ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಏ. 2ರಿಂದ ಮಾರುತಿ ಜಾತ್ರಾ ಮಹೋತ್ಸವ

Vishwanath S
Updated On : 2 Apr 2014, 11:16 am

ಹುಬ್ಬಳ್ಳಿ: ನಾಗಶೆಟ್ಟಿಕೊಪ್ಪ ಶ್ರೀ ಮಾರುತಿ ಜಾತ್ರಾ ಮಹೋತ್ಸವ ಏ. 2ರಿಂದ 17ರವರೆಗೆ ನಡೆಯಲಿದ್ದು, ನಿತ್ಯ ಹತ್ತು ಹಲವು ಭಕ್ತಿಪ್ರದಾನ, ಸ್ಪರ್ಧಾತ್ಮಕ, ವಿದ್ಯಾರ್ಥಿಗಳಿಗೆ ಪೂರಕವಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಾತ್ರಾ ಸಮಿತಿ ಅಧ್ಯಕ್ಷ ಪೀರಾಜಿ ಖಂಡೇಕಾರ ತಿಳಿಸಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,  ಜಾತ್ರಾ ಮಹೋತ್ಸವ ತಲೆತಲಾಂತರದಿಂದ ಸಂಭ್ರಮವಾಗಿ ನಡೆಯುತ್ತ ಬಂದಿದೆ. ಚುನಾವಣಾ ನೀತಿಸಂಹಿತೆ ಜಾರಿಯಿಂದಾಗಿ ಪ್ರಸಕ್ತ ವರ್ಷ ಸಾಮೂಹಿಕ ವಿವಾಹ ಕೈಬಿಡಲಾಗಿದ್ದು, ಇನ್ನುಳಿದ ಕಾರ್ಯಕ್ರಮಗಳು ಸಂಭ್ರಮದಿಂದ ನಡೆಯಲಿವೆ. ಭಕ್ತರನ್ನು ಸನ್ಮಾರ್ಗದಲ್ಲಿ ಕರೆದೊಯ್ಯುವ ನಿಟ್ಟಿನಲ್ಲಿ ಏ. 2 ರಿಂದ 12ರ ವರೆಗೆ ನಿತ್ಯ ಸಂಜೆ 6 ಗಂಟೆಗೆ ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿಯವರಿಂದ ಪ್ರವಚನ ಕಾರ್ಯಕ್ರಮ ನಡೆಯಲಿದೆ. ಜತೆಗೆ ಶ್ರೀಕಾಂತ ಬಾಕಳೆ ಹಾಗೂ ರಾಜಶೇಖರ ಮಾಣಿಕ್ಯಂ ಅವರಿಂದ ಭಕ್ತಿಗೀತೆ ಗಾಯನ ನಡೆಯಲಿದೆ.  ಏ. 2ರಂದು ಸಂಜೆ 6.30ಕ್ಕೆ ಜಾತ್ರೆ ಉದ್ಘಾಟನೆಗೊಳ್ಳಲಿದೆ. ಇಂಚಲ ಕ್ಷೇತ್ರದ ಶಿವಾನಂದ ಭಾರತಿ ಸ್ವಾಮೀಜಿ, ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಮನ್ಸೂರ ಮಠದ ಬಸವರಾಜ ದೇವರು ಸಾನ್ನಿಧ್ಯ ವಹಿಸುವರು. ಪ್ರದ್ಯುಮ್ನಾಚಾರ್ಯ ಜೋಶಿ, ಬಸವರಾಜ ಗುರಿಕಾರ, ವಿ.ಎಸ್.ವಿ. ಪ್ರಸಾದ, ಬಸವಣ್ಣೆಪ್ಪ ಮೆಣಸಿನಕಾಯಿ ಮತ್ತಿತರರು ಪಾಲ್ಗೊಳ್ಳುವರು. ಏ. 15ರಂದು ಸಂಜೆ 5.30ಕ್ಕೆ ರಥೋತ್ಸವ ನಡೆಯಲಿದೆ. ಮೂರು ಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ, ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ, ಸುಳ್ಳದ ರಮಾನಂದ ಸ್ವಾಮೀಜಿ ಪಾಲ್ಗೊಳ್ಳುವರು. ಇದರೊಟ್ಟಿಗೆ ನಿತ್ಯ ಪ್ರಸಾದ ವಿತರಣೆ, ಗಣ್ಯರಿಗೆ ಸನ್ಮಾನ ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದು ಖಂಡೇಕಾರ ತಿಳಿಸಿದರು. ನೀತಿ ಸಂಹಿತೆ ಹೆಸರಲ್ಲಿ ಪರಂಪರಾಗತವಾಗಿ ನಡೆದುಕೊಂಡು ಬಂದಿರುವ ಸಾಮೂಹಿಕ ವಿವಾಹಕ್ಕೆ ಅಡ್ಡಿಯಾಗಿರುವುದು ಬೇಸರ ತಂದಿದೆ. ಜಿಲ್ಲಾಧಿಕಾರಿಗೆ ಮನವಿ ಮಾಡಿದರೂ ಅವಕಾಶ ಮಾಡಿಕೊಡದಿರುವುದು ಭಕ್ತರಿಗೆ ನೋವಾಗಿದೆ. ಜಾತ್ರಾ ಮಹೋತ್ಸವದಲ್ಲಿ ರಾಜಕೀಯ ನುಸುಳುವ ಸಾಧ್ಯತೆ ಕಡಿಮೆ. ಹಾಗೊಂದು ವೇಳೆ ಸಾಧ್ಯತೆ ಇದ್ದಲ್ಲಿ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬಹುದಾಗಿತ್ತು ಎಂದರು. ಬಸವಣ್ಣೆಪ್ಪ ಮೆಣಸಿನಕಾಯಿ, ಮಹಾದೇವಪ್ಪ ಹುಲಸೋಗಿ, ವಸಂತ ಅಗಸಿನಮನಿ, ಅಡಿವೆಪ್ಪ ಹುಲಿಕಟ್ಟಿ, ರಾಜಕುಮಾರ ಕಟ್ಟಿಮನಿ, ಹನುಮಂತಪ್ಪ ಹಣಗಿ  ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement