊಳ್ಳುತ್ತ ತಮ್ಮ ಜೀವನಾನುಭವವನ್ನು ಪ್ರಕಟಿಸುತ್ತಾರೆ. ಇದಕ್ಕೆ ಸಾಕ್ಷಿಯಾಗುವ ಸೂತ್ರಧಾರ ಒಟ್ಟು ಜೀವನದ ಬೆಳವಣಿಗೆಯಲ್ಲಿ ಶಕ್ತಿಯ ಪಾತ್ರ ಎಷ್ಟು ಮತ್ತು ವಿವೇಕದ ಪಾತ್ರ ಎಷ್ಟು ಎಂಬುದನ್ನು ಕಂಡುಕೊಳ್ಳುತ್ತಾರೆ. ಅಂತರಂಗ, ಬಹಿರಂಗ, ರಣರಂಗ ನಾಟಕದಲ್ಲಿದೆ. ಮುದುಕನ ಪಾತ್ರ ಮಾಡಿದ ರವಿ ಕುಲಕರ್ಣಿ, ಸಾಮಾನ್ಯಪ್ಪ ಪಾತ್ರ ನಿಭಾಯಿಸಿದ ಗೋಪಾಲ ಉಣಕಲ್, ಯುವಕನಾದ ಪ್ರಹ್ಲಾದ ಕುಲಕರ್ಣಿ, ಯುವತಿ ಸನ್ಮತಿ ಅಂಗಡಿ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಹಿರಿಯರಾದ ಗಜಾನನ ಮಹಾಲೆ ಪಾತ್ರಗಳಿಗೆ ಬಣ್ಣ ಬಳಿದು ನಾಟಕಕ್ಕೆ ಮತ್ತಷ್ಟು ಉತ್ಸಾಹ ನೀಡಿದ್ದಾರೆ. ತಾಂತ್ರಿಕ ವರ್ಗದಲ್ಲಿ ನಾಗರಾಜ ಪಾಟೀಲ, ರಾಜು ಪೆಂಡಾರಿ, ವಿಷಯಾ ಜೇವೂರ ಸಹಾಯ ಮಾಡಿದ್ದಾರೆ. ಒಟ್ಟಿನಲ್ಲಿ ನಾಟಕ ವಿಶಿಷ್ಟ ತಂತ್ರದಿಂದ ಸಂಕೀರ್ಣ ವಿಚಾರವಂತಿಕೆಯನ್ನು ಸರಳಮಾಡಿ ತೋರಿಸುತ್ತದೆ.