ಬೇಡಿಕೆ ಈಡೇರಿಕೆಗಾಗಿ ನೇಕಾರರ ಧರಣಿ
ಹುಬ್ಬಳ್ಳಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಇಲ್ಲಿನ ನೇಕಾರ ಭವನದ ಎದುರು ಶುಕ್ರವಾರ ಅಖಿಲ ಕರ್ನಾಟಕ ಕೈಮಗ್ಗ ನೇಕಾರರ ಸಂಘದ ಸದಸ್ಯರು ಧರಣಿ ನಡೆಸಿ ಬೇಡಿಕೆ ಈಡೇರಿಕೆಗೆ ಕೆಎಚ್ಡಿಸಿ ವ್ಯವಸ್ಥಾಪಕ ನಿರ್ದೇಶಕಿ ಸೀಮಾ ಗರಗ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ಕೈಮಗ್ಗ ನಿಗಮದ ನೇಕಾರರ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಈಗಾಗಲೇ ಜವಳಿ ಸಚಿವ ಬಾಬುರಾವ್ ಚಿಂಚನಸೂರ್ ಅವರಿಗೆ ಸಲ್ಲಿಸಿದ್ದ ಮನವಿಗೆ ಸ್ಪಂದಿಸಿಲ್ಲ. ಬೆಲೆ ಏರಿಕೆಗೆ ಅನುಗುಣವಾಗಿ ಕೈಮಗ್ಗ ನೇಕಾರರ ದಿನಗೂಲಿಯನ್ನು ಕನಿಷ್ಠ ಶೇ. 50ರಷ್ಟು ಹೆಚ್ಚಳ ಮಾಡಬೇಕು. ಮಾರ್ಚ್ 2011ರಲ್ಲಿ ನೇಕಾರರ ಡಚ್ ಮನೆಗಳ ಸಾಲ ಮರುಪಾವತಿ ಮಾಡಲಾಗಿದೆ. ಹುಬ್ಬಳ್ಳಿ ನೇಕಾರ ಕಾಲೋನಿಯನ್ನು ಕೃಷಿಯೇತರ ಜಮೀನು ಎಂದು ಪರಿವರ್ತಿಸಬೇಕು. ನೇಕಾರರಿಗೆ ನೇರವಾಗಿ ಉದ್ಯೋಗ ಕಲ್ಪಿಸುವ ಬದಲು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಹೊರಗಿನಿಂದ ಬಟ್ಟೆ ಖರೀದಿಸುತ್ತಿದ್ದು, ಹೊರಗಿನಿಂದ ಬಟ್ಟೆ ಖರೀದಿಸುವ ಮೂಲಕ ಅಧಿಕಾರಿಗಳು ಕಮಿಷನ್ ಪಡೆಯುವ ಮೂಲಕ ನೇಕಾರರಿಗೆ ಉದ್ಯೋಗ ಲಭಿಸದಂತೆ ಮಾಡುತ್ತಿದ್ದಾರೆ. ಉದ್ಯೋಗ ಕೊರತೆಯಿಂದಾಗಿ ನೇಕಾರ ಕುಟುಂಬಗಳು ನಶಿಸುತ್ತಿದ್ದು ಈಗ ಕೇವಲ 10 ಸಾವಿರ ಕುಟುಂಬಗಳು ಮಾತ್ರ ನೇಕಾರಿಕೆ ಉದ್ಯೋಗದಲ್ಲಿ ತೊಡಗಿಸಿಕೊಂಡಿವೆ.
ನಿಗಮದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಭ್ರಷ್ಟಾಚಾರದಿಂದಾಗಿ ಕಳೆದ ವರ್ಷ ಕೆಎಚ್ಡಿಸಿ ರು. 9 ಕೋಟಿ ನಷ್ಟ ಅನುಭವಿಸಿದೆ. ಭ್ರಷ್ಟಾಚಾರ ತಡೆಗಟ್ಟದಿದ್ದರೆ ಕೆಎಚ್ಡಿಸಿ ಉಳಿಯುವುದು ಕಷ್ಟ ಆದ್ದರಿಂದ ಸರ್ಕಾರ ತಕ್ಷಣ ನಿಗಮದಲ್ಲಿ ನಡೆಯುತ್ತಿರುವ ಅವ್ಯವಹಾರ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು.
ಹುಬ್ಬಳ್ಳಿಯಲ್ಲಿ ನೆಪ ಮಾತ್ರಕ್ಕೆ ಕೆಎಚ್ಡಿಸಿ ಪ್ರಧಾನ ಕಚೇರಿ ಇದ್ದು, ಎಲ್ಲ ಹಿರಿಯ ಅಧಿಕಾರಿಗಳು ಬೆಂಗಳೂರಿನಲ್ಲಿದ್ದುಕೊಂಡು ಕರ್ತವ್ಯ ಪರಿಪಾಲನೆ ಮಾಡುತ್ತಿದ್ದಾರೆ. ನಿಗಮ ಮತ್ತು ನೇಕಾರರನ್ನು ರಕ್ಷಿಸುವ ಇಚ್ಛಾಶಕ್ತಿ ಸರ್ಕಾರಕ್ಕೆ ಇದ್ದರೆ ತಕ್ಷಣ ಬೆಂಗಳೂರಿನಲ್ಲಿ ಇರುವ ಹಿರಿಯ ಅಧಿಕಾರಿಗಳನ್ನು ಹುಬ್ಬಳ್ಳಿಗೆ ಕಳುಹಿಸಿಕೊಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ನೇಕಾರರ ಅಭಿವೃದ್ಧಿಗೆ ಹಿಂದಿನ ಸರ್ಕಾರ ಬಜೆಟ್ನಲ್ಲಿ ನೀಡಿರುವ 20 ಕೋಟಿಗಳನ್ನು ಸರ್ಕಾರ ತಕ್ಷಣ ಬಿಡುಗಡೆ ಮಾಡಬೇಕು. ಈ ಅನುದಾನದಲ್ಲಿ ನೇಕಾರರಿಗೆ ಕಲ್ಯಾಣಮಂಟಪ ಮತ್ತು ರಾಜ್ಯದಲ್ಲಿರುವ ಎಲ್ಲ ನೇಕಾರ ಕಾಲೋನಿಗಳಿಗೆ ಮೂಲಸೌಕರ್ಯ ಕಲ್ಪಿಸಬೇಕು. ಹಿಂದಿನ ಸರ್ಕಾರ ನೇಕಾರರ ಡಚ್ ಮನೆಗಳ ಮೇಲಿನ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿದೆ. ಆದರೆ, ಕರ್ನಾಟಕ ಗೃಹ ಮಂಡಳಿ ಮತ್ತು ಹುಡ್ಕೋ ಯೋಜನೆಯಡಿ ಮನೆಗಳ ಮೇಲಿನ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ತಕ್ಷಣ ಕೆಎಚ್ಡಿಸಿ ಮತ್ತು ಹುಡ್ಕೋ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವುದಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯ ನೇಕಾರ ಸಂಘದ ಉಪಾಧ್ಯಕ್ಷ ಎನ್.ಜೆ. ಮಾಳವದೆ, ಶ್ರೀಕಾಂತ ಭಂಡಾ, ಪುಂಡಲಿಕ ಕುರಟ್ಟಿ, ಜನ್ನತಬಿ ಮುದ್ಗಲ್, ಶಾಂತವ್ವ ಗದಿಗೌಡರ, ಪ್ರೇಮವ್ವ ಮುಳಗುಂದ ಸೇರಿದಂತೆ ನೂರಾರು ನೇಕಾರರು ಇದ್ದರು.