ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಸುದ್ದಿ ಸಂಕ್ಷೇಪ

Mainashree
Updated On : 1 Oct 2013, 10:40 am

ಧಾರವಾಡ ಬಳಿ ಉರುಳಿದ ಖಾಸಗಿ ಬಸ್
ಧಾರವಾಡ: ಸಮೀಪದ ನುಗ್ಗಿಕೇರಿ ಬಳಿ ಕಲಘಟಗಿ ರಸ್ತೆಯಲ್ಲಿ ಖಾಸಗಿ ಬಸ್ಸೊಂದು ಆಕಸ್ಮಿಕವಾಗಿ ಉರುಳಿಬಿದ್ದ ಘಟನೆ ಸೋಮವಾರ ರಾತ್ರಿ 11ರ ಸುಮಾರಿಗೆ ನಡೆದಿದೆ. ಬೆಳಗಾವಿಯಿಂದ ಧಾರವಾಡ ಮಾರ್ಗವಾಗಿ ಮಂಗಳೂರಿಗೆ ತೆರಳುತ್ತಿದ್ದ ದುರ್ಗಾಂಬಾ ಟ್ರಾವೆಲ್ಸ್ ಬಸ್ ಚಾಲಕನ ನಿರ್ಲಕ್ಷ್ಯದಿಂದ ತಿರುವಿನಲ್ಲಿ ಉರುಳಿಬಿದ್ದಿದೆ. ಬಸ್‌ನಲ್ಲಿ ಸುಮಾರು 25 ಪ್ರಯಾಣಿಕರಿದ್ದರು. ಘಟನೆಯಲ್ಲಿ ಓರ್ವ ಪ್ರಯಾಣಿಕ ತೀವ್ರವಾಗಿ ಗಾಯಗೊಂಡಿದ್ದು, ಸುಮಾರು 1 ಗಂಟೆಗೂ ಕಾಲ ಬಸ್ ಅಡಿಯಲ್ಲಿ ಸಿಲುಕಿಕೊಂಡಿದ್ದನು. ಕ್ರೇನ್ ಮೂಲಕ ಬಸ್ ಎತ್ತಿದ ಬಳಿಕ ಆತನನ್ನು ಹೊರತೆಗೆಯಲಾಯಿತು. ಉಳಿದ ಪ್ರಯಾಣಿಕರಿಗೆ ಚಿಕ್ಕಪುಟ್ಟ ಗಾಯಗಳಾವೆ. ಗಾಯಗೊಂಡವರಿಗೆ ನಗರದ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಕುರಿತು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
10 ಜೂಜುಕೋರರ ಸೆರೆ
ಧಾರವಾಡ: ತಾಲೂಕಿನ ಅಂಬ್ಲಿಕೊಪ್ಪ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ಭಾನುವಾರ ರಾತ್ರಿ ಕಾರ್ಯಾಚರಣೆ ಪೊಲೀಸರು ನಡೆಸಿ ಇಸ್ಪೀಟ್ ಜೂಜಾಟದಲ್ಲಿ ನಿರತರಾಗಿದ್ದ 11 ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂಬ್ಲಿಕೊಪ್ಪ ಸಮೀಪದ ಅರಣ್ಯ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ಜೂಜಾಟ ಅಡ್ಡೆಯ ಮೇಲೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಹುಬ್ಬಳ್ಳಿ, ಧಾರವಾಡ, ಅತ್ತಿಗೇರಿಯ ಒಟ್ಟು 11 ಜನರನ್ನು ಬಂಧಿಸಿ ಅವರಿಂದ ರು. 2,30,945 ವಶಪಡಿಸಿಕೊಂಡಿದ್ದಾರೆ. ಸುರೇಶ ಹೂಗಾರ, ಮರಿಯಪ್ಪ ಹಳೆಮನಿ, ಕೃಷ್ಣಾ ಶಿವಳ್ಳಿ, ಕೃಷ್ಣ ಮೋಹಿತೆ, ಗುರುನಾಥ ಲಮಾಣಿ, ನಿಸಾರಅಹ್ಮದ್ ಬಟಗುರ್ಕಿ, ಮುತ್ತುಗೌಡ ಪಾಟೀಲ, ಸತೀಶ ಪೂಜಾರ, ಸಂತೋಷ ನಾಯ್ಕರ, ಖಲೀಲಅಹ್ಮದ್ ಗೋಕಾಕ ಮತ್ತು ಮಾರುತಿ ಗಳಗನಾಥ ಎಂಬುವರೇ ಬಂಧಿತರು. ಬಂಧಿತರಿಂದ ನಗದು ಮಾತ್ರವಲ್ಲದೇ, ನಾಲ್ಕು ದ್ವಿಚಕ್ರ ವಾಹನ, 12 ಮೊಬೈಲ್ ಸಹ ಅಳ್ನಾವರ ಪೊಲೀಸ್ ಠಾಣೆ ಪೊಲೀಸರ ವಶವಾಗಿವೆ. ಪಿಎಸ್‌ಐ ಮುರಘೇಶ ಚನ್ನಣ್ಣವರ, ಸಿಬ್ಬಂದಿ ಸಮೀರ ಮುಲ್ಲಾ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ರವೀಂದ್ರಗೌಡ ಕಲ್ಲನಗೌಡ್ರ
ಧಾರವಾಡ: ಇಲ್ಲಿಯ ಸಾಯಿನಗರದ ನಿವಾಸಿ ರವೀಂದ್ರಗೌಡ ಬಸನಗೌಡ ಕಲ್ಲನಗೌಡ್ರ (50) ಭಾನುವಾರ ಹೃದಯಾಘಾತದಿಂದ ನಿಧನ ಹೊಂದಿದರು. ಕರ್ನಾಟಕ ವಿಕಾಸ ಬ್ಯಾಂಕಿನ ಉದ್ಯೋಗಿಯಾಗಿದ್ದ ಅವರಿಗೆ ಪತ್ನಿ, ಓರ್ವ ಪುತ್ರಿ ಹಾಗೂ ಪುತ್ರ ಇದ್ದಾರೆ. ಮೂಲತಃ ಗದಗ ಜಿಲ್ಲೆಯ ನರಗುಂದ ತಾಲೂಕಿನ ಸುರಕೋಡ ಗ್ರಾಮದವರಾದ ರವೀಂದ್ರಗೌಡರ ನಿಧನಕ್ಕೆ ಬ್ಯಾಂಕಿನ ಅಧ್ಯಕ್ಷ ಹಾಗೂ ಸಿಬ್ಬಂದಿ ಸಂತಾಪ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement