ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ನಾಪತ್ತೆ ಪ್ರಕರಣ ಗಣನೀಯ ಇಳಿಕೆ

Mainashree
Updated On : 1 Oct 2013, 10:39 am

 ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಸೆ. 30
ಸಾಂಸ್ಕೃತಿಕ ರಾಜಧಾನಿ, ವಿದ್ಯಾಕಾಶಿ, ಸಾಹಿತಿಗಳ ನೆಲವೀಡು ಎಂಬೆಲ್ಲಾ ಖ್ಯಾತಿ ಹೊಂದಿರುವ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಪುರುಷ, ಮಹಿಳೆ, ಯುವಕ, ಯುವತಿಯರ ನಾಪತ್ತೆ ಪ್ರಕರಣಗಳು ಮಿತಿ ಮೀರಿದ್ದವು. ಆದರೆ, ಪ್ರಸಕ್ತ ವರ್ಷ ಈ ಪ್ರಮಾಣ ಇಳಿಮುಖಗೊಂಡಿರುವುದು ಸಮಾಧಾನದ ಸಂಗತಿ.
ನಿಜ, ಹುಬ್ಬಳ್ಳಿ-ಧಾರವಾಡ ತನ್ನದೇ ಆದ ಸಂಸ್ಕೃತಿಯಿಂದಾಗಿ ರಾಜ್ಯದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿ ಗುರುತಿಸಿಕೊಂಡಿದೆ. ಆದರೆ, ಆಧುನಿಕತೆಯ ಅಬ್ಬರವೋ, ಸಂಸ್ಕೃತಿ ಪಾಠದ ಕೊರತೆಯಿಂದಾಗಿಯೋ ಹು-ಧಾದಲ್ಲಿ 2011-12ನೇ ಸಾಲಿನಲ್ಲಿ ಸಾಕಷ್ಟು ನಾಪತ್ತೆ ಪ್ರಕರಣಗಳು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದವು. ಇಂಥ ಪ್ರಕರಣಕ್ಕೆ ಪ್ರೀತಿ-ಪ್ರೇಮ-ಪ್ರಣಯ, ಅನೈತಿಕ ಸಂಬಂಧ ಪ್ರಮುಖ ಕಾರಣವಾಗಿದ್ದವು ಎಂಬುದು ಆತಂಕದ ವಿಷಯ. ಆದರೆ, ಪೊಲೀಸ್ ದಾಖಲೆಯ ಪ್ರಕಾರ ನಾಪತ್ತೆಯಂತಹ ಪ್ರಕರಣಗಳು ಈ ವರ್ಷ ತಗ್ಗಿರುವುದು ಹು-ಧಾದ ಗೌರವು ಉಳಿಯುವಂತೆ ಮಾಡಿದೆ.  
ವರ್ಷವಾರು ಇಳಿಕೆ: ಪೊಲೀಸ್ ಇಲಾಖೆಯಲ್ಲಿ ದಾಖಲಾದ ನಾಪತ್ತೆ ಪ್ರಕರಣದ ಮೂರು ವರ್ಷಗಳ ಪಟ್ಟಿಯ ಮೇಲೆ ಕಣ್ಣು ಹಾಯಿಸಿದರೆ ವರ್ಷದಿಂದ ವರ್ಷಕ್ಕೆ ಈ ಪ್ರಮಾಣ ತಗ್ಗಿದೆ. 2011ರಲ್ಲಿ ಒಟ್ಟು 203 ನಾಪತ್ತೆ ಪ್ರಕರಣ ದಾಖಲಾಗಿತ್ತು. ಇದೇ ವೇಳೆ 2012ಕ್ಕೆ ಈ ಸಂಖ್ಯೆ 162ಕ್ಕೆ ಇಳಿಮುಖವಾದರೆ, 2013ರ ಸೆಪ್ಟೆಂಬರ್ ವರೆಗೆ ಕೇವಲ 80 ಪ್ರಕರಣಕ್ಕೆ ಕುಸಿದಿರುವುದು ಸಂತಸದ ಸಂಗತಿ.
ಇಲ್ಲಿ ಗಮನಾರ್ಹ ಸಂಗತಿಯೆಂದರೆ 2011ರಲ್ಲಿ 65 ಪುರುಷ, 70 ಮಹಿಳೆ, 31 ಯುವಕ ಹಾಗೂ 37 ಯುವತಿ ನಾಪತ್ತೆಯಾದ ಬಗ್ಗೆ ವರದಿಯಾಗಿತ್ತು. 2012ರಲ್ಲಿ 57 ಪುರುಷ, 65 ಮಹಿಳೆ, 25 ಯುವಕ ಹಾಗೂ 15 ಯುವತಿಯರು ನಾಪತ್ತೆಯಾಗಿದ್ದ ಬಗ್ಗೆ ಪ್ರಕರಣ ದಾಖಾಗಿತ್ತು. ಇದೇ ವೇಳೆ 2013ರ ಸೆಪ್ಟೆಂಬರ್ ವರೆಗೆ 52 ಪುರುಷ, 19 ಮಹಿಳೆ, 11 ಯುವಕರು ನಾಪತ್ತೆಯಾದ ಬಗ್ಗೆ ವರದಿಯಾಗಿದ್ದರೆ, ಯುವತಿಯರು ನಾಪತ್ತೆಯಾದ ಬಗ್ಗೆ ಒಂದೇ ಒಂದು ದೂರು ದಾಖಲಾಗಿಲ್ಲ. ಈ ಪಟ್ಟಿಯ ಮೇಲೆ ಕಣ್ಣು ಹಾಯಿಸಿದರೆ ಯುವಕ-ಯುವತಿಯರಿಗಿಂತ ಹೆಚ್ಚಾಗಿ ಪುರುಷ-ಮಹಿಳೆಯರು ನಾಪತ್ತೆಯಾದ ಬಗ್ಗೆಯೇ ಹೆಚ್ಚಿನ ಪ್ರಕರಣ ದಾಖಲಾಗಿವೆ.
ಪತ್ತೆಯಾದಾಗ: ನಾಪತ್ತೆ ಪ್ರಕರಣದ ಪೈಕಿ ಪೊಲೀಸರು 2011ರಲ್ಲಿ 173 ಜನರನ್ನು ಪತ್ತೆ ಮಾಡಿದ್ದರೆ, 2012ರಲ್ಲಿ 132 ಹಾಗೂ 2013ರಲ್ಲಿ 52 ಜನರಲ್ಲಿ ಪತ್ತೆ ಹಚ್ಚುವಲ್ಲಿ ಸಫಲರಾಗಿದ್ದಾರೆ. ಅವಳಿ ನಗರದ ಪೊಲೀಸರು ನಾಪತ್ತೆಯಾದವರನ್ನು ಪತ್ತೆ ಹಚ್ಚಿದಾಗ ಬಹುಪಾಲು ಜನ ಪ್ರೀತಿ, ಪ್ರೇಮ ಅದಕ್ಕಿಂತ ಮುಖ್ಯವಾಗಿ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಓಡಿ ಹೋದವರೇ ಹೆಚ್ಚಾಗಿದ್ದಾರೆ.
ಪ್ರೇಮಿಗಳು ಮನೆ ಬಿಟ್ಟು ಹೋದಾಗ ಪಾಲಕರು ಯುವತಿ-ಯುವಕ ಕಾಣೆಯಾಗಿರುವ ಬಗ್ಗೆ ಪರಸ್ಪರ ಪ್ರಕರಣ ದಾಖಲಿಸಿರುವ ಸಂಖ್ಯೆ ಹೆಚ್ಚಿದೆ. ಪ್ರೇಮ ಪ್ರಕರಣಗಳು ಬಹುಪಾಲು ಸುಖಾಂತ್ಯ ಕಂಡಿವೆ. ಮನೆಯಿಂದ ಓಡಿ ಹೋಗಿ ಮದುವೆಯಾಗಿ ಅವರು ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ.
ಇನ್ನೊಂದು ಕಳವಳಕಾರಿ ಸಂಗತಿಯೆಂದರೆ ಮಹಿಳೆ-ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಕಾಣೆಯಾಗಿದ್ದಾರೆ. ಈ ಪ್ರಕರಣದಲ್ಲಿ ಮಹಿಳೆಯರು ಹಾಗೂ ಪುರುಷರು ಅನೈತಿಕ ಸಂಬಂಧಿವಿಟ್ಟುಕೊಂಡು ಮನೆ ಬಿಟ್ಟು ಹೋಗಿದ್ದೇ ಹೆಚ್ಚಿನ ಸಂಖ್ಯೆಯಲ್ಲಿದೆ. ಹದಿಹರೆಯದಲ್ಲಿ ಯುವಕ-ಯುವತಿಯರು ತಪ್ಪು ಮಾಡಿದರೆ ಅರಿಯದೆ ತಪ್ಪು ಮಾಡಿದರು ಎನ್ನಬಹುದು. ಆದರೆ, ಮದುವೆಯಾದ ಬಳಿಕವೂ ಕಾಮನೆಯಿಟ್ಟು ಕೊಂಡು ಬಾಳ ಸಂಗಾತಿಯನ್ನು ತೊರೆದು ನಾಪತ್ತೆ ಆಗುತ್ತಿರುವುದು ಆತಂಕಕಾರಿ ಬೆಳವಣಿಗೆ.
ತನ್ನ ವಿಶಿಷ್ಟ ಸಂಸ್ಕೃತಿಯಿಂದ ಇಡೀ ರಾಜ್ಯಕ್ಕೆ ಮಾದರಿಯಾಗಿ ನಿಂತಿರುವ ಧಾರವಾಡ-ಹುಬ್ಬಳ್ಳಿಯಲ್ಲಿ ಅನೈತಿಕತೆಯಂತಹ ಪ್ರಕರಣಗಳು ವರದಿಯಾಗುತ್ತಿರುವುದು ಅವಳಿನಗರದ ಗೌರವಕ್ಕೆ ಚ್ಯುತಿ ಬಂದೊಗುವಂತೆ ಮಾಡಿದೆ. ಆದರೆ, ಈ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಸಾಗಿರುವುದು ಸಮಾಧಾನಕರ.


ಪ್ರಕಾಶ ಎಸ್. ಶೇಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement