ಸಂಗೀತದೌತಣಕ್ಕೆ ಸಜ್ಜಾದ ಗಂಧರ್ವ ಗುಡಿ
ಕುಂದಗೋಳ: ಸಪ್ತಸ್ವರಗಳ ನಾದವನ್ನು ವಿಶ್ವವ್ಯಾಪಿಗೊಳಿಸಿದ ಕೀರ್ತಿ ಕುಂದಗೋಳದ್ದು. ಹೌದು..ಕುಂದಗೋಳ ಎಂದರೆ ಮೊದಲು ನೆನಪಾಗುವುದೇ ನಾಡಗೇರ ವಾಡೆ. ಒಂದು ಕಾಲದಲ್ಲಿ ಈ ವಾಡೆಯಲ್ಲಿ ಪ್ರತಿನಿತ್ಯ ಸಂಗೀತದ ನಾದ ಮೊಳಗುತ್ತಿತ್ತು. ಈ ವಾಡೆಯಲ್ಲಿ ನೂರಾರು ಸಂಗೀತ ವಿದ್ಯಾರ್ಥಿಗಳು ವಿದ್ಯೆ ಕಲಿತು ನಾಡಿನ ಉದ್ದಗಲಕ್ಕೂ ಶಿಷ್ಯ ಬಳಗ ನೀಡಿದ ತವರುಮನೆ ಈ ಕುಂದಗೋಳ ವಾಡೆ.
ಅಂದಿನ ದಿನಗಳಲ್ಲಿ ಮನೆಮನೆಗೆ ತೆರಳಿ ಸವಾಯಿ ಗಂಧರ್ವರ ಪುಣ್ಯತಿಥಿ ವಾಡೆದಾಗ ನಡೀತದ ಅಹೋರಾತ್ರಿ ಸಂಗೀತ ಕಾರ್ಯಕ್ರಮಾನೂ ನಡೀತದ ಮನ್ಯಾಗ ಯಾರೂ ಅಡುಗಿ ಊಟಾ ಅಂತ ಕೂಡ್ರಬ್ಯಾಡ್ರೀ..ದಯವಿಟ್ಟು ವಾಡೇಕ ಎಲ್ಲಾರೂ ಬರಬೇಕು. ಅಂತ ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಗೂ ಬಿನ್ನಾಹ (ಔತಣ) ಕೊಟ್ಟು ಬರತಿದ್ರು ಎಲ್ಲಾ ಅತಿಥಿಗಳಿಗೆ ಆಶ್ರಯದಾತರಾದ ಶ್ರೀಮಂತ ನಾನಾಸಾಹೇಬ ನಾಡಿಗೇರ ಅವರು.
ಇಂದಿಗೂ ಕೂಡಾ ಆ ಸಂಗೀತದ ರಾಗ ತಾಳಗಳು ಕುಂದಗೋಳ ಪಟ್ಟಣದ ಪರಿಸರದಲ್ಲೆಲ್ಲಾ ಹರಿದಾಡುತ್ತವೆ. ಪಟ್ಟಣಕ್ಕೆ ಕಾಲಿಟ್ಟ ಯಾವುದೇ ಅತಿಥಿಗಳು ಕುಂದಗೋಳ ಸಂಗೀತ ಕಾರ್ಯಕ್ರಮದ ಬಗ್ಗೆ ಕುತೂಹಲದಿಂದ ಕೇಳಿದರೆ ಸುವರ್ಣದ ದಿನಗಳ ಸ್ಮರಣೆಗಳು ಕೌತುಕದ ವಿವರ ಪ್ರವರಗಳಾಗಿ ಅಲ್ಲಿನ ಹಿರಿಯರ ಬಾಯಿಂದ ಬಿಚ್ಚಿಕೊಳ್ಳುತ್ತವೆ.
