ಕಾರ್ಮಿಕರ ಸಮಸ್ಯೆ: ಹೋರಾಟವೇ ಮಾರ್ಗ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಸೆ. 30
ಕಾರ್ಮಿಕರ ಬೇಡಿಕೆಗಳು ಈಡೇರುವವರೆಗೆ ಹೋರಾಟ ನಡೆಸುವ ಅಗತ್ಯ ಇದೆ ಎಂದು ಮಾಜಿ ಸಚಿವ ಬಿ. ಸುಬ್ಬಯ್ಯ ಶೆಟ್ಟಿ ಹೇಳಿದರು.
ಡಾ. ಕೆ.ಎಸ್. ಶರ್ಮಾ ಅವರ 80ನೇ ಜನ್ಮದಿನದ ನಿಮಿತ್ತ ನಗರದ ಗೋಕುಲ ರಸ್ತೆಯ ಬಸವೇಶ್ವರ ನಗರದ ವಿಶ್ವಶ್ರಮ ಚೇತನ ಸಮೂಹ ಸಂಸ್ಥೆಯ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶೋಷಣೆಗೆ ಒಳಪಟ್ಟ ಜನಾಂಗದ ಧ್ವನಿಯಾಗಿರುವ ಡಾ. ಕೆ.ಎಸ್. ಶರ್ಮಾ ಜಗತ್ತಿನ ಪ್ರಮುಖ ಕ್ರಾಂತಿಕಾರಿ ಹೋರಾಟಗಾರರಲ್ಲಿ ಒಬ್ಬರು ಎಂದು ಅಭಿಪ್ರಾಯಪಟ್ಟರು.
ಕೆ.ಎಸ್. ಶರ್ಮಾ ಅವರು ಕೆಚ್ಚೆದೆಯ ಹೋರಾಟದಿಂದ ಸಾವಿರಾರು ದಿನಗೂಲಿ ನೌಕರರಿಗೆ ಸೇವಾ ಭದ್ರತೆ ಒದಗಿಸಿಕೊಟ್ಟ ಹುಟ್ಟು ಹೋರಾಟಗಾರ. ಹಣವಂತರ ಪರವಾಗಿರುವ ಇಂದಿನ ವ್ಯವಸ್ಥೆಯಲ್ಲಿ ಸಾವಿರಾರು ದಿನಗೂಲಿಗರು ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಯಿಂದ ಪಾರಾಗಲು ಹೋರಾಟವೊಂದೇ ಮಾರ್ಗವಾಗಿದ್ದು, ಡಾ. ಶರ್ಮಾ ಅವರೊಂದಿಗೆ ಕೈ ಜೋಡಿಸುವ ಅಗತ್ಯತೆ ಇದೆ ಎಂದರು.
ಸುಪ್ರಿಂ ಕೋರ್ಟ್ ನ್ಯಾಯವಾದಿ ಮೋಹನ ಕಾತರಕಿ ಮಾತನಾಡಿ, ಡಾ. ಕೆ.ಎಸ್. ಶರ್ಮಾ ತಮ್ಮ ಇಡೀ ಬದುಕನ್ನು ಕಾರ್ಮಿಕರ, ದುಡಿಯುವ ವರ್ಗದ ಏಳ್ಗೆಗೆ ಮೀಸಲಿಟ್ಟ ಜನಪರ ಹೋರಾಟಗಾರ ಎಂದರು. ಲೋಕಸಭೆಯಲ್ಲಿ ಶೇ. 40ರಷ್ಟು ಜನಪ್ರತಿನಿಧಿಗಳು ಕ್ರಿಮಿನಲ್ ಆರೋಪ ಎದುರಿಸುತ್ತಿದ್ದು ಅಂತಹವರಿಂದ ದುಡಿಯುವ ವರ್ಗದ ಅಭಿವೃದ್ಧಿ ಸಾಧ್ಯವಿಲ್ಲ. ತಮ್ಮ ಖುರ್ಚಿ ಉಳಿಸಿಕೊಳ್ಳುವುದಕ್ಕೆ ಬಂಡವಾಳಶಾಹಿಗಳ ಪರವಾಗಿ ವರ್ತಿಸುವ ಇಂತಹ ನಾಯಕರ ವಿರುದ್ಧ ಹೋರಾಟ ಅಗತ್ಯ ಇದೆ ಎಂದು ಆಂಧ್ರದ ಸಾಹಿತಿ ನಿಖಿಲೇಶ್ವರ ತಿಳಿಸಿದರು.
ಸಾಹಿತಿ ಜಗದೀಶ ಮಂಗಳೂರಮಠ ಮಾತನಾಡಿ, ಬಂಡವಾಳ ಶಾಹಿಗಳ, ಪುರೋಹಿತ ವರ್ಗದ ವ್ಯವಸ್ಥೆ ವಿರುದ್ಧ ಸಮರ ಸಾರುತ್ತಿರುವ ಕ್ರಾಂತಿಕಾರಿ ಹೋರಾಟಗಾರ ಡಾ. ಶರ್ಮಾ. ನಮ್ಮ ನ್ಯಾಯಾಂಗ ವ್ಯವಸ್ಥೆ ದುಡಿಯುವ ವರ್ಗದ ವಿರುದ್ಧವಾಗಿದ್ದು, ಈ ವ್ಯವಸ್ಥೆಯನ್ನು ಕಿತ್ತೊಗೆಯುವ ಅಗತ್ಯ ಇದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯಶಾಸ್ತ್ರಜ್ಞ ಕೆ. ರಾಘವೇಂದ್ರರಾವ್ ಮಾತನಾಡಿ, ಸಾರ್ಥಕ ಜೀವನ ಕಳೆದ ಶರ್ಮಾ ಅವರ ಬದುಕಿನಂತೆ ಎಲ್ಲರೂ ನಡೆಯುವ ಅಗತ್ಯ ಇದೆ ಎಂದರು.
ಡಾ. ಕೆ.ಎಸ್. ಶರ್ಮಾ ವಿರಚಿತ ಮಹಾ ಪ್ರಬಂಧ 'ರಾಜ್ಯ ವ್ಯವಸ್ಥೆ; ಮಾರ್ಕ್ಸ್ವಾದಿ ದೃಷ್ಟಿಕೋನ' ಕೃತಿಯನ್ನು ಇದೇ ವೇಳೆ ಅತಿಥಿಗಳು ಬಿಡುಗಡೆ ಮಾಡಿದರು.
ಚೆನ್ನೈನ ಅರ್ಥಶಾಸ್ತ್ರಜ್ಞ ಡಾ. ವಿ.ಶಿವ ಪ್ರಕಾಶಮ್, ಡಾ. ವಾಮನ ಬೇಂದ್ರ, ಪತ್ರಕರ್ತ ಶಿವಾನಂದ ಜೋಶಿ, ಡಾ. ಶ್ಯಾಮಸುಂದರ ಬಿದರಕುಂದಿ, ಡಾ. ಜಿ. ಕೃಷ್ಣಮೂರ್ತಿ, ಡಾ.ಎಸ್.ಎಸ್. ಪಟಗುಂಡಿ, ಡಾ.ಕಲಾಶೇಖರ ಪೂಜಾರ, ಬಿ.ಎಫ್. ವಿಜಾಪುರ, ಡಾ. ಬಾಪುಜಿ, ಪ್ರಕಾಶ ಪ್ರಭು ಹಾಜರಿದ್ದರು.