ಎಂಜಿನಿಯರಿಂಗ್ನಲ್ಲಿ ಜಿಯೋಟೆಕ್ನಿಕಲ್ಗೆ ಮಾತೃಸ್ಥಾನ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಸೆ. 28
ಎಂಜಿನಿಯರಿಂಗ್ ಕ್ಷೇತ್ರಕ್ಕೆ ಜಿಯೋಟೆಕ್ನಿಕಲ್ ಎಂಜಿನಿಯರಿಂಗ್ (ಭೂತಾಂತ್ರಿಕತೆ) ವಿಷಯ ಮಾತೃ ಸ್ಥಾನದಲ್ಲಿದ್ದು, ವಿವಿಧ ಶಾಖೆಯ ಎಂಜಿನಿಯರಿಂಗ್ ವಿಷಯಗಳಿಗೆ ಜಿಯೋಟೆಕ್ನಿಕಲ್ ಎಂಜಿನಿಯರಿಂಗ್ ಬುನಾದಿಯಾಗಿದೆ ಎಂದು ಲೋಕೋಪಯೋಗಿ ಇಲಾಖೆ ನಿವೃತ್ತ ಕಾರ್ಯದರ್ಶಿ ಜಿ.ಸಿ. ತಲ್ಲೂರ ಹೇಳಿದರು.
ಶನಿವಾರ ಬಿವಿಬಿ ಎಂಜಿನಿಯರಿಂಗ್ ಕಾಲೇಜು ಮತ್ತು ಜಿಯೋಟೆಕ್ನಿಕಲ್ ಸಹಯೋಗದಲ್ಲಿ ಆಯೋಜಿಸಿದ್ದ ಭೂ ತಾಂತ್ರಿಕತೆ ಒಂದು ಅಧ್ಯಯನ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಇಂದು ಕೈಗೆತ್ತಿಕೊಳ್ಳಲಾಗುತ್ತಿರುವ ಹಲವಾರು ಯೋಜನೆಗಳಲ್ಲಿ ಭೂ ತಾಂತ್ರಿಕತೆಯನ್ನು ನಿರ್ಲಕ್ಷಿಸಲಾಗುತ್ತಿದೆ. ಇದರ ಪರಿಣಾಮ ಯೋಜನೆಗಳಲ್ಲಿ ವೈಫಲ್ಯ, ವಿನಾಕಾರಣ ವೆಚ್ಚದಲ್ಲಿ ಹೆಚ್ಚಳವಾಗುವಿಕೆ, ವಿವಾದ ಉಂಟಾಗುತ್ತಿವೆ. ಮೂರ್ಖರಿಗೆ ಮಾತ್ರ ಇತಿಹಾಸದ ಪುನರಾವರ್ತನೆಯಾಗುತ್ತದೆ. ಹಿಂದೆ ಮಾಡಿದ ತಪ್ಪುಗಳಿಂದ ಕಲಿತು ಸುಧಾರಿಸಿಕೊಂಡರೆ ಮಾತ್ರ ಕೈಗೆತ್ತಿಕೊಂಡ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯ. ವೃತ್ತಿ ಜೀವನದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಯಶಸ್ಸು ಸಾಧಿಸಬೇಕು ಎನ್ನುವ ಛಲ ಇದ್ದರೆ ಭೂ ತಾಂತ್ರಿಕತೆ ವಿಷಯದ ಮಹತ್ವ ಅರಿತುಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಅತಿಥಿ ಎಚ್ಡಿಬಿಆರ್ಟಿಎಸ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ನೂರ್ ಮನ್ಸೂರ್ ಅವರು, ಕ್ಷೇತ್ರದಲ್ಲಿ ಎದುರಾಗುವ ಸಮಸ್ಯೆಗಳಿಗೆ ಎಂಜಿನಿಯರ್ಗಳು ಪರಿಹಾರ ಕಂಡುಕೊಳ್ಳಬೇಕು. ಶತಶತಮಾನಗಳಿಂದ ಮನೆಗಳನ್ನು ನಿರ್ಮಿಸುತ್ತಿರುವ ಸಾಮಾನ್ಯ ಮನುಷ್ಯನಿಂದ ಮಣ್ಣಿನ ಗುಣಧರ್ಮದ ಬಗ್ಗೆ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಜ್ಞಾನ ಪಡೆದುಕೊಳ್ಳಬೇಕು. ಸಿವಿಲ್ ಎಂಜಿನಿಯರಿಂಗ್ ಸಂಬಂಧಿಸಿದ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮುನ್ನ ಎಂಜಿನಿಯರ್ಗಳು ಪರಿಸರ ಕಾಯ್ದೆ, ಕಾರ್ಮಿಕ ಕಾನೂನು ಇತ್ಯಾದಿಗಳನ್ನು ತಿಳಿದುಕೊಳ್ಳುವುದು ಅಗತ್ಯ ಎಂದರು.
ಬಿವಿಬಿ ಕಾಲೇಜು ಪ್ರಾಚಾರ್ಯ ಅಶೋಕ ಶೆಟ್ಟರ್ ಅಧ್ಯಕ್ಷತೆ ವಹಿಸಿದ್ದರು. ಡಾ.ಎಸ್.ಎಸ್. ಖಾದ್ರಿ ಪ್ರಾಸ್ತಾವಿಕ ಮಾತನಾಡಿದರು. ಪ್ರೊ.ಎಂ.ಆರ್. ಪಾಟೀಲ ಸ್ವಾಗತಿಸಿದರು.