ರೈತರಿಂದ ಹೆಸ್ಕಾಂ ಕಚೇರಿಗೆ ಮುತ್ತಿಗೆ
ಹುಬ್ಬಳ್ಳಿ: ಗ್ರಾಮೀಣ ಪ್ರದೇಶ ಹಾಗೂ ರೈತರ ಪಂಪ್ಸೆಟ್ಗಳಿಗೆ ಸಮರ್ಪಕ ವಿದ್ಯುತ್ ಪೂರೈಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಹೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಗಳ ರೈತರು ಗುರುವಾರ ನವನಗರದ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ, ಪ್ರತಿಭಟಿಸಿದರು.
ಸಮರ್ಪಕ ವಿದ್ಯುತ್ ಪೂರೈಸದ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಹೆಸ್ಕಾಂ ಕಚೇರಿ ಎದುರು ಧರಣಿ ನಡೆಸಿದ ರೈತರು, ಪ್ರತಿಭಟನಾ ಸ್ಥಳದಲ್ಲಿಯೇ ಅಡುಗೆ ಮಾಡಿಕೊಂಡು ಊಟ ಮಾಡಿದರು.
ಮಾತು ತಪ್ಪಿದ ಸಿಎಂ: ನೀರಾವರಿಗಾಗಿ ಸಾಲ ಮಾಡಿ ಜಮೀನು ಬಿತ್ತನೆ ಮಾಡಿರುವ ರೈತ, ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಸಾಕಷ್ಟು ಹಾನಿ ಅನುಭವಿಸುತ್ತಿದ್ದಾನೆ. ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಭಾಗಶಃ ಪಂಪ್ಸೆಟ್ಗಳು ಸ್ಥಗಿತಗೊಂಡಿವೆ. ರೈತಪರ ಯೋಜನೆ ರೂಪಿಸುವುದಾಗಿ ಭರವಸೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತಿಗೆ ತಪ್ಪಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಕೆಇಬಿ ಎಂದು ಘೋಷಿಸಿ: ಗ್ರಾಮೀಣ ಪ್ರದೇಶದಲ್ಲಿ ಬೇಕಾಬಿಟ್ಟಿಯಾಗಿ ವಿದ್ಯುತ್ ಕಡಿತಗೊಳಿಸುತ್ತಿರುವುದರಿಂದ ವಿದ್ಯಾರ್ಥಿಗಳು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ರಾಜ್ಯದ 5 ವಿದ್ಯುತ್ ಕಂಪನಿಗಳಲ್ಲಿ ಹೆಸ್ಕಾಂನ್ನು ರಾಜ್ಯ ಸರ್ಕಾರ ಕಡೆಗಣಿಸಿದೆ ಎಂದು ದೂರಿದ ಪ್ರತಿಭಟನಾನಿರತ ರೈತರು, ವಿದ್ಯುತ್ ಕಂಪನಿಗಳನ್ನು ಒಂದುಗೂಡಿಸಿ ಈ ಹಿಂದಿನಂತೆ ಕೆಇಬಿ ಎಂದು ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.
ಬೇಡಿಕೆ ಈಡೇರಿಸಿ: ಪ್ರತಿದಿನ ಹಗಲು 10 ತಾಸು ತ್ರೀಫೇಸ್ ಹಾಗೂ ಸಂಜೆ 6ರಿಂದ ಬೆಳಗ್ಗೆ 6ರ ವರೆಗೆ ಸಿಂಗಲ್ ಫೇಸ್ ವಿದ್ಯುತ್ ನೀಡಬೇಕು, ಸಾಮರ್ಥ್ಯಯುಳ್ಳ ಟ್ರಾನ್ಸ್ಫಾರ್ಮರ್ಗಳನ್ನು ಅಳವಡಿಸಬೇಕು, ಸುಟ್ಟ ಟಿಸಿಗಳನ್ನು 24 ತಾಸಿನೊಳಗೆ ಪರಿವರ್ತನೆ ಮಾಡಿಕೊಳ್ಳಬೇಕು. ಇದಕ್ಕೆ ಪ್ರತಿ ತಾಲೂಕಿಗೊಂದು ಟಿಸಿ ದುರಸ್ತಿ ಕೇಂದ್ರ ತೆರೆಯಬೇಕು. ಶಿಥಿಲಾವಸ್ಥೆಯಲ್ಲಿರುವ ವಿದ್ಯುತ್ ಕಂಬ, ತಂತ್ನಿ ಬದಲಾಯಿಸಬೇಕು. ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯಲು ಪಾವತಿಸಬೇಕಾದ ಮುಂಗಡ ಹಣದ ಪ್ರಮಾಣ್ನ ಕಡಿಮೆ ಮಾಡಬೇಕು. ಅಕ್ರಮ- ಸಕ್ರಮ ಯೋಜನ್ನೆ ಕೂಡಲೇ ಜಾರಿಗೊಳಿಸಬೇಕು, ಮತ್ತಿತರ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು.
ದೂರು ನೀಡಿ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಜೋಳನ್, ಪ್ರತಿದಿನ 6 ತಾಸು ತ್ರಿಫೇಸ್ ವಿದ್ಯುತ್ ಪೂರೈಕೆ ಮಾಡುವುದಾಗಿ ಭರವಸೆ ನೀಡಿದರು. ಟ್ರಾನ್ಸ್ಫಾರ್ಮರ್ ಸುಟ್ಟ ಮೂರು ದಿನಗಳಲ್ಲಿ ಬದಲಾವಣೆ ಮಾಡುವ ಭರವಸೆ ನೀಡಿದರು. ಭಾಗ್ಯಜ್ಯೋತಿ ಹಾಗೂ ಕುಟೀರಜ್ಯೋತಿ ಬಾಕಿ ಮನ್ನಾ ಮಾಡಲಾಗಿದ್ದು, ಶುಲ್ಕ ವಸೂಲಿಗೆ ಬರುವ ಅಧಿಕಾರಿಗಳ ವಿರುದ್ಧ ತಮಗೆ ದೂರು ನೀಡುವಂತೆ ತಿಳಿಸಿದರು. ಹೆಸ್ಕಾಂ ವ್ಯಾಪ್ತಿಯಲ್ಲಿನ ಶಿಥಿಲಗೊಂಡಿರುವ ವಿದ್ಯುತ್ ಕಂಬ, ತಂತಿಗಳನ್ನು ಬದಲಾಯಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಈ ಸಮಸ್ಯೆ ಶೀಘ್ರ ಬಗೆಹರಿಯಲಿದೆ ಎಂದು ತಿಳಿಸಿದರು. ರೈತರ ಒತ್ತಾಯದ ಮೆರೆಗೆ ಹೆಸ್ಕಾಂ ಎಂಡಿ ಲಿಖಿತ ರೂಪದಲ್ಲಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಎ. ಲಕ್ಷ್ಮಿನಾರಾಯಣಗೌಡ, ಪದಾಧಿಕಾರಿಗಳಾದ ಸಿದ್ದನಗೌಡ ಬಿರಾದಾರ, ಶಿವನಗೌಡ ಹೊಸಗೌಡರ, ಗದಿಗೆಪ್ಪ ದಾನಪ್ಪಗೌಡರ, ಶ್ಯಾಮಸುಂದರ ಕೀರ್ತಿ ಹಾಗೂ ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ, ಕಾರವಾರ, ಹಾವೇರಿ ಜಿಲ್ಲೆ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.