ಸಡಿಲಗೊಳ್ಳುತ್ತಿರುವ ಸಂಸ್ಕಾರ
ಧಾರವಾಡ: ಒಂದು ಕಾಲಕ್ಕೆ ಜೀವನವನ್ನು ಸುಗಮ ಮಾರ್ಗದಲ್ಲಿ ನಡೆಸುತ್ತಿದ್ದ ಮನುಷ್ಯನ ಸಂಸ್ಕಾರಗಳು ದಿನೇ ದಿನೇ ಸಡಿಲುಗೊಳ್ಳುತ್ತಿರುವುದು ದುಖಕರ ಸಂಗತಿ ಎಂದು ನಿವೃತ್ತ ಪ್ರಾಧ್ಯಾಪಕ ಸಿ.ಆರ್. ಜೋಶಿ ಹೇಳಿದರು.
ಸಾಹಿತ್ಯಿಕ ಸಂಘಟನೆ ಅನ್ವೇಷಣ ಕೂಟವು ಸಾಧನಕೇರಿಯ ಚೈತ್ರದ ಸಭಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಆಧುನಿಕ ಕಾಲದಲ್ಲಿ ಸಂಸ್ಕಾರದ ಅವಶ್ಯಕತೆಗಳು ವಿಷಯ ಕುರಿತಾದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, ಕಾಲಮಾನಕ್ಕೆ ತಕ್ಕಂತೆ ಬದಲಾವಣೆ ಬೇಕೆಂಬುದು ನಿಜವಾದರೂ ಅರ್ಥಪೂರ್ಣ ಜೀವನಕ್ಕೆ ಬೇಕಾದ ಹಿಂದಿನವರು ಹಾಕಿಕೊಟ್ಟ ಸಂಸ್ಕಾರ ಸೂತ್ರಗಳಲ್ಲಿಯ ಪ್ರಮುಖ ಅಂಶಗಳನ್ನಾದರೂ ನಾವು ಪಾಲಿಸುತ್ತ ಯುವಪೀಳಿಗೆಗೆ ಅವುಗಳನ್ನು ಜೀವನಿಧಿಯಾಗಿ ನೀಡಿದಲ್ಲಿ ಹಳಿತಪ್ಪುತ್ತಿರುವ ಇಂದಿನ ಸಮಾಜ ಸರಿದಾರಿ ಹಿಡಿಯಬಲ್ಲದು ಎಂದರು.
ಸ್ವಾರ್ಥ, ಅಧಿಕಾರ ದಾಹ, ಹಣದಾಸೆ, ಸ್ತ್ರೀ ವ್ಯಾಮೋಹಗಳಂತಹ ದುರ್ಮಾರ್ಗಗಳ ಬೆನ್ನು ಹತ್ತಿದ ಹಲವರ ಜೀವನ ಶೈಲಿ, ಅವರ ಮಕ್ಕಳ ಭವಿಷ್ಯಕ್ಕೆ ಮಾರಕವಾಗಿವೆ. ಸೀಮಿತ ಆಸೆ ಆಕಾಂಕ್ಷೆಗಳು, ಪರಸ್ಪರ ವಿಶ್ವಾಸ, ಕೊಡುಕೊಳ್ಳುವ ಮನೋಧರ್ಮ ಹಾಗೂ ಸತ್ಸಂಗಗಳಿಂದ ಕೂಡಿದ ಸರಳ ಜೀವನ ಶೈಲಿಯನ್ನು ತಮ್ಮದಾಗಿಸಿಕೊಂಡು ಸಂಸ್ಕಾರವಂತರಾದರೆ ನಮ್ಮ ಸಂತತಿಯೂ ಕೂಡ ಆದರ್ಶ ನಾಗರಿಕರಾದಾರು ಎಂದು ಜೋಶಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿ ವೆಂಕಟೇಶ ಕುಲಕರ್ಣಿ ಮಾತನಾಡಿದರು.
ಲಘು ಸಂಗೀತ ಕಾರ್ಯಕ್ರಮದಲ್ಲಿ ಯುವ ಗಾಯಕಿ ಮೈತ್ರಾ ಭಜಂತ್ರಿ ಶರಣರ ವಚನಗಳು ಹಾಗೂ ಹಿರಿಯ ಕವಿಗಳಾದ ಬೇಂದ್ರೆ, ಕಣವಿ, ಡಿ.ಎಸ್. ಕರ್ಕಿ ಅವರ ಭಾವಗೀತೆಗಳನ್ನು ಪ್ರಸ್ತುತಪಡಿಸಿದರು. ಗಣ್ಯರಾದ ಪ್ರೊ. ಸಿ.ವಿ. ವೇಣುಗೋಪಾಲ, ಪ್ರೊ.ಎ.ಜಿ.ಸಬರದ, ಪ್ರೊ.ದುಷ್ಯಂತ ನಾಡಗೌಡ, ಎ.ಸಿ. ಮುಂಡರಗಿ, ಮನೋಜ ಪಾಟೀಲ, ಸತ್ಯನಾರಾಯಣ ಹೆಗಡೆ, ಸುರೇಶ ಕುಲಕರ್ಣಿ, ಎಸ್.ಎಸ್. ಪೊಲೀಸ್ಗೌಡರ, ಜಿ.ಬಿ. ಹೊಂಬಳ, ಹರ್ಷ ಡಂಬಳ, ಅನಂತ ದೇಶಪಾಂಡೆ, ಎಂ.ವಿ. ಹೊಸಮನಿ, ವಸಂತ ವಾಯಿ, ರಾಜೀವ ಪಾಟೀಲ ಕುಲಕರ್ಣಿ, ಎಸ್.ಎಂ. ದೇಶಪಾಂಡೆ, ಅನಂತ ಥಿಟೆ, ವಿ.ಜಿ. ತಿಗರಿ ಇದ್ದರು.
ಅನ್ವೇಷಣ ಕೂಟದ ಅಧ್ಯಕ್ಷ ನರಸಿಂಹ ಪರಾಂಜಪೆ ಸ್ವಾಗತಿಸಿದರು. ವೆಂಕಟೇಶ ದೇಸಾಯಿ ನಿರೂಪಿಸಿದರು. ಹ.ವೆಂ. ಕಾಖಂಡಿಕಿ ವಂದಿಸಿದರು.