ಹೌದು..ಕುಂದಗೋಳ ವಾಡೆ ಎಲ್ಲ ವಾಡೆಗಳಂತಲ್ಲ. ಎಲ್ಲದಕ್ಕಿಂತ ಭಿನ್ನ ಸಂಗೀತಗಾರರ ಸೃಷ್ಟಿಗೆ ಅನುಕೂಲ ಕಲ್ಪಿಸಿ ತನ್ನದೇ ಆದ ವೈಶಿಷ್ಟ್ಯ ಮೆರೆದಿದೆ. ಖ್ಯಾತನಾಮರಿಗೆ ಸಂಗೀತ ಕಲಿಕೆಗಾಗಿಯೇ ಆಶ್ರಯ ನೀಡಿದೆ. ರಾಮಭಾವು ಕುಂದಗೋಳಕರ ಅವರನ್ನು ಹಿಂದುಸ್ತಾನಿ ಸಂಗೀತ ಲೋಕ ಕಂಡರಿಯದ ಅಪ್ರತಿಮ ಸಂಗೀತಗಾರ ಸವಾಯಿ ಗಂಧರ್ವರನ್ನಾಗಿಸಿತು. ತನ್ನೂಲಕ ಭಾರತರತ್ಮ ಪಂ. ಭೀಮಸೇನ ಜೋಶಿ, ವಿದುಷಿ ಪದ್ಮವಿಭೂಷಣ ದಿ. ಗಂಗೂಬಾಯಿ ಹಾನಗಲ್, ಫಿರೋಜ್ ದಸ್ತೂರಂಥವರನ್ನು ತನ್ನ ಮಡಿಲಲ್ಲಿಟ್ಟುಕೊಂಡು ಜೋಪಾನವಾಗಿ ಬೆಳೆಸಿ ಸಂಗೀತ ಲೋಕಕ್ಕೆ ಅಮೂಲ್ಯ ರತ್ನಗಳನ್ನೇ ನೀಡಿದೆ.
ಆದರಾತಿಥ್ಯಕ್ಕೆ ಹೆಸರಾದ ಕುಂದಗೋಳ ವಾಡೆಗೆ ಪ್ರತಿಷ್ಠಿತರು ಬಂದು ವಾಸ್ತವ್ಯ ಹೂಡುತ್ತಿದ್ದರು. ಹಾಗೆ ಬಂದವರಲ್ಲಿ ಹಿಂದುಸ್ತಾನಿ ದಿಗ್ಗಜ ಕಿರಾನಾ ಘರಾನೆಯ ಪ್ರವರ್ತಕ ಅಬ್ದುಲ್ ಕರೀಂ ಖಾನರು. ಕುಂದಗೋಳದ ವಾಡೆಯ ಕಲೋಪಾಸನೆಯ ಕೀರ್ತಿ ಅಲ್ಲಿಂದಲೇ ಹಬ್ಬಿತು. ಕುಂದಗೋಳದಲ್ಲಿ ನೆಲೆ ನಿಂತ ಸವಾಯಿ ಗಂಧರ್ವರ ಶಿಷ್ಯತ್ವವನ್ನು ಭಾರತರತ್ನ ಪಂ. ಭೀಮಸೇನ ಜೋಶಿ, ಪದ್ಮಭೂಷಣ ವಿದುಷಿ ದಿ. ಗಂಗೂಬಾಯಿ ಹಾನಗಲ್, ಶ್ರೀಮಂತ ನಾನಾಸಾಹೇಬ ನಾಡಿಗೇರ, ಫಿರೋಜ ದಸ್ತೂರ, ಕುಂದಗೋಳದ ವಾಡೆಯ ಕೀರ್ತಿ ಮುಗಿಲೆತ್ತರಕ್ಕೇರಿಸಿದ್ದು ಈಗ ಇತಿಹಾಸ.
1952ರಲ್ಲಿ ಸವಾಯಿ ಗಂಧರ್ವರು ಇಹಲೋಕ ತ್ಯಜಿಸಿದರು. ಆ ದಿನ ಭಾದ್ರಪದ ಮಾಸದ ಅವಿಧವಾ ನವಮಿ. ಆ ದಿನವನ್ನೇ ಗುರುಸ್ಮರಣೆಗಾಗಿ ಸಂಗೀತ ಕಾರ್ಯಕ್ರಮ ಆರಂಭಿಸಿದ ಕೀರ್ತಿ ಶ್ರೀಮಂತ ನಾನಾಸಾಹೇಬ ನಾಡಿಗೇರ ಅವರದ್ದು. ಪ್ರಾಯಶಃ ಇತಿಹಾಸದಲ್ಲಿಯೇ ಮೊದಲು ಎನ್ನುವಂತೆ ಸತತ 25 ವರ್ಷಗಳ ಕಾಲ ಶ್ರೀಮಂತ ನಾನಾಸಾಹೇಬ ನಾಡಗೇರ ಅವರು ಸಂಗೀತೋತ್ಸವ ಕಾರ್ಯಕ್ರಮ ನಡೆಸಿಕೊಂಡು ಬಂದರು. ಮೊದಲ ದಿನದ ಕೊನೆಯ ಹಾಡುಗಾರ್ತಿ ದಿ. ಗಂಗೂಬಾಯಿ ಹಾನಗಲ್ ಅವರದಾದರೆ, ಎರಡನೇ ದಿನದಲ್ಲಿ ಕಾರ್ಯಕ್ರಮ ಸಮಾರೋಪ ಪಂ. ಭೀಮಸೇನ ಜೋಶಿ ಅವರಿಂದಲೇ ಸಂಪನ್ನವಾಗುತ್ತಿತ್ತು.
ಹೀಗೆ ನಡೆದುಕೊಂಡ ಬಂದ ಕುಂದಗೋಳ ವಾಡೆಯಲ್ಲಿನ ಆ ದಿನದ ಸಂಗೀತ ಕಛೇರಿಯಲ್ಲಿ ಬಂದು ಹಾಡುವುದೇ ಭಾಗ್ಯ. ಇಂಥ ಅವಕಾಶಗಳಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದರೆ, ಖ್ಯಾತನಾಮ ಗಾಯಕರು ಉತ್ಸಾಹದಿಂದ ಬಂದು ಮನದುಂಬಿ ಹಾಡಿ ವಿನೂತನ ಅನುಭವಕ್ಕೆ ಸಾಕ್ಷಿ ಮಾಡಿಕೊಳ್ಳುತ್ತಿದ್ದರು.
ಆ ಪರಂಪರೆ ಈಗಲೂ ಕೂಡಾ ಮುಂದುವರೆದುಕೊಂಡು ಬರುತ್ತಿದ್ದು, ವಾಡೆದೊಳಗ ಆ ವೇದಿಕೆಯ ಮ್ಯಾಲ ಕುಳಿತು ಪ್ರಸ್ತುತ ಪಡಿಸಿದ್ದು, ಅನೂಹ್ಯ ಅನುಭವ ನೀಡಿತ್ತು. ಮೈ ರೋಮಾಂಚನಗೊಳಿಸಿತ್ತು ಎಂದು ಕಳೆದ ವರ್ಷ ಕಛೇರಿ ನೀಡಿದ ಖ್ಯಾತ ಕೊಳಲು ವಾದಕ ಪದ್ಮನಾಭ ಬಾಪು ಪುಳಕಿತರಾದವರಂತೆ ಅನುಭವ ಹಂಚಿಕೊಳ್ಳುತ್ತಾರೆ. ಕಿರಾನಾ ಘರಾನೆಯ ಮುಂದಿನ ಪೀಳಿಗೆ ವಾರಸುದಾರನೆಂದೇ ಪಂ. ಭೀಮಸೇನ ಜೋಶಿ ಅವರಿಂದಲೇ ಬೆನ್ನು ತಟ್ಟಿಸಿಕೊಂಡ ಪಂ. ಜಯತೀರ್ಥ ಮೇವುಂಡಿ ಕೂಡಾ ವಾಡೆದೊಳಗ ಕುಳಿತು ಹಾಡುವ ಅದ್ಭುತ ಅನುಭವ ಶಬ್ದಕ್ಕೆ ನಿಲುಕದು ಎನ್ನುತ್ತಾರೆ.
ಈ ಬಾರಿ ಇವರ 61ನೇ ಪುಣ್ಯ ತಿಥಿಯ ಸಂಗೀತೋತ್ಸವು 29ರಂದು ಸಾಯಂಕಾಲ 6 ಗಂಟೆಗೆ ನಡೆಯಲಿದ್ದು, ಅಂದು ಸವಾಯಿ ಗಂಧರ್ವರ ಸ್ಮರಣೆಯೊಂದಿಗೆ ಶ್ರೀಮಂತ ನಾನಾಸಾಹೇಬ ನಾಡಗೇರ ಅವರ ಸ್ಮೃತಿ ಸಂಗೀತೋತ್ಸವ ಅಹೋ ರಾತ್ರಿ ಸಂಗೀತೋತ್ಸವ ಜರುಗಲಿದೆ. ರಾಜ್ಯದ ಹಾಗೂ ಹೋರ ರಾಜ್ಯದ ಪ್ರಸಿದ್ದ ಕಲಾವಿದರು ಅತ್ಯಂತ ಭಕ್ತಿ ಪೂರ್ವಕವಾಗಿ ಬಂದು ವಾಡೆದಲ್ಲಿ ಸಂಗೀತ ಸೇವೆ ಸಲ್ಲಿಸಲಿದ್ದಾರೆ.
- ಶೀಥಲ ಎಸ್. ಮುರಗಿ