ಸಾಮಾಜಿಕ ಆಂದೋಲನದಿಂದ ಕಾವ್ಯ ಕ್ರಾಂತಿಕಾರಕ
ಕನ್ನಡಪ್ರಭ ವಾರ್ತೆ, ಧಾರವಾಡ, ಸೆ. 30
ಕಾವ್ಯ ಯಾವುದೇ ಸಾಮಾಜಿಕ ಆಂದೋಲನಕ್ಕೆ ಮಾರ್ಗದರ್ಶನ ನೀಡುವ ಧಾಟಿಯಲ್ಲಿ ಪ್ರಕಟವಾದಾಗ ಕ್ರಾಂತಿಕಾರಕ ಎನಿಸುತ್ತದೆ ಎಂದು ಕವಿ ಹಾಗೂ ಹೋರಾಟಗಾರ ಯಾದವ ರೆಡ್ಡಿ ಇಲ್ಲಿ ಪ್ರತಿಪಾದಿಸಿದರು.
ಬೇಂದ್ರೆ ಭವನದಲ್ಲಿ ಜರುಗಿದ ಗೆಳೆಯರ ಗುಂಪು ಸಾಹಿತ್ಯ ಸಂವಾದದಲ್ಲಿ ಅವರು 'ಕವಿತೆ ಕ್ರಾಂತಿಯ ಹರಿಕಾರ' ಕುರಿತು ಮಾತನಾಡಿದರು.
ಜನತೆಯ ಜಡಗೊಂಡ ಮನಸ್ಥಿತಿ ಮತ್ತು ಯಾಥಾಸ್ಥಿತಿಯ ರಕ್ಷಕರಾದ ಆಳುವವವರನ್ನು ಮತ್ತೆ ಮತ್ತೆ ಎಚ್ಚರಿಸುವ, ಚುರುಕು ಮುಟ್ಟಿಸಿ ನ್ಯಾಯಪರ ರೀತಿ, ನೀತಿಗಳು ಜಾರಿಗೆ ಬರುವಂತೆ ಕ್ರಾಂತಿಕಾರಿ ಕವಿ ಅಂತಃಕರಣಪೂರಕವಾಗಿ ಧ್ವನಿಯೆತ್ತುತ್ತಾನೆ ಎಂದರು.
ಆಂಧ್ರದಲ್ಲಿ 40 ವರ್ಷಗಳ ಹಿಂದೆ ಶುರುವಾದ ದಿಗಂಬರ ಕವಿಗಳ ಆಂದೋಲನ ಆಳುವ ವರ್ಗದ ಹಿಡಿತದಿಂದ ಸಾಮಾನ್ಯ ವರ್ಗವನ್ನು ಮುಕ್ತಗೊಳಿಸುವುದಾಗಿದೆ. ದೇಶಕ್ಕೆ ಸಿಕ್ಕ ಸ್ವಾತಂತ್ರ್ಯ ಜನತೆಯ ಕೈಗೆ ಬರದೇ ವೈಯಕ್ತಿಕ ಹಿತಾಸಕ್ತಿ ಮತ್ತು ಅಧಿಕಾರಶಾಹಿ ನೀತಿಯ ಒಂದು ವರ್ಗಕ್ಕೆ ಹಸ್ತಾಂತರವಾಗಿದೆ. ಇದರಿಂದ ಭಾರತದ ಯಾವ ಸಾಮಾನ್ಯ ಸಮಸ್ಯೆಗಳೂ ಪರಿಹಾರವಾಗದೇ ವಿದೇಶಗಳಿಗೆ ಭಾರತ ಅಡವು ಇಡುವ ಪರಿಸ್ಥಿತಿ ಬಂದಿದೆ. ಹೀಗಿರುವಾಗ ಕವಿ ಕ್ರೋಧದಿಂದ, ಜನಪರ ಧ್ವನಿಯನ್ನು ಎತ್ತಿ ಜನಗಳಲ್ಲಿ ಆತ್ಮಗೌರವ ಜಾಗರೂಕಗೊಳಿಸಬೇಕಾಗಿದೆ ಎಂದು ರೆಡ್ಡಿ ಹೇಳಿದರು.
ಬಳಿಕ ನಡೆದ ಸಂವಾದದಲ್ಲಿ ಕವಿಗಳಾದ ಚನ್ನಪ್ಪ ಅಂಗಡಿ, ಚಂದ್ರಶೇಖರ್ ಬೆಂಗಳೂರು, ವಿ.ಜಿ. ತಿಗರಿ, ಡಾ ವಿ.ಬಿ. ಆಚಾರ್ಯ ಭಾಗವಹಿಸಿದ್ದರು. ಡಾ ಕೆ. ರಾಘವೇಂದ್ರಾವ್, ಡಾ ವಾಮನ ಬೇಂದ್ರೆ, ಧೋಂಗಡಿ, ಬಂಗಾರಿಮಠ, ಡಾ. ಶಾಂತಾ ಸಣ್ಣೆಲ್ಲಪ್ಪನವರ, ಜಿ.ಬಿ. ಹೊಂಬಳ ಹುದ್ದಾರ, ಆನಂದ ಜಕ್ಕಣ್ಣವರ, ಹೊಸಮನಿ ಇದ್ದರು. ಟ್ರಸ್ಟ್ ಅಧ್ಯಕ್ಷ ಡಾ ಶ್ಯಾಮಸುಂದರ ಬಿದರಕುಂದಿ ಸ್ವಾಗತಿಸಿದರು. ಡಾ ಕೆ.ಎಸ್. ಶರ್ಮಾ ಪರಿಚಯಿಸಿದರು. ನರಸಿಂಹ ಪರಾಂಜಪೆ ವಂದಿಸಿದರು.