ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಸರ್ಕಾರಿ ನೌಕರರಿಗೆ ಕೆಜಿಐಡಿ ಬೋನಸ್ ನೀಡಲು ಆಗ್ರಹ

Lingaraj Badiger
Updated On : 27 Sept 2013, 10:47 am

ಧಾರವಾಡ: ಕರ್ನಾಟಕ ಸರ್ಕಾರಿ ವಿಮಾ ಇಲಾಖೆ (ಕೆಜಿಐಡಿ) ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ 2008ರಿಂದ ಬರಬೇಕಾದ 6 ವರ್ಷಗಳ ಬೋನಸ್ ಹಣವನ್ನು ಕೂಡಲೇ ಮಂಜೂರು ಮಾಡಬೇಕೆಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಜಿಲ್ಲಾ ಘಟಕ ಆಗ್ರಹಿಸಿದೆ.
ಸಂಘಟನೆ ಪತ್ರಿಕಾ ಹೇಳಿಕೆಯಲ್ಲಿ ಈ ವಿಷಯ ತಿಳಿಸಿದ್ದು, 2008ರ ಏಪ್ರೀಲ್ 1ರಿಂದ 2013ರ ಮಾರ್ಚ್ 31ರ ವರೆಗೆ ಕೆಜಿಐಡಿ ಬೋನಸ್ ವಿತರಣೆಯಾಗದೇ ಸರ್ಕಾರಿ ನೌಕರರು ಹಾಗೂ ಇದೇ ಅವಧಿಯಲ್ಲಿ ನಿವೃತ್ತರಾಗಿರುವ ಸರ್ಕಾರಿ ನೌಕರರೂ ಲಾಭಾಂಶ ಪಡೆಯುವಲ್ಲಿ ವಂಚಿತರಾಗಿದ್ದಾರೆ. ಆರ್ಥಿಕ ಇಲಾಖೆ ಹೊಂದಿರುವ ಸಿಎಂ ಸಿದ್ಧರಾಮಯ್ಯ ಅವರು ಕೂಡಲೇ ಸರ್ಕಾರದ ಹಂತದಲ್ಲಿ ನಿರ್ಣಯ ಕೈಕೊಂಡು ರಾಜ್ಯದಲ್ಲಿರುವ 6 ಲಕ್ಷ ಸರ್ಕಾರಿ ನೌಕರರಿಗೆ ಹಾಗೂ ನಿವೃತ್ತ ನೌಕರರಿಗೆ ಅನುಕೂಲ ಮಾಡಿಕೊಡಬೇಕಿದೆ ಎನ್ನುವುದು ಸಂಘದ ಒತ್ತಾಯ.  ಕೇಂದ್ರ ಸರ್ಕಾರಿ ಸ್ವಾಮ್ಯದ ಭವಿಷ್ಯ ನಿಧಿ (ಜಿಪಿಎಫ್) ಸೇರಿದಂತೆ ಪ್ರಸ್ತುತ ರಾಜ್ಯದ ಬಹುತೇಕ ಇಲಾಖೆಗಳು ಇ-ಆಡಳಿತ ಜಾಲಬಂಧಕ್ಕೆ ಒಳಪಟ್ಟಿದ್ದು, ಆನ್‌ಲೈನ್ ಮೂಲಕ ಪ್ರತಿಯೊಬ್ಬ ರಾಜ್ಯ ಸರ್ಕಾರಿ ನೌಕರರು ತಮಗೆ ಬೇಕಾದ ಮಾಹಿತಿ ಪಡೆಯಬಹುದಾಗಿದೆ. ಆದರೆ, ಈ ತನಕ ಕೆಜಿಐಡಿ ಸರ್ಕಾರಿ ನೌಕರರ ವಿಮಾ ಪಾಲಸಿ ವ್ಯವಹಾರಗಳನ್ನು ಮತ್ತು ಪೂರಕ ಇಲಾಖಾ ಮಾಹಿತಿ ಕಡತಗಳನ್ನು ಗಣಕೀಕರಣಗೊಳಿಸಿ ಆನ್‌ಲೈನ್ ಮೂಲಕ ನೌಕರರಿಗೆ ಲಭ್ಯವಾಗುವಂತೆ ಅವಕಾಶ ಕಲ್ಪಿಸಿಲ್ಲ. ನೌಕರರು ಕೆಜಿಐಡಿ ಮೂಲಕ ಸಾಲ ವಗೈರೆ ಪಡೆಯುವ ಸಂದರ್ಭ ಮಾಹಿತಿ ಕೊರತೆಯಿಂದ ಬಹಳಷ್ಟು ವಿಳಂಬವಾಗುತ್ತಿದೆ ಎಂದು ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ರಾಮಚಂದ್ರ ಮುದಗಣ್ಣವರ, ವಿ.ಆರ್. ನರಗುಂದ, ಉಪಾಧ್ಯಕ್ಷ ಗುರುಮೂರ್ತಿ ಯರಗಂಬಳಿಮಠ, ಪ್ರಧಾನ ಕಾರ್ಯದರ್ಶಿ ಮುರುಘೇಶ ಸವಣೂರ, ಮಂಜುನಾಥ ಹೆಗಡೆ, ಶಿವಣ್ಣ ಕಂಬಿ, ಬಿ. ವಾದಿರಾಜ, ಮರಚರೆಡ್ಡಿ, ಶಿವಕ್ಕ ನವಲೂರ, ಸಹದೇವ ಬ್ಯಾಟಗೇರ ಜಿ.ಜಿ. ಜಿನ್ನೂರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement