ಲೇಖಕಿ ಲತಾ ಬರವಣಿಗೆಯಲ್ಲಿ ಸಾಮಾಜಿಕ ಕಳಕಳಿ: ಡಾ. ಶಾಂತಾ ಇಮ್ರಾಪುರ
ಧಾರವಾಡ: ಮೈಸೂರಿನ ಲೇಖಕಿ ಡಾ ಲತಾ ಅವರ ಲೇಖನಗಳನ್ನು ಗಮನಿಸಿದರೆ ನಿಜವಾದ ಸಾಮಾಜಿಕ ಕಳಕಳಿ, ದೃಢವಾದ ನಿಲುವು, ಅದಮ್ಯ ಚೇತನ ಇದೆ ಎಂದು ಹಿರಿಯ ಲೇಖಕಿ ಡಾ ಶಾಂತಾ ಇಮ್ರಾಪುರ ಹೇಳಿದರು. ವಿದ್ಯಾವರ್ಧಕ ಸಂಘವು ಇಂದುಮತಿ ಪಾಟೀಲ ಪುಟ್ಟಪ್ಪ ದಂಪತಿಗಳ ಪುತ್ರಿ ಶಾಂತಲಾ ಪಾಟೀಲ ಇವರ ಹೆಸರಿನ ಸಾಹಿತ್ಯ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಅಭಿನಂದನಾ ನುಡಿಗಳನ್ನಾಡುತ್ತಾ, ಡಾ ಲತಾ ರಾಜಶೇಖರ ಅವರು 12-13 ವರ್ಷಗಳಲ್ಲಿ ಸತತ ಪರಿಶ್ರಮದಿಂದ ನಾಲ್ಕು ವಿಭಿನ್ನ ಮಹಾಕಾವ್ಯಗಳನ್ನು ರಚಿಸಿ ಐದನೇ ಮಹಾಕಾವ್ಯ ರಚನೆಯಲ್ಲಿ ತೊಡಗಿದ್ದು, ಸ್ತ್ರೀ ಲೋಕದಲ್ಲಿ ಅದ್ಭುತ ಸಾಧನೆ ಎಂದು ಬಣ್ಣಿಸಿದರು. ಧಾರವಾಡ ಜೆಎಸ್‌ಎಸ್ ಕಾರ್ಯದರ್ಶಿ ಡಾ ನ. ವಜ್ರಕುಮಾರ ಲೇಖಕಿ ಡಾ ಲತಾ ರಾಜಶೇಖರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ನಾಡೋಜ ಡಾ ಪಾಟೀಲ ಪುಟ್ಟಪ್ಪ ಮಾತನಾಡಿ, ಡಾ ಲತಾ ಅವರಿಗೆ ಈಗಾಗಲೇ ಅನೇಕ ಪ್ರಶಸ್ತಿ, ಪುರಸ್ಕಾರಗಳು ಲಭಿಸಬೇಕಾಗಿತ್ತು. ಆದರೆ, ಅವುಗಳು ಸಿಗದಿರುವುದಕ್ಕೆ ಬೇಸರ ತಂದಿದೆ. ಲತಾ ಅವರು ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಕಾರ್ಯ ಮಾಡಿದ್ದು, ಹೆಚ್ಚಿನ ಸಾಧನೆ ಮಾಡುವ ಸಾಮರ್ಥ್ಯ, ಪ್ರತಿಭೆ ಅವರಲ್ಲಿದೆ ಎಂದರು. ಲೇಖಕಿ ಡಾ ಲತಾ ರಾಜಶೇಖರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಡಾ ಹಾ.ಮಾ. ನಾಯಕ, ಇತರ ಸಾಹಿತಿಗಳು, ಲೇಖಕಿಯರು, ನನ್ನ ಸಾಹಿತ್ಯಿಕ ಚಟುವಟಿಕೆಗಳಿಗೆ ಪ್ರೇರಣೆ, ಪ್ರೋತ್ಸಾಹ ನೀಡಿದ್ದಾರೆ ಎಂದರು. ಡಾ ಎಸ್. ಎಂ. ವೃಷಭೇಂದ್ರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಶಾಂತಲಾ ಪಾಟೀಲರ ಪುತ್ರಿ ದತ್ತಿ ದಾನಿ ವಿಜಯಮಾಲಾ, ಡಾ ರಾಜಶೇಖರ, ಜಿ.ಜಿ. ದೊಡವಾಡ ಇದ್ದರು